ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಹಾಸ್ಟೆಲ್, ಪಿಜಿ ಹಾಗೂ ಹೋಟೆಲ್ ಹಾಗೂ ಹೆಚ್ಚು ಜನ ಸೇರುವ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಲು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಲು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಸೋಮವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ವಿಶೇಷ ಆಯುಕ್ತರೊಂದಿಗೆ ತುರ್ತು ಸಭೆ ನಡೆಸಿದರು. ಈ ವೇಳೆ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೋಟೆಲ್‌ಗಳು, ಫಾಸ್ಟ್‌ಫುಡ್ ಮಳಿಗೆಗಳು, ಪಿಜಿ, ಹಾಸ್ಟೆಲ್ ಹಾಗೂ ಇಂದಿರಾ ಕ್ಯಾಂಟೀನ್‌ಗಳ ಸ್ವಚ್ಛತಾ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾಲೇಜು ಹಾಗೂ ಪಾರ್ಟಿಹಾಲ್‌ಗಳಲ್ಲಿ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.
ಧ್ವನಿವರ್ಧಕದ ಮೂಲಕ ಜಾಗೃತಿ: ಕೊರೊನಾ ವೈರಸ್ ಸೋಂಕಿನ ಬಗ್ಗೆ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ಸೋಂಕು ಹರಡಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಈ ಮೂಲಕ ರಿವು ಮೂಡಿಸಲಾಗುತ್ತಿದೆ.
ಪಾಲಿಕೆಯಿಂದ ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆ: ಕೊರೊನಾ ರೋಗಿಗೆ ಚಿಕಿತ್ಸೆಗೆ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಬಿಎಂಪಿಯಿಂದ ಆಧುನಿಕ ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಆ್ಯಂಬುಲೆನ್ಸ್‌ನಲ್ಲಿರುವ ಚಾಲಕ, ವೈದ್ಯ ಹಾಗೂ ನರ್ಸ್‌ಗಳಿಗೆ ಸ್ವಯಂ ರಕ್ಷಣೆ ದೃಷ್ಟಿಯಿಂದ ಸೂಟ್ ನೀಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ.
ಆಯುಕ್ತರು ನೀಡಿರುವ ಸೂಚನೆಗಳು
-ಬಿಬಿಎಂಪಿ ಆಸ್ಪತ್ರೆಗಳಲ್ಲಿ ನಿಗದಿತ ಅವಧಿಗೆ ಒಂದು ಬಾರಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
-ತಕ್ಷಣ ಜನೌಷಧಿ ಕೇಂದ್ರ ಆರಂಭಿಸಬೇಕು. ಮುಂದಿನ 15 ದಿನಗಳಿಗೆ ಬೇಕಾಗುವ ಔಷಧಿ, ಮಾಸ್ಕ್, ಚಿಕಿತ್ಸಾ ಉಪಕರಣ ಸಂಗ್ರಹಿಸಬೇಕು.
-ಬಿಬಿಎಂಪಿ ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಸೋಂಕು ಲಕ್ಷಣಗಳು, ಚಿಕಿತ್ಸಾ ವಿಧಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸೂಚನೆ.
-ರಸ್ತೆ ಬದಿಯ ಮಾಂಸ, ಮೀನು, ಚಿಕನ್ ಮಾರಾಟ ನಿಷೇಧ.ಆದರೆ, ಮಳಿಗೆಗಳಲ್ಲಿ ಮಾರಾಟಕ್ಕೆ ಅವಕಾಶ.