Advertisement

ಚೇತರಿಕೆ ಕಂಡ ಹೋಟೆಲ್‌, ಪ್ರವಾಸೋದ್ಯಮ

04:05 PM Oct 13, 2021 | Team Udayavani |

ಮೈಸೂರು: ಕೊರೊನಾ ಲಾಕ್‌ಡೌನ್‌ನಿಂದ ಸೊರಗಿದ್ದ ಮೈಸೂರಿನ ಪ್ರವಾಸೋದ್ಯಮ ನಾಡಹಬ್ಬ ಮೈಸೂರು ದಸರಾದಿಂದ ಸುಧಾರಿಸಿಕೊಂಡಿದ್ದು, ಹೋಟೆಲ್‌ ಮತ್ತು ಲಾಡ್ಜ್ಗಳಲ್ಲಿ ಬುಕ್ಕಿಂಗ್‌ ಪ್ರಮಾಣ ಚೇತರಿಕೆ ಕಂಡಿದೆ. ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಸೊರಗಿದ್ದರಿಂದ ಹೋಟೆಲ್‌ ಹಾಗೂಲಾಡ್ಜ್ಗಳು ಬಾಗಿಲು ಮುಚ್ಚಿದ್ದವು. ಈ ಬಾರಿಯ ದಸರಾ ಉತ್ಸವ ಕಳೆಗುಂದಿದ್ದ ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ಯಮಕ್ಕೆ ಟಾನಿಕ್‌ ನೀಡಿದ್ದು, ನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.

Advertisement

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ವಿದ್ಯುತ್‌ ದೀಪಗಳಿಂದ ಅರಮನೆ ನಗರಿ ಝಗಮಗಿಸುತ್ತಿದೆ. ಬಣ್ಣ-ಬಣ್ಣದ ಅಲಂಕಾರ ಕಣ್ಮನ ಸೆಳೆಯುತ್ತಿದ್ದು, ದಸರಾ ಸಡಗರ ಸ್ವರ್ಗಕ್ಕೆ ಕಿಚ್ಚು ಹಚ್ಚಿದೆ. ದೀಪಾಲಂಕಾರ ನೋಡುವುದಕ್ಕೆ ಜನ ಮುಗಿಬಿದ್ದಿದ್ದು, ಎಲ್ಲ ಕಡೆ ಜನ ಸಾಗರವೇ ಕಂಡುಬರುತ್ತಿದ್ದು, ಮೈಸೂರಿನಲ್ಲಿ ನಾಡಹಬ್ಬದ ಗತವೈಭವ ಮೇಳೈಸಿದೆ.ದಸರಾ ಪ್ರಯುಕ್ತ ಇಡೀ ಮೈಸೂರು ನಗರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು, ಎಲ್ಲ ವೃತ್ತಗಳು ವಿದ್ಯುದ್ದೀಪಗಳಿಂದ ಝಗಮಗಿಸುತ್ತಿವೆ.

ಇದನ್ನೂ ಓದಿ;- ಡಾl ಸಂಧ್ಯಾ ಎಸ್. ಪೈ ಅವರಿಗೆ ಕಾರಂತ ಪ್ರಶಸ್ತಿ

ಅ.7ರಿಂದ ಮೈಸೂರು ನಗರದಲ್ಲಿ ದೀಪಾಲಂಕಾ ರಕ್ಕೆ ಚಾಲನೆ ದೊರೆತಿರುವುದರಿಂದ ಜಗಮಗಿಸುವ ದಸರಾ ದೀಪಾಲಂಕಾರ ನೋಡಲೆಂದು ಹೊರ ಜಿಲ್ಲೆಗಳಿಂದ ಮಕ್ಕಳೊಂದಿಗೆ ಪ್ರವಾಸಿಗರು ಬರುತ್ತಿದ್ದು, ಅವರಲ್ಲಿ ಬಹುತೇಕರು ಹೋಟೆಲುಗಳಲ್ಲಿ ರಾತ್ರಿ ವೇಳೆ ವಾಸ್ತವ್ಯ ಹೂಡುತ್ತಿರುವುದು ಗಮನಾರ್ಹ.

ಮೈಸೂರು ನಗರದಲ್ಲಿ 415 ಹೋಟೆಲ್‌ ಮತ್ತು ಲಾಡ್ಜ್ಗಳಿದ್ದು, ಇವುಗಳಲ್ಲಿ ಒಟ್ಟು 10,000 ರೂಂಗಳಿವೆ. ಆನ್‌ಲೈನ್‌, ದೂರವಾಣಿ ಮೂಲಕ ಅಕ್ಟೋಬರ್‌ 10ರಿಂದ ಈವರೆಗೆ 5 ಸಾವಿರ ರೂಂಗಳು ಬುಕ್‌ ಆಗಿವೆ. ಅದೇರೀತಿ ಅಕ್ಟೋಬರ್‌ 14ರಂದು ಆಯುಧ ಪೂಜಾ, 15 ರಂದು ಜಂಬೂ ಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಎಲ್ಲಾ 10 ಸಾವಿರ ರೂಂಗಳು ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲಿಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದ್ದಾರೆ.

Advertisement

ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ: ದಸರಾ ಉದ್ಘಾಟನೆ ಹಿನ್ನೆಲೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದನ್ನು ಶನಿವಾರ ಸಡಿಲಿಗೊಳಿಸಿರುವುದರಿಂದ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಹೋಟೆಲ್‌, ಅಂಗಡಿ ವ್ಯಾಪಾರದಲ್ಲಿ ಚೇತರಿಕೆ ಕಂಡು ಬಂದಿದೆ.

ಈ ಬಾರಿ ಅದ್ಧೂರಿಯಾಗಿ ದಸರಾ ನಡೆದಿದ್ದರೆ, 10 ದಿನ ಮೈಸೂರಿನ ಎಲ್ಲಾ ಹೋಟೆಲುಗಳ ರೂಂ ಭರ್ತಿಯಾಗುತ್ತಿದ್ದವು. ಕೊರೊನಾ ಸಂಕಷ್ಟದಿಂದ ಉಂಟಾಗಿದ್ದ ಆರ್ಥಿಕ ನಷ್ಟ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿತ್ತು. ಆದರೆ ಈ ಬಾರಿಯೂ ಸರಳ ದಸರಾ ಆಚರಿಸುತ್ತಿರುವ ಕಾರಣ, ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರುಮೈಸೂರಿಗೆ ಬರುತ್ತಿಲ್ಲ. ಆದರೆ, ಹೋಟೆಲ್‌ ಉದ್ಯಮ ಕಳೆದ ಒಂದು ವಾರದಿಂದೀಚೆಗೆ ಚೇತರಿಸಿ ಕೊಳ್ಳುತ್ತಿದ್ದು, ದಸರಾ ಸಂದರ್ಭ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ.

 ಸಿ.ನಾರಾಯಣಗೌಡ, ಅಧ್ಯಕ್ಷ, ಹೋಟೆಲ್‌

ಹಾಗೂ ರೆಸ್ಟೋರೆಂಟ್‌ ಮಾಲಿಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next