Advertisement

ಹಾಸ್ಟೇಲ್‌ ವಾರ್ಡನ್‌ ವರ್ಗಾವಣೆಗೆ ಆಗ್ರಹ

11:17 AM Feb 24, 2022 | Team Udayavani |

ಚಿತ್ತಾಪುರ: ಪಟ್ಟಣದ ಅಂಬೇಡ್ಕರ್‌ ವೃತ್ತದ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಸರ್ಕಾರಿ ಮೆಟ್ರಿಕ್‌ ನಂತರ ಬಾಲಕಿಯರ ವಸತಿ ನಿಲಯದ ವಾರ್ಡನ್‌ ವರ್ಗಾಯಿಸಿ, ಹೊಸ ವಾರ್ಡನ್‌ ನಿಯೋಜಿಸಬೇಕು ಎಂದು ಆಗ್ರಹಿಸಿ ಬುಧವಾರ ಬೆಳಗ್ಗೆ ಹಾಸ್ಟೆಲ್‌ ವಿದ್ಯಾರ್ಥಿನಿಯರು ಗೇಟ್‌ಗೆ ಬೀಗ ಜಡಿದು, ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

Advertisement

ಕಳೆದ ಎರಡು ಮೂರು ವರ್ಷಗಳಿಂದ ಕಸಕಡ್ಡಿ, ಹುಳು, ವಿಪರೀತ ನುಸಿ ತುಂಬಿದ ಆಹಾರಧಾನ್ಯ ಪೂರೈಸುತ್ತಿರುವ ಟೆಂಡರ್‌ ಕೂಡಲೇ ರದ್ದುಪಡಿಸಬೇಕು. ಗುಣಮಟ್ಟದ ಆಹಾರಧಾನ್ಯ ಸರಬರಾಜು ಮಾಡುವ ಮೂಲಕ ಆರೋಗ್ಯ ಕಾಪಾಡಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

ವಸತಿ ನಿಲಯದಲ್ಲಿ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಇಲ್ಲ. ಪೌಷ್ಟಿಕ ಆಹಾರ ನೀಡುತ್ತಿಲ್ಲ, ಶೌಚಾಲಯ ಸ್ವತ್ಛಗೊಳಿಸುವುದಿಲ್ಲ. ಶುದ್ಧ ಕುಡಿಯುವ ನೀರಿನ ಕೊರತೆ, ಸಿಸಿ ಟಿವಿ ಕೊರತೆ, ಲೈಬ್ರರಿ ಕೊರತೆ, ವಾಚಮನ್‌ ಕೊರತೆ, ಸೋಲಾರ್‌ ದುರಸ್ತಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ವಸತಿ ನಿಲಯದ ವಾರ್ಡನ್‌ಗೆ ವಿದ್ಯಾರ್ಥಿನಿಯರ ಕಾಳಜಿ ಇಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಕುರಿತು ಮೇಲಧಿ ಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ವಾರ್ಡನ್‌ ಬದಲಾವಣೆ ಮಾಡುವವರೆಗೂ ಇಲ್ಲಿಯೇ ಧರಣಿ ಕೂಡಲಾಗುವುದು ಎಂದು ಪಟ್ಟು ಹಿಡಿದರು.

ಸಮಾಜ ಕಲ್ಯಾಣಾಧಿಕಾರಿ ಮಲ್ಲಿನಾಥ ಹರಳಯ್ಯ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಆಗ ವಿದ್ಯಾರ್ಥಿನಿಯರು ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬರಬೇಕು ಎಂದು ಪಟ್ಟುಹಿಡಿದರು.

Advertisement

ನಂತರ ಗ್ರೇಡ್‌-2 ತಹಶೀಲ್ದಾರ್‌ ಅಮೀತ್‌ ಕುಲಕರ್ಣಿ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಭೇಟಿ ಮಾಡಿ, ಬೇಡಿಕೆ ಈಡೇರಿಕೆಗೆ ಸಮಾಯವಕಾಶ ಕೇಳಿದರು. ನಂತರ ವಿದ್ಯಾರ್ಥಿನಿಯರು ವಿಳಂಬ ಧೋರಣೆ ತೋರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಮಾಜ ಸೇವಕ ಮಣಿಕಂಠ ರಾಠೊಡ ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸಾತ್‌ ನೀಡಿದರು. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ನಂತರ ಹೊರಗಡೆಯಿಂದ ಊಟ ತರಿಸಿ ನೀಡಿದರು.

ಪಿಎಸ್‌ಐ ಎ.ಎ.ಸ್‌.ಪಟೇಲ್‌, ಮುಖಂಡರಾದ ಅಶ್ವತ್ಥ ರಾಠೊಡ, ಶ್ರೀಕಾಂತ ಸುಲೇಗಾಂವ, ಸಂಘಮೇಶ ರೋಣದ, ಸಿದ್ರಾಮಯ್ನಾ ಗೊಂಬಿಮಠ, ಮನೋಜಕುಮಾರ ರಾಠೊಡ, ಹನುಮಾನ ವ್ಯಾಸ್‌, ಆಕಾಶ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಇದ್ದರು.

ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸುವಲ್ಲಿ ಸಮಾಜ ಕಲ್ಯಾಣಾಧಿಕಾರಿ ಮತ್ತು ವಾರ್ಡನ್‌ ವಿಫಲರಾಗಿದ್ದಾರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ವಜಾ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು. -ಮಣಿಕಂಠ ರಾಠೊಡ, ಸಮಾಜ ಸೇವಕ

Advertisement

Udayavani is now on Telegram. Click here to join our channel and stay updated with the latest news.

Next