ಹೊಸದಿಲ್ಲಿ: ಉತ್ತರದ ದಿಲ್ಲಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿ ಬಿಸಿಲಿಗೆ ತಂಪೆರೆಯುತ್ತಿರುವಂತೆಯೇ ಪೂರ್ವದ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮೇ 6ರ ವೇಳೆ ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇದರಿಂದಾಗಿ ಅಂಡಮಾನ್ ದ್ವೀಪ ಸಮೂಹದ ಸುತ್ತಮುತ್ತ ಮೇ 6, 7ರಂದು ಮಳೆಯಾಗಲಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಮುಂದಿನ 5 ದಿನಗಳಲ್ಲಿ ಚದುರಿದಂತೆ ಮಳೆ, ಗಾಳಿ, ಗುಡುಗು ಉಂಟಾಗಲಿದೆ.
ಹೈದರಾಬಾದ್‌ನಲ್ಲೂ: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲೂ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಪ್ರದೇಶಗಳಲ್ಲಿ ಬೋಟ್‌ಗಳನ್ನು ಬಳಕೆ ಮಾಡಿ ಜನರನ್ನು ಸ್ಥಳಾಂತರಿಸಲಾಗಿದೆ. ನಲ್ಗೊಂಡಾದ ಯಾದಾದ್ರಿಯಲ್ಲಿ ಮಳೆಯಿಂದಾಗಿ ರಸ್ತೆ ಒಡೆದು ಹೋಗಿದೆ.
ತಂಪೆರೆದ ಮಳೆ: ಈ ನಡುವೆ ಬಿಸಿಲ ಝಳದಿಂದ ಬಸವಳಿದಿದ್ದ ದಿಲ್ಲಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಪಂಜಾಬ್ ಮತ್ತು ಹರಿಯಾಣದ ಕೆಲ ಭಾಗಗಳು, ರಾಜಸ್ಥಾನದ ಉತ್ತರ ಭಾಗ, ಉತ್ತರ ಪ್ರದೇಶದಲ್ಲೂ ಆಲಿಕಲ್ಲು ಮಳೆಯಾಗಿದೆ.
ಗೋಧಿ ರಫ್ತು ನಿಷೇಧಕ್ಕೆ ಚಿಂತನೆ
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲು ಮುಂದಾಗಿದೆ. ಈ ಮೂಲಕ ದೇಶದಲ್ಲಿ ಅದರ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ. ಬಿಸಿ ಹವೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರಸಕ್ತ ಸಾಲಿನಲ್ಲಿ ಉದ್ದೇಶಿತ ಬೆಳೆ ಗುರಿಯಲ್ಲಿ 111 ಮಿ.ಟನ್‌ಗಳಿಂದ 105 ಮಿಲಿಯನ್ ಟನ್‌ಗೆ ಇಳಿಕೆ ಮಾಡಿದೆ.
ಇದನ್ನೂ ಓದಿ : ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಮಜುಂದಾರ್ ಗೆ 2 ವರ್ಷ ನಿಷೇಧ