ಮಲಪ್ಪುರಂ ಜಿಲ್ಲೆಯ ತಿರೂರ್ ವಾಳೂರು ನಿವಾಸಿ ಮುಚ್ಚೇರಿ ಸಿದ್ದಿಕ್ (58) ಕೊಲೆಗೀಡಾದವರು. ಪಾಲ್ಗಾಟ್ ಪೆರ್ಲಶೆರಿಯ ಶಿಬಿಲಿ (22), ಫರ್ಹಾನಾ (18) ಹಾಗೂ ಫರ್‌ಹಾನಳ ಸಹೋದರ ಗಫೂರ್ ಮತ್ತು ಆಶಿಕ್ ಬಂಧಿತರು.
Advertisement
ಮೃತದೇಹವನ್ನು ತುಂಡರಿಸಿ ತುಂಬಿಸಿ ಎಸೆಯಲಾದ ಟ್ರೋಲಿ ಬ್ಯಾಗ್‌ಗಳನ್ನು ಅಗ್ನಿಶಾಮಕ ದಳದ ಸಹಾಯದಿಂದ ಅಟ್ಟಪ್ಪಾಡಿ 9ನೇ ತಿರುವಿನ ಕಂದಕದಲ್ಲಿರುವ ನೀರಿನ ತೊರೆಯಿಂದ ಪೊಲೀಸರು ಮೇಲಕ್ಕೆತ್ತಿದ್ದಾರೆ.
ಮೇ 18 ರಂದು ಕಲ್ಲಿಕೋಟೆಯ ಡಿ ಕಾಸ್ ಇನ್ ಎಂಬ ಹೆಸರಿನ ಹೊಟೇಲ್‌ನಲ್ಲಿ ಆರೋಪಿಗಳು ಬಾಡಿಗೆಗೆ ಕೊಠಡಿ ಪಡೆದಿದ್ದರು. ಅದೇ ವಸತಿಗೃಹದಲ್ಲಿ ಕೊಲೆಯಾದ ಸಿದ್ದಿಕ್ ಕೂಡ ಎರಡು ಕೊಠಡಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆ ಕೊಠಡಿಯಲ್ಲೇ ಸಿದ್ದಿಕ್ ಮತ್ತು ಆರೋಪಿಗಳು ತಂಗಿದ್ದರೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇಲ್ಲೇ ಸಿದ್ದಿಕ್ ಅವರನ್ನು ಕೊಂದು ಮೃತದೇಹವನ್ನು ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ ತುಂಬಿಸಿ ಮೇ 19ರಂದು ಅಟ್ಟಪ್ಪಾಡಿಗೆ ಸಾಗಿಸಿ ಕಂದಕಕ್ಕೆ ಎಸೆದಿದ್ದಾರೆ. ಮೃತದೇಹವನ್ನು ತುಂಡರಿಸಲು ಎಲೆಕ್ಟ್ರಿಕ್ ಕಟ್ಟರನ್ನು ಬಳಸಲಾಗಿತ್ತೆಂದು ತನಿಖೆಯಿಂದ ತಿಳಿದು ಬಂದಿದೆ. ಮೃತದೇಹವನ್ನು ಸಾಗಿಸುತ್ತಿರುವ ದೃಶ್ಯಗಳು ಹೊಟೇಲ್ ಪರಿಸರದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅಟ್ಟಪ್ಪಾಡಿಯಿಂದ ಆರೋಪಿಗಳು ಆ ಬಳಿಕ ಚೆನ್ನೈಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೇ 24ರಂದು ಸಿದ್ದಿಕ್ ನಾಪತ್ತೆಯಾಗಿರುವುದಾಗಿ ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಅವರ ಮೊಬೈಲ್ ಫೋನ್ ಅಂದಿನಿಂದಲೇ ಸ್ವಿಚ್ ಆಫ್ ಆಗಿತ್ತು. ಅವರ ಎಟಿಎಂ ಕಾರ್ಡ್ ಬಳಸಿ 2 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಕೊಲೆಯಾದ ಸಿದ್ದಿಕ್ ಕೊನೆಯ ಬಾರಿ ತನ್ನ ಮೊಬೈಲ್‌ನಲ್ಲಿ ಮಾತನಾಡಿದ್ದು ಕಲ್ಲಿಕೋಟೆಯಿಂದ ಆಗಿದೆಯೆಂದು ಸೈಬರ್ ಸೆಲ್‌ನ ಸಹಾಯದಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಅದರ ಜಾಡು ಹಿಡಿದು ಕಲ್ಲಿಕೋಟೆಗೆ ಸಾಗಿ ನಡೆಸಿದ ತನಿಖೆಯಲ್ಲಿ ಈ ಕೊಲೆ ಪ್ರಕರಣ ಬಯಲಾಗಿದೆ.