ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉನ್ನತ ಮಟ್ಟದ ಎಲ್ ಇಟಿ ಕಮಾಂಡರ್‌ನ ಹತ್ಯೆಗೆ ಕಾರಣವಾದ ಯಶಸ್ವಿ ಕಾರ್ಯಾಚರಣೆ ಕಾರ್ಯತಂತ್ರದ ಯೋಜನೆಯಲ್ಲಿ ಬಿಸ್ಕತ್ತುಗಳು ಪ್ರಮುಖ ಪಾತ್ರ ವಹಿಸಿವೆ.
ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಉಸ್ಮಾನ್ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಬೀದಿ ನಾಯಿಗಳು ಒಡ್ಡಿದ ಸವಾಲನ್ನು ತಡೆಯುವಲ್ಲಿ ಬಿಸ್ಕತ್ತುಗಳ ಮಹತ್ವವನ್ನು ಹಿರಿಯ ಅಧಿಕಾರಿಗಳು ಎತ್ತಿ ತೋರಿಸಿದ್ದಾರೆ.
ಶ್ರೀನಗರದ ಡೌನ್‌ಟೌನ್‌ನ ಜನನಿಬಿಡ ಖಾನ್ಯಾರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಉಸ್ಮಾನ್ ಹತ್ಯೆಯಾಗಿದ್ದಾನೆ. ಎರಡು ವರ್ಷಗಳ ನಂತರ ಶ್ರೀನಗರದಲ್ಲಿ ನಡೆದ ಮೊದಲ ಮಹತ್ವದ ಗುಂಡಿನ ಚಕಮಕಿಯಾಗಿದೆ.
ಸ್ಥಳದಲ್ಲಿದ್ದ ಉಗ್ರನ ಬೇಟೆಗಿಳಿದ ವೇಳೆ ಭದ್ರತಾ ಪಡೆಗಳಿಗೆ ಸವಾಲಾಗಿದ್ದೇ ಬೀದಿ ನಾಯಿಗಳು. ಭದ್ರತಾ ಪಡೆಗಳನ್ನು ಕಂಡ ತತ್ ಕ್ಷಣ ಜೋರಾಗಿ ಬೊಗಳಿ ಉಗ್ರರು ಅಡಗಿಕೊಳ್ಳಲು ಕಾರಣವಾಗುತ್ತಿತ್ತು. ಇದನ್ನು ಎದುರಿಸಲು, ನಾಯಿಗಳು ಹತ್ತಿರ ಸಮೀಪಿಸುತ್ತಿದ್ದಂತೆ ಅವುಗಳಿಗೆ ಶೋಧ ತಂಡಗಳು ಬಿಸ್ಕತ್ತುಗಳನ್ನು ಹಾಕಿ ಸದ್ದಡಗಿಸುವಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆಯಲ್ಲೂ ಯಶಸ್ಸು ಕಂಡಿದೆ.
ಭದ್ರತಾ ಪಡೆಗಳು 30 ಮನೆಗಳ ಸಮೂಹವನ್ನು ಸುತ್ತುವರೆದು ಗುಂಡಿನ ಚಕಮಕಿ ನಡೆಸಿವೆ. ಉಸ್ಮಾನ್ ನನ್ನ ಹತ್ಯೆಗೈದು AK-47, ಪಿಸ್ತೂಲ್ ಮತ್ತು ಹಲವಾರು ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿವೆ.
ಭಾರೀ ಗುಂಡಿನ ಕಾಳಗದಲ್ಲಿ ಕೆಲವು ಗ್ರೆನೇಡ್‌ಗಳು ಸ್ಫೋಟಗೊಂಡು ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದು ಹತ್ತಿರದ ಮನೆಗಳಿಗೆ ಹರಡುವುದನ್ನು ತಡೆಯಲು ಭದ್ರತಾ ಸಿಬಂದಿ ತ್ವರಿತ ಕಾರ್ಯಾಚರಣೆ ನಡೆಸಿದರು.
ಹಲವಾರು ಗಂಟೆಗಳ ತೀವ್ರ ಗುಂಡಿನ ಚಕಮಕಿಯ ನಂತರ ಉಸ್ಮಾನ್ ನನ್ನ ತಟಸ್ಥಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ನಾಲ್ವರು ಭದ್ರತಾ ಸಿಬಂದಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.