ಆಳಂದ(ಕಲಬುರಗಿ): ಆಧುನಿಕ ಯುಗದಲ್ಲಿ ಬೊಜ್ಜು ಕರಗಿಸಲು ಜನತೆ ನಾಲ್ಕಾರು ಕಿ.ಮೀ. ನಡೆಯುವುದು ವಾಡಿಕೆ. ಆದರೆ, ತಾಲೂಕಿನ ಕೊಟ್ಟರಗಾ ಗ್ರಾಮದ ಜನತೆ ಬದುಕು ಸಾಗಿಸುವ ಸಲುವಾಗಿ ಪಡಿತರ ತರಲು ನಾಲ್ಕು ಕಿ.ಮೀ. ನಡೆದು ಹೋಗಿ ಹತ್ತಾರು ಕೆಜಿ ಪಡಿತರ ಹೊತ್ತು ತರುತ್ತಾರೆ! ಆಶ್ಚರ್ಯವಾದರೂ ಇದು ಸತ್ಯ. ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಕೈಗೆಟಕುವ ದರದಲ್ಲಿ ಪಡಿತರ ಅಂಗಡಿಗಳಲ್ಲಿ ಸಕ್ಕರೆ, ಅಕ್ಕಿ, ಗೋಧಿ , ಬೇಳೆ, ಎಣ್ಣೆ ವಿತರಿಸುತ್ತದೆ. ಊರಲ್ಲಿಯೇ ಪಡಿತರ ಅಂಗಡಿ ಇದ್ದರೆ ಸಲೀಸಾಗಿ ಪಡಿತರ ಮನೆಗೆ ತರಬಹುದು. ಆದರೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕೊಟ್ಟರಗಾ ಗ್ರಾಮಸ್ಥರು ಶ್ರೀಚಂದ್ ಗ್ರಾಮಕ್ಕೆ ಹೋಗಿ ಪಡಿತರ ತರುತ್ತಿದ್ದಾರೆ.
ವಾಹನಗಳ ಮೂಲಕ ಶ್ರೀಚಂದ್ ಗ್ರಾಮಕ್ಕೆ ಹೋಗಬೇಕಾದರೆ ಸುತ್ತಿ ಬಳಸಿ ಸುಮಾರು 200ರೂ.ಗಳಷ್ಟು ಖರ್ಚಾಗುತ್ತಿದೆ. ಆದರೆ, ಕಗ್ಗಾಡಿನಲ್ಲಿ 4 ಕಿ.ಮೀ. ಕಚ್ಛಾ ರಸ್ತೆಗಿಂತಲೂ ಹದಗೆಟ್ಟ ದಾರಿ ಮೂಲಕ ಕಾಲ್ನಡಿಗೆಯಲ್ಲೇ ಹೋಗಿ ಪಡಿತರ ತರುತ್ತಿದ್ದಾರೆ.
ಏಕೆ ಈ ಸಮಸ್ಯೆ?: ಸುಮಾರು 700 ಜನಸಂಖ್ಯೆ ಇರುವ ಕೊಟ್ಟರಗಾ ಗ್ರಾಮದಲ್ಲಿ ಕಡಿಮೆ ಪಡಿತರ ಕಾರ್ಡ್‌ಗಳಿವೆ. ಈ ಗ್ರಾಮಕ್ಕೆ ಪ್ರತ್ಯೇಕವಾದ ನ್ಯಾಯಬೆಲೆ ಅಂಗಡಿಯಿಲ್ಲ. ಹೀಗಾಗಿ ಪಕ್ಕದ ಶ್ರೀಚಂದ್ ಗ್ರಾಮಕ್ಕೆ ಹೋಗುವ ಅನಿವಾರ್ಯತೆಯಿದೆ. ಅನೇಕ
ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯವರು ಗ್ರಾಮಕ್ಕೆ ಬಂದು ಪಡಿತರ ಧಾನ್ಯ ವಿತರಿಸುತ್ತಿದ್ದರು. ಇತ್ತೀಚಿನ ಕಾನೂನುಗಳಿಂದ ಅವರು ಗ್ರಾಮಕ್ಕೆ ಬರುವುದನ್ನು ಸ್ಥಗಿತಗೊಳಿಸಿದ್ದಾರೆ. ಯಾವುದೇ ಗ್ರಾಮದಲ್ಲಿ ಪಡಿತರ ಅಂಗಡಿ ಇರಬೇಕಾದರೆ ಕನಿಷ್ಠ 500 ಕಾರ್ಡ್‌ಗಳು ಇರಬೇಕು. ಕೊಟ್ಟರಗಾದಲ್ಲಿ 150 ಕಾರ್ಡ್‌ಗಳು ಇರುವುದರಿಂದ ನ್ಯಾಯಬೆಲೆ ಅಂಗಡಿ ಸ್ಥಾಪಿಸಿಲ್ಲ.
ಮಹಾದೇವ ವಡಗಾಂವ