Advertisement
ನೀನ್ಯಾವಾಗಲೂ ಇಷ್ಟಪಟ್ಟು ಒರಗಿ ಕೂತು ದಣಿವಾರಿಸಿಕೊಳ್ಳುತ್ತಿದ್ದೆಯಲ್ಲ? ಅದೇ, ನಿನ್ನ ಮನೆಯ ಹಿಂದಿನ ತೋಟದಲ್ಲಿದ್ದ ಆ ಹಳೆಯ ತೆಂಗಿನ ಮರದ ಮೇಲೆ ನಿನ್ನ ಹೆಸರನ್ನು ನಾನದೆಷ್ಟು ಪ್ರೀತಿಯಿಂದ ಕೆತ್ತಿದ್ದೆ ಗೊತ್ತಾ? ಆಗ ಶುರುವಾದ ಕೈ ನೋವನ್ನು ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಗಿತ್ತು.
Related Articles
Advertisement
ಇಂಥದ್ದೊಂದು ದಿನದ ಸಣ್ಣ ಊಹೆಯೂ ನನಗಿರಲಿಲ್ಲ. ನೀನಿಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆನೆಂಬ ಅಂದಿನ ಆ ನಂಬಿಕೆ ಇತ್ತಲ್ಲ, ಅದೊಂದು ಮಾತ್ರ ಬುಡಮೇಲಾಗಿದೆ. ಉಸಿರಾಡುತ್ತಿದ್ದೇನೆ, ನಗುತ್ತಿದ್ದೇನೆ, ಅಳುವೂ ಇದೆ. ಒಟ್ಟಿನಲ್ಲಿ ಬದುಕಿದ್ದೇನೆ.. ನೀನಿಲ್ಲವೆಂಬ ಕೊರಗು ಮಾತ್ರ ನನ್ನ ಜೊತೆಜೊತೆಗೇ ಹೆಜ್ಜೆಹಾಕುತ್ತಿದೆ.
ನೀ ಕೊಟ್ಟ ಪ್ರೀತಿಯೇ ಅಂಥದ್ದು ಸುರಹೊನ್ನೆಯಿಂದ ಹೊರ ಹೊಮ್ಮುವ ಘಮಲು!! ಪ್ರೀತಿ ಎಂದರೆ ಅದು ಕೇವಲ ವಾಂಛೆಯಲ್ಲ, ತಾಯಿಯೋರ್ವಳು ಗರ್ಭ ಧರಿಸಿದ ಮೊದಲ ದಿನದಿಂದಲೇ ತನ್ನ ಕೂಸಿಗಾಗಿ ಬಚ್ಚಿಟ್ಟುಕೊಳ್ಳುತ್ತಾಳಲ್ಲ; ಅಂಥದ್ದೊಂದು ಅಮೃತ ಸಮಾನ ಭಾವವದು. ಹೂಬಳ್ಳಿಯೊಂದರಲ್ಲಿ ಅರಳಿನಿಂತ ಮೊದಲ ಹೂವಿನಷ್ಟೇ ಕೋಮಲವದು.
ಅದೊಂದು ದಿನ ಸೂರ್ಯಾಸ್ತದ ಸಮಯದಲ್ಲಿ ಹೂವಿನ ತೋಟದ ಬದುವಿನಲ್ಲಿ ಕುಳಿತು; “ಬದುಕು ಹೇಗೇ ಇರಲಿ. ಅದೆಷ್ಟೇ ನೋವಿರಲಿ, ಅದೆಂಥದ್ದೇ ಕಡುಕಷ್ಟವಿರಲಿ. ಕೊನೆಗೆ ನಾನೇ ಇಲ್ಲದಿರಲಿ, ನಿನ್ನ ತುಟಿಯಂಚಲ್ಲಿರುವ ಈ ನಗುವೆಂಬ ಒಡವೆಯೊಂದನ್ನು ಮಾತ್ರ ಕಳಚಿಡದಿರು.. ನನ್ನಾಣೆ’ ಎಂದುಬಿಟ್ಟಿದ್ದೆ ನೀನು. ನಾನು ಯಾವುದೋ ಹುಮ್ಮಸ್ಸಿನಲ್ಲಿ ಹೂn ಎಂದು ಹೂಗುಟ್ಟಿದ್ದೆ.
ಆದರೂ ನೀನು ಆಣೆ ಮಾಡಿಸಿಕೊಂಡಷ್ಟು ಸಲೀಸಲ್ಲ ನಗುತ್ತಲೇ ಬದುಕುವುದು. ಅಳುವುದಕ್ಕಾದರೂ ಏನಿದೆ ಹೇಳು ನೀನಿಲ್ಲವೆಂಬ ಕೊರಗನ್ನು ಮೀರಿಸುವಂಥದ್ದು?! ಬದುಕಿದ್ದೂ ಸತ್ತಿರುವವರೇ ತುಂಬಿರುವ ಈ ಜಗತ್ತಿನಲ್ಲಿ. ಇಲ್ಲದೆಯೂ ಇದ್ದಂತಿರುವ ನಿನ್ನ ಆರಾಧನೆಯ ಮಹಾಕಾರಣವೊಂದಿದೆಯಲ್ಲ? ಹಾಗಾಗಿ ನಾನಿನ್ನೂ ಉಸಿರಾಡುತ್ತಿದ್ದೇನೆ..
ಸತ್ಯ ಗಿರೀಶ್