ದೇಶದ ಆರ್ಥಿಕ ಪ್ರಗತಿಗೆ ವೇಗ ಕೊಡುವ, ನಮ್ಮ ಅರ್ಥ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭ ಎನಿಸಿದ ಬ್ಯಾಂಕಿಂಗ್ ಕ್ಷೇತ್ರ ಇಂದು ಭಾರೀ ಪ್ರಮಾಣದ ವಾಪಸಾಗದ ಸಾಲದ ಕಾರಣದಿಂದಾಗಿ ಅಲುಗಾಡುತ್ತಿದೆ. ಸಾಲದ ಕಂತನ್ನು ಕ್ಲಪ್ತ ಕಾಲಕ್ಕೆ ಕಟ್ಟುವುದು ತಮ್ಮ ನೈತಿಕ ಹೊಣೆಗಾರಿಕೆ ಎಂದು ತಿಳಿಯುವ ಗ್ರಾಹಕರ ಬದ್ಧತೆಯಲ್ಲಾಗಿರುವ ಕುಸಿತ ಬ್ಯಾಂಕಿಂಗ್ ವ್ಯವಸ್ಥೆ ಹಳಿ ತಪ್ಪಲು ಪ್ರಮುಖ ಕಾರಣ ಗಳಲ್ಲೊಂದು ಎನ್ನಬಹುದು. ಸಾಲ ವಸೂಲಿ ಪ್ರಕ್ರಿಯೆ ಯಲ್ಲಿ ಭಾಗವಹಿಸುವ ಅಧಿಕಾರಿಗಳು ಮತ್ತು ಸಿಬಂದಿ ವರ್ಗ ಬೆದರಿಕೆ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳಕ್ಕೊಳಗಾಗುತ್ತಿರುವುದು ಸಾಮಾನ್ಯವಾಗಿದೆ.
ಸಾಲಗಾರರು ಆತ್ಮಹತ್ಯೆ ಮಾಡಿಕೊಂಡ ಸಂದ ರ್ಭಗಳಲ್ಲಿ ಸಾಲದ ಕಂತು ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ಹೇರಿದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ವ್ಯಾಖ್ಯಾನಿಸಿ ಸಂಬಂಧಿತ ಬ್ಯಾಂಕ್ ಅಧಿಕಾರಿಗಳನ್ನು ಬಲಿಪಶು ಮಾಡಲಾದ ಉದಾ ಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ರೈತರು ಮತ್ತು ಸಣ್ಣ ವ್ಯಾಪಾರಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಬ್ಯಾಂಕ್ ಸಿಬಂದಿ, ಮಾಧ್ಯಮಗಳು, ಸಾರ್ವಜನಿಕರು ಮತ್ತು ರಾಜಕಾರಣಿಗಳ ಆಕ್ರೋಶಕ್ಕೆ ಸಿಲುಕಿ ಮಾನಸಿಕ ಹಿಂಸೆಗೊಳಗಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟಿನ ನಾಗಪುರ ಪೀಠ ಇತ್ತೀಚೆಗೆ ಸಾಲ ವಸೂಲಿ ಬ್ಯಾಂಕ್ ನೌಕರನ ಕರ್ತವ್ಯದ ಭಾಗ ಮತ್ತು ಗ್ರಾಹಕನನ್ನು ಸಾಲ ಮರುಪಾವತಿ ಮಾಡುವಂತೆ ಕೇಳುವುದನ್ನು ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಎಂದು ಪರಿಗಣಿಸಲಾಗದು ಎಂದು ನೀಡಿದ ತೀರ್ಪು ಗಮನಾರ್ಹ. ಈ ತೀರ್ಪು ಬ್ಯಾಂಕ್ ಮತ್ತು ಅಲ್ಲಿ ದುಡಿಯುತ್ತಿರುವ ಅಧಿಕಾರಿಗಳು ಮತ್ತು ಸಿಬಂದಿ ವರ್ಗಕ್ಕೆ ಒಂದಿಷ್ಟು ನಿರಾಳತೆಯ ಭಾವ ಮೂಡುವಂತೆ ಮಾಡಿದೆ.
ದೇಶದ ಔದ್ಯೋಗಿಕ ಬೆಳವಣಿಗೆಗೆ ಬೇಕಾದ ಬಂಡವಾಳ ಒದಗಿಸುವ ವಿತ್ತೀಯ ಸಂಸ್ಥೆಗಳ ಸಂಪನ್ಮೂಲದ ಮುಖ್ಯ ಸ್ರೋತ ವಿಶಾಲ ಮಧ್ಯಮ ವರ್ಗದ ಉಳಿತಾಯ. ಬ್ಯಾಂಕ್ ಠೇವಣಿದಾ ರರಲ್ಲಿ ನಿವೃತ್ತ ಹಿರಿಯ ನಾಗರಿಕರು, ಸಣ್ಣ ಉಳಿತಾಯ ಗಾರರು, ಗೃಹಿಣಿಯರು, ಠೇವಣಿಯ ಮೇಲಿನ ಬಡ್ಡಿಯನ್ನು ಆಶ್ರಯಿಸಿ ಬದುಕು ಸಾಗಿಸುತ್ತಿರುವ ಕೆಳ, ಮಧ್ಯಮ ವರ್ಗದವರೇ ಹೆಚ್ಚಾಗಿರುತ್ತಾರೆ. ಬ್ಯಾಂಕ್ ಠೇವಣಿ ಎಂದರೆ ಮಧ್ಯಮ ವರ್ಗ ತಮ್ಮ ಬದುಕಿನ ಕಠಿನ ದುಡಿಮೆಯನ್ನು ಆಪತ್ತಿನ ಸಮಯಕ್ಕೆಂದು ಬ್ಯಾಂಕ್ ಸುಪರ್ದಿಗೆ ನೀಡಿದ ಹಣ. ಬ್ಯಾಂಕ್ ಮೇಲೆ ಪೂರ್ಣ ನಂಬಿಕೆಯಿಂದ ಠೇವಣಿಯಾಗಿ ಇರಿಸಿದ ಹಣವನ್ನು ಕಾಪಾಡುವುದು ಬ್ಯಾಂಕ್ ಸಿಬಂದಿಯ ಕರ್ತವ್ಯ. ಕೊಟ್ಟ ಸಾಲ ಮರುಪಾವತಿಯಾಗದಿದ್ದರೆ ಠೇವಣಿದಾರರಿಗೆ ಬಡ್ಡಿ ಎಲ್ಲಿಂದ ಕೊಡಲು ಸಾಧ್ಯ?
ಇಳಿಮುಖವಾಗುತ್ತಿರುವ ಬ್ಯಾಂಕ್ ಬಡ್ಡಿದರದಿಂದ ಕಂಗಾಲಾಗಿರುವ ಮಧ್ಯಮವರ್ಗ ಈಗ ಬ್ಯಾಂಕ್‌ಗಳ ಅಸ್ಥಿರ ಸ್ಥಿತಿಯಿಂದ ಮತ್ತಷ್ಟು ಚಿಂತಾಕ್ರಾಂತವಾಗಿದೆ. ಬದುಕಿನುದ್ದಕ್ಕೂ ಕಠಿನ ದುಡಿಮೆಯಿಂದ ಕೂಡಿಟ್ಟ ಹಣ ಕಣ್ಣೆದುರೇ ಚದುರಿ ಹೋಗುತ್ತಿರುವುದನ್ನು ಸುಮ್ಮನೇ ನೋಡಲಾಗುತ್ತದೆಯೇ? ಪತ್ರಿಕೆಗಳಲ್ಲಿ ಬರುವ ಸಣ್ಣಪುಟ್ಟ ವದಂತಿಗಳೂ ಠೇವಣಿದಾರರನ್ನು ಧೃತಿಗೆಡಿಸುತ್ತವೆ. ಕೆಲವು ಕಾರ್ಪೋರೆಟ್ ಕುಳಗಳ ಪಂಗನಾಮವನ್ನೇ ಆದರ್ಶವಾಗಿಟ್ಟುಕೊಂಡು ನಮ್ಮ ದೇನು ಮಹಾ ಎಂದು ವಸೂಲಿಗೆ ಬಂದವರನ್ನು ಬೆದರಿಸಿ ಏನು ಮಾಡುತ್ತೀರೋ ಮಾಡಿಕೊಳ್ಳಿ ಹೋಗಿ ಎನ್ನುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇದು ಕೋಟ್ಯಂತರ ಠೇವಣಿದಾರರ ಬದುಕಿನ ಸಂಜೆಯನ್ನು ನಿರಾಶೆಯ ಕೂಪಕ್ಕೆ ತಳ್ಳಬಹುದು.
ಸಹಕಾರಿ ರಂಗದ ಅನೇಕ ವಿತ್ತೀಯ ಸಂಸ್ಥೆಗಳು ಸುಲಭ ನಿಯಮಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಾಲ ವಸೂಲಿಗೆ ಸಂಬಂಧಿಸಿದಂತೆ ಉತ್ತಮ ಸ್ಥಿತಿಯಲ್ಲಿವೆ ಮತ್ತು ಲಾಭ ದಾಖಲಿಸುತ್ತಿವೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಪಡೆದ ಸಾಲ ವಾಪಸಿಗೆ ಮೀನಮೇಷ ಎಣಿಸುವ ಬಹುತೇಕ ಸಾಲಗಾರರು ಸುದೀರ್ಘ ಕಾನೂನಿನ ಸಮರ ಮತ್ತು ಸುಲಭವಾಗಿ ಬೆದರಿಕೆಗೆ ಮಣಿಯುವ ಅಧಿಕಾರಿಗಳ ಮನಃಸ್ಥಿತಿಯಿಂದ ಲಾಭ ಪಡೆಯುವ ಹವಣಿಕೆಯಲ್ಲಿರುವವರೇ ಆಗಿರುತ್ತಾರೆ. “ಕೊಟ್ಟವ ಕೋಡಂಗಿ’ ಎನ್ನುವಂತೆ ಒಮ್ಮೆ ಸಾಲ ಪಡೆದರೆಂದರೆ ಬ್ಯಾಂಕ್‌ನಿಂದ ಕರೆ ಬಾರದೇ ಕಂತು ಕಟ್ಟಬೇಕಾಗಿಲ್ಲ ಎನ್ನುವ ಧೋರಣೆ ತಳೆಯುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ವಾಸ್ತವವಾಗಿಯೂ ವಿಷಾದನೀಯ.
ಬ್ಯಾಂಕ್ ಸಾಲದಿಂದ ಉಪಕೃತನಾದ ಗ್ರಾಹಕ ಕ್ಲಪ್ತ ಕಾಲಕ್ಕೆ ಕಂತಿನ ಹಣ ತುಂಬುವ ಮೂಲಕ ಋಣ ಸಂದಾಯ ಮಾಡಿದರೆ ಆತನ ಸಿಬಿಲ್ ರೇಟಿಂಗ್ ಹೆಚ್ಚುವುದು ಮತ್ತು ಬ್ಯಾಂಕ್‌ಗಳಿಗೆ ಇನ್ನಷ್ಟು ಹೊಸ ಸಾಲ ಕೊಡಲು ಅನುವು ಮಾಡಿಕೊಟ್ಟಂತಾಗುವುದು. ಬ್ಯಾಂಕ್‌ಗಳಿಗೆ ಠೇವಣಿದಾರರಷ್ಟೇ ಸಾಲ ಪಡೆದ ವರೂ ಮಹತ್ವದ ಗ್ರಾಹಕರಾಗಿರುತ್ತಾರೆ. ಉತ್ತಮ ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸುವುದೆಂದರೆ ದೇಶದ ಪ್ರಗತಿಯಲ್ಲಿ ಭಾಗಿಯಾದಂತೆಯೇ ಸರಿ. ಆ ಕುರಿತು ಗ್ರಾಹಕರಲ್ಲಿ ಹೆಮ್ಮೆ ಇರಲಿ.
ಸರಕಾರದ ಸಂಪನ್ಮೂಲಗಳ ಅಪವ್ಯಯ ಹೆಚ್ಚಾ ಗಲು ಜನರಲ್ಲಿ ಸಾಮಾಜಿಕ ಮತ್ತು ನೈತಿಕ ಜವಾ ಬ್ದಾರಿ ಇಲ್ಲದಿರುವುದೇ ಕಾರಣ. ಸರಕಾರದ ಅನೇಕ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಅಹರ್ನಿಶಿಯಾಗಿ ದುಡಿಯುತ್ತಿರುವ ಬ್ಯಾಂಕ್‌ಗಳ ಕುರಿತು ಜನಸಾಮಾನ್ಯರ ಚಿಂತನೆಗಳು ಸಕಾ ರಾತ್ಮಕವಾಗಬೇಕಿದೆ. ಬ್ಯಾಂಕ್‌ಗಳು ಸರಕಾರದ ಸ್ವಾಮ್ಯದಲ್ಲಿರುವುದು ನಿಜವಾದರೂ ಅದರ ಬಂಡವಾಳ ಜನಸಾಮಾನ್ಯರ ಬೆವರಿನ ಹಣ ಎನ್ನುವುದನ್ನು ಮರೆಯ ಬಾರದು. ಅವುಗಳ ರಕ್ಷಣೆ ಬ್ಯಾಂಕ್ ಅಧಿಕಾರಿಗಳ ಆದ್ಯ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅವ ರಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಕಾನೂನಿನ ಸಂರಕ್ಷಣೆಯೂ ಬೇಕಾಗಿದೆ.
– ಚಂದ್ರಶೇಖರ ನಾವಡ, ಬೈಂದೂರು