Advertisement
ಯಶೋದೆಯೆಂದರೆ ಸಾಮಾನ್ಯ ಗೃಹಿಣಿಯಲ್ಲ. ಕೃಷ್ಣನ ಪಾರಮ್ಯವನ್ನು ಜಗತ್ತಿಗೇ ದರ್ಶಿಸಿದ ಮಾತೃರತ್ನ. ಕೃಷ್ಣನ ಬಾಲ್ಯ ಸುಂದರವಾದದ್ದೇ ಯಶೋದೆಯಿಂದ. ಕೃಷ್ಣ ಅಸಾಮಾನ್ಯನೆನಿಸಿಕೊಂಡಿದ್ದೇ ಯಶೋದೆಯ ಸಮಭಾವದ ತಾಯಮಮತೆಯಲ್ಲಿ. ಕೃಷ್ಣ ಯಶೋದೆಯಿಂದ ಬಾಲ್ಯ ತುಂಬಿಕೊಂಡರೆ, ಯಶೋದೆ ಕೃಷ್ಣನಿಂದ ದಾರ್ಶನಿಕಳಾಗುತ್ತ ಸಾಗುತ್ತಾಳೆ. ಒಮ್ಮೆ ಮುಷ್ಟಿ ಮುಷ್ಟಿ ಮಣ್ಣನ್ನು ಬಾಯಲ್ಲಿಡುವ ಮಗು. ಯಶೋದೆಯ ಮಾತೃತ್ವ ಕಾಳಜಿ, ಮಗುವಿನ ಬಾಯಿಂದ ಮಣ್ಣು ಅಗೆಯತೊಡಗುತ್ತಾಳೆ. ಅಗೆದಷ್ಟೂ , ತೆಗೆದಷ್ಟೂ ಮುಗಿಯದ ಮಣ್ಣಿನ ಒಳಗಿಂದ ಬ್ರಹ್ಮಾಂಡ ದರ್ಶನ. ಮಗುವೆಂಬ ಆತ್ಮಶಕ್ತಿಯ ನಿಗೂಢತೆ ಯಾವ ಅರ್ಥಕ್ಕೂ ನಿಲುಕದ ಪರಮಾರ್ಥವಾಗಿ ಗೋಚರಿಸುತ್ತದೆ.
Related Articles
Advertisement
ಪಂಚಪತಿಯರೊಂದಿಗೆ ಬದುಕು ಕಟ್ಟಿಕೊಂಡ ಪಾಂಚಾಲಿ ಎಷ್ಟೋ ಸಂದರ್ಭದಲ್ಲಿ ಗಾಳಕ್ಕೆ ಸಿಕ್ಕ ಮೀನಿನ ಪರಿಸ್ಥಿತಿಗೆ ತಲುಪಿದರೂ ತನ್ನದೇ ಸತ್ಯ, ಸತ್ವ, ಶಕ್ತಿ, ಸ್ಥೈರ್ಯದಿಂದ ಬಲೆ ಹರಿದ ಸಬಲೆಯಾಗಿ ಮೂಡಿಬರುತ್ತಾಳೆ. ಮತ್ಸಯಂತ್ರದ ಪಣದಲ್ಲಿ ಗೆದ್ದವನ ಕೈಹಿಡಿದವಳು. ಕಪಟ ಜೂಜಿನ ಕಣದಲ್ಲಿ ಸೋತವನ ಪಣದ ದಾಳವಾಗುತ್ತಾಳೆ. ಎಂತೆಂಥ ಬವಣೆಯಲ್ಲೂ ಕಳೆದುಹೋಗದೆ ಮರಳಿ ಅರಳುತ್ತಾಳೆ. ಅದು ಗೃಹಿಣೀತ್ವದ ಧೀಶಕ್ತಿ.
ಅರ್ಜುನನ ಪತ್ನಿ ಸುಭದ್ರೆ ಪತಿಯ ಅನುಪಸ್ಥಿತಿಯಲ್ಲೂ , ಮಗ ಅಭಿಮನ್ಯುವನ್ನು ಸಕಲ ವಿದ್ಯಾ ಪಾರಂಗತನಾಗಿ, ಮಹಾಭಾರತ ಯುದ್ಧದಲ್ಲಿ ಗುಡುಗುವ ವೀರಪುತ್ರನನ್ನಾಗಿ ರೂಪಿಸಿದ ಪರಿ ಗೃಹಿಣಿಯೊಬ್ಬಳ ಸಾರ್ಥಕ ಬದುಕಿನ ನಿರೂಪಣೆಯಾಗಿ ನಿಲ್ಲುತ್ತದೆ.
ಅದೇ ರೀತಿ ಮಹಾಭಾರತ ಕಥೆಯಲ್ಲಿ ಚಿತ್ರಾಂಗದೆಯೆಂಬ ದಿಟ್ಟ , ಸಮರ್ಥ, ಸಾಧನಶೀಲ ಗೃಹಿಣಿಯೊಬ್ಬಳು, ಹುಟ್ಟಿದ ಮೇಲೆ ತಂದೆಯನ್ನೇ ಪ್ರತ್ಯಕ್ಷವಾಗಿ ನೋಡದ ಮಗುವಿನಲ್ಲಿ ತನ್ನ ಸಂಕಲ್ಪಶಕ್ತಿಯ ಕಲ್ಪನಾವೇದಿಯ ಪ್ರತಿಭೆಯ ಮೂಲಕ ತಂದೆಯ ರೂಪ, ಶೌರ್ಯ, ಗೌರವವನ್ನು ಎಳೆಯ ಭಾವದೊಸರಿನ ಮಣ್ಣಲ್ಲಿ ಬಿತ್ತಿ “ಬಬ್ರುವಾಹನ’ನೆಂಬ ಬಹು ಅಪರೂಪದ ಭಕ್ತಿ, ವಿನಯ, ಸಾಹಸ, ಸಾಧನೆಯ ವೀರಾಗ್ರಣಿಯನ್ನು ರೂಪಿಸಿಕೊಟ್ಟ ಲೋಕವಿಖ್ಯಾತೆ.
ಕುಂತಿ ಏಕಾಂಗಿಯಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಆದರ್ಶ ಗೃಹಿಣಿ ಎನ್ನಬಹುದು. ಪಂಚ ಪಾಂಡವರ ಮಾತೆಯಾಗಿಯೂ, ಕಾಡು, ಮೇಡುಗಳನ್ನೆಲ್ಲ ಅಲೆಯುವ ಕಡುಕಷ್ಟಕಾಲದಲ್ಲೂ ಮಕ್ಕಳಿಗೆ ಧರ್ಮಸೂಕ್ಷ್ಮತೆಯನ್ನು ಸಮರ್ಥವಾಗಿ ಬೋಧಿಸಿದ ಕಾರಣ ಯಾವ ಸಂದರ್ಭದಲ್ಲೂ ಆಕೆಯ ಮಕ್ಕಳು ಧೃತಿಗೆಡಲಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ ಮಹಾಭಾರತದಲ್ಲಿ ಬರುವ ಒಂದು ಗೃಹಿಣಿಯ ಪಾತ್ರ “ಗಾಂಧಾರಿ’. ಆಕೆ ಗಂಡನ ಸಕಲ ಕಷ್ಟಗಳಲ್ಲೂ ತಾನು ಭಾಗಿ ಎಂಬ ಧೋರಣೆಯಲ್ಲಿ ಕುರುಡ ಪತಿಗೆ ಕಾಣದ ಪ್ರಪಂಚವನ್ನು ತಾನೂ ನೋಡುವುದಿಲ್ಲವೆಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಗಂಡನ ಎಲ್ಲ ಅನ್ಯಾಯ, ಅಪಚಾರಗಳಿಗೆ ಕುರುಡಾಗಿ ಕುಳಿತು ತನ್ನ ನೂರು ಕರುಳ ಕುಡಿಗಳನ್ನು ಕಳೆದುಕೊಂಡಳು.
ಇನ್ನು ರಾಮಾಯಣದಲ್ಲಿ ಬರುವ ಸೀತೆಯಂತೂ ಗೃಹಿಣಿಯ ಸಹನಶೀಲತೆಯ ಪರಾಕಾಷ್ಠೆಯೆನಿಸುತ್ತದೆ. ಒಂದು ಕಾಲದ ಪರುಷಪ್ರಧಾನ ಸಮಾಜದಲ್ಲಿ ಗೃಹಿಣಿಯ ಅಸಹಾಯಕತೆ, ಅನಿವಾರ್ಯತೆ, ನಿರೀಕ್ಷೆಗಳು ಎಂತಹ ಒಂದು ವಿಪರೀತ ಮಟ್ಟದಲ್ಲಿತ್ತು ಎಂಬುದು ನಮಗೆ ಅರಿವಾಗುತ್ತದೆ. ಅದರ ಜೊತೆಜೊತೆಗೇ ಈ ಸೀತೆ ಇಂದಿನ ಗೃಹಿಣಿಯರಲ್ಲೂ ತನ್ನ ಪ್ರತಿರೂಪದ ಭಾವ ಮೂಡಿಸುತ್ತಿರುವುದೂ ಇಂದಿನ ವಾಸ್ತವಕ್ಕೆ ಹತ್ತಿರವೇ ಆಗಿದೆ.
ಇಡೀ ರಾಮಾಯಣ ಕಥಾನಕದಲ್ಲಿ ಊರ್ಮಿಳೆಯ ಪಾತ್ರ ಮಾತ್ರ ವಿಶಿಷ್ಟ ಹಾಗೂ ವಿಶೇಷವಾದುದೆಂದು ಅನೇಕ ನಮ್ಮ ಕವಿ, ಸಾಹಿತಿಗಳು ಗುರುತಿಸಿದ್ದಾರೆ. ಆಗಷ್ಟೇ ಮದುವೆಯಾಗಿ ಹೊಸ ಕನಸುಗಳ ಹಾಡು ಗುನುಗುನಿಸುವ ಸುವರ್ಣ ಕ್ಷಣದಲ್ಲಿ ಪತಿ ಲಕ್ಷ್ಮಣ ತನ್ನನ್ನಗಲಿ ಏಕಾಂಗಿಯಾಗಿ ಕಾಡಿಗೆ ಹೊರಟು ನಿಂತಿದ್ದಾನೆ. ಅದೂ ಒಂದೆರಡು ದಿನವಲ್ಲ. ವಾರವಲ್ಲ. ತಿಂಗಳಲ್ಲ. ಹದಿನಾಲ್ಕು ವರ್ಷ. ಈ ದೀರ್ಘ ಅವಧಿಯಲ್ಲಿ ಲಕ್ಷ್ಮಣ ಕಾಡಿನಲ್ಲಿ ಅಣ್ಣನ ಸೇವೆಯಲ್ಲಿ ಕಳೆದರೆ, ಊರ್ಮಿಳೆ ಅರಮನೆಯಲ್ಲಿಯೇ ಋಷಿಸದೃಶ ಬದುಕು ಕಟ್ಟಿಕೊಂಡು ಪ್ರತಿಕ್ಷಣವೂ ಮಾನಸರೂಪಿಣಿಯಾಗಿ ಕಾಡಿನ ಲಕ್ಷ್ಮಣನ ಜೊತೆಗೆ ಇರುತ್ತಾಳೆ. ಈ ಪ್ರೇಮ ಕಾರುಣ್ಯದ ಗಾಥೆಯೇ ಇಂದಿಗೂ ಕೆಲವು ಪತಿಯಿಂದ ದೂರವಿರುವ ಗೃಹಿಣಿಯರಿಗೆ ಮಾರ್ಗದರ್ಶಿಯಾಗಿರಲೂಬಹುದು.
ವಿಜಯಲಕ್ಷ್ಮಿ ಶ್ಯಾನ್‌ಭೋಗ್