ಹೊಸಪೇಟೆ: ಎಸ್‌ಸಿ, ಎಸ್‌ಟಿ ಸಮುದಾಯ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ನೇತೃತ್ವದಲ್ಲಿ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು, ಶನಿವಾರ ಸಿಹಿ ಹಂಚಿ ಸಂಭ್ರಮಿಸಿದರು.
ಎಸ್‌ಸಿಗೆ ಶೇ.15 ರಿಂದ 17 ಹಾಗೂ ಎಸ್‌ಟಿಗೆ 3 ರಿಂದ 7 ಮೀಸಲಾತಿ ಹೆಚ್ಚಳಕ್ಕೆ ಕುರಿತಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ಅಂಗೀಕಾರಗೊಳಿಸಿದ ಕ್ರಮವನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಖುಷಿ ಪಟ್ಟರು.
ವಾಲ್ಮೀಕಿ ಸಮಾಜದ ಮುಖಂಡ ಕಿಚಿಡಿ ಶ್ರೀನಿವಾಸ ಮಾತನಾಡಿ, ಹಲವಾರು ವರ್ಷಗಳ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಅದರಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕಳೆದ 240 ದಿನಗಳಿಂದ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸರ್ಕಾರ ಕೊನೆಗೂ ಮಣಿದು, ಸರ್ಕಾರ ಈ ಎರಡು ಸಮುದಾಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಸಂತಸ ಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ.ಪಿ.ಉಮಾಪತಿ ಮಾತನಾಡಿ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಸಂತಸದ ವಿಷಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಮೂಲಕ ಮೀಸಲಾತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯರಾದ ಜೀವರತ್ನಂ, ಬಿಜೆಪಿ ಎಸ್‌ಟಿ ಜಿಲ್ಲಾಧ್ಯಕ್ಷ ಸುಭಾಷ್ ನಾಯಕ್, ತಾಲ್ಲೂಕು ಅಧ್ಯಕ್ಷ ಗುಜ್ಜಲ ರಾಮಾಂಜನಿ, ಸಂದೀಪ್ ಸಿಂಗ್, ಮಂಡಲ ಅಧ್ಯಕ್ಷ ಕಸಟ್ಟಿ ಉಮಾಪತಿ, ಮುಖಂಡರಾದ ವ್ಯಾಸನಕೇರಿ ಶ್ರೀನಿವಾಸ, ಕಟಗಿ ಜಂಬಯ್ಯ, ಕಟಿಗಿ ರಾಮಕೃಷ್ಣ, ಶಂಕರ್ ಮೇಟಿ, ಬಂಡೆ ಶ್ರೀನಿವಾಸ, ಕಣ್ಣಿ ಶ್ರೀಕಂಠ, ಮುಖಂಡರಾದ ಹಂಪಿಯ ಎಚ್.ಹುಲಗಪ್ಪ ಕಮಲಾಪುರ ಲಕ್ಷö್ಮಣ, ಬಡಗಿ ಹುಲಗಪ್ಪ ಇನ್ನಿತರರಿದ್ದರು.