Advertisement

ರೈ ಹೇಳಿಕೆಗೆ ಸದನ ಕದನ : ಕಲ್ಲಡ್ಕ ಪ್ರಕರಣ ಪ್ರತಿಧ್ವನಿ

10:23 AM Jun 20, 2017 | Team Udayavani |

ವಿಧಾನಮಂಡಲ: ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ, ಐಪಿಸಿ ಸೆಕ್ಷನ್‌ 307ರಡಿ ಪ್ರಕರಣ ದಾಖಲಿಸಿ ಬಂಧಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ರಮಾನಾಥ್‌ ರೈ ಆದೇಶ ನೀಡಿರುವು ದು ಸೋಮವಾರ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವ ರಮಾನಾಥ್‌ ರೈ ಅವರು ಪ್ರವಾಸಿ ಮಂದಿರಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಕರೆಸಿಕೊಂಡು ನಿರ್ದಿಷ್ಟ ವ್ಯಕ್ತಿಯ ಬಂಧನಕ್ಕೆ ಸೂಚನೆ ನೀಡಿರುವುದು ಸಂವಿಧಾನ ಬಾಹಿರ. ತಕ್ಷಣ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಅವರು ತಮ್ಮ ಸ್ಥಾನಕ್ಕೆ
ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

Advertisement

ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಕೋಲಾಹಲ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ, ವಿಧಾನಸಭೆಯಲ್ಲಿ ತಮ್ಮ ಮಾತು ಸಮರ್ಥಿಸಿಕೊಂಡ ಸಚಿವ ರಮಾನಾಥ್‌ ರೈ, ತಾವು ಆಕ್ಷೇಪಾರ್ಹ ಮಾತುಗಳನ್ನಾಡಿಲ್ಲ. ಯಾರೇ ತಪ್ಪು ಮಾಡಿದ್ದರೂ ಬಂಧಿಸಿ, ಕ್ರಮ ಕೈಗೊಳ್ಳಿ ಎಂದು ಮಾತ್ರ ಹೇಳಿದ್ದೇನೆ. ಬೇಕಾದರೆ ವಿಡಿಯೋ ಸಿಡಿ ತರಿಸಿ ನೋಡಿ. ಕಲ್ಲಡ್ಕ ಪ್ರಭಾಕರ ಭಟ್‌ ಸೇರಿ
ಸಂಘಪರಿವಾರದವರು ಪ್ರಚೋದನಕಾರಿ ಭಾಷಣ ಮಾಡಿ ಕೊಲೆ ಆರೋಪಿಗಳಿಗೆ ಆಶ್ರಯ ನೀಡುತ್ತಿರುವುದೇ ಕೋಮು
ಸಾಮರಸ್ಯ ಹಾಳಾಗಿ ಗಲಭೆ ಉಂಟಾಗಲು ಕಾರಣ ಎಂದು ದೂರಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ
ವ್ಯಕ್ತಪಡಿಸಿ ಸಂಘಪರಿವಾರದವರ ಹೆಸರು ಪ್ರಸ್ತಾಪಿಸಿದ್ದು ಯಾಕೆ? ಯಾರಾದರೂ ಕುಮ್ಮಕ್ಕು ಕೊಟ್ಟಿದ್ದರೆ ಹೆಸರು ಹೇಳಿ, ಸಾಮೂಹಿಕವಾಗಿ ಸಂಘಪರಿವಾರದವರು ಎಂದು ಹೇಳಬೇಡಿ ಎಂದು ತಾಕೀತು ಮಾಡಿದರು.

ಸ್ಪೀಕರ್‌ ಕೆ.ಬಿ.ಕೋಳಿವಾಡ್‌ ತಮ್ಮ ಆಸನದಿಂದ ಎದ್ದು ನಿಂತು ಎಲ್ಲರಿಗೂ ಕೂರುವಂತೆ ಸೂಚಿಸಬೇಕಾಯಿತು. ಸರ್ಕಾರದ ಪರವಾಗಿ ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇನೆ ಎಂದು ಭರವಸೆ ನೀಡಿದಾಗ ಪ್ರತಿಪಕ್ಷ ಸದಸ್ಯರು ಶಾಂತರಾದರು.

Advertisement

Udayavani is now on Telegram. Click here to join our channel and stay updated with the latest news.

Next