Advertisement

ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

11:45 AM Aug 18, 2020 | Suhan S |

ಬೆಂಗಳೂರು: ಬಿಸಿಯೂಟದ ನೌಕರರ ವೇತನ ಬಿಡುಗಡೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ರಾಜ್ಯಸಮಿತಿಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಸಚಿವ ಸುರೇಶ್‌ಕುಮಾರ್‌ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್‌. ವರಲಕ್ಷ್ಮೀ, ರಾಜ್ಯದಲ್ಲಿ ಸುಮಾರು 1.17 ಲಕ್ಷ ಬಿಸಿಯೂಟದ ನೌಕರರಿದ್ದಾರೆ. ಅವರಿಗೆಲ್ಲ ಏಪ್ರಿಲ್‌ ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ ಬಿಸಿ ಯೂಟ ನೌಕರರು ಕಷ್ಟದಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 1.20 ಕೋಟಿ ರೂ.ಅನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ಸ್ಪಂದಿಸುತ್ತಿಲ್ಲ ಎಂದು ದೂರಿದರು. ವೇತನ ಪಾವತಿ ಮಾಡದೇ ಇದ್ದರೆ ಸಂಘದ ವತಿಯಿಂದ ರಾಜ್ಯದ ಎಲ್ಲ ತಾಪಂ ಹಾಗೂ ಜಿಪಂ ಎದುರು ಸರಣಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷೆ ಲಕ್ಷ್ಮಿದೇವಿ ಮಾತನಾಡಿ, ಬಿಸಿಯೂಟದ ನೌಕರರಿಗೆ ಕನಿಷ್ಠ ಆರು ತಿಂಗಳ ವರೆಗೆ ಪಡಿತರ ಒದಗಿಸಬೇಕು. ಲಾಕ್‌ ಡೌನ್‌ ಅವಧಿಯಲ್ಲಿ 7,500 ರೂ.ನಂತೆ ಮುಂದಿನ 6 ತಿಂಗಳು ಗೌರವಧನ ಪಾವತಿಸ ಬೇಕು. ಕೋವಿಡ್‌ ಭಾಗವಾಗಿ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಅಡುಗೆ ಮಾಡುತ್ತಿದ್ದ ನೌಕರರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಬಿಸಿಯೂಟದ ನೌಕರರಿಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ. ಸರ್ಕಾರ ಎಲ್‌ಐಸಿ ಆಧಾರಿತ ಪೆನ್‌ಷನ್‌ ಜಾರಿಗೆ ತರಬೇಕು. ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next