Advertisement

ಅತಿವೃಷ್ಟಿ ಪೀಡಿತ ಪಟ್ಟಿಯಲ್ಲಿ ಹೊಸನಗರವೇ ಇಲ್ಲ!

06:26 PM Aug 14, 2021 | Shreeram Nayak |

ಹೊಸನಗರ: ಮಲೆನಾಡ ನಡುಮನೆಯಂತಿರುವ ಹೊಸನಗರದಲ್ಲಿ ಈ ಬಾರಿ ವ್ಯಾಪಕ ಮಳೆಯಾಗಿದೆ. ನೆರೆಹಾವಳಿ ಕೂಡ ಕಂಡು ಬಂದಿದ್ದು ಮಹತ್ವದ ಸಂಪರ್ಕ ಸೇತುವೆಗಳು ಸೇರಿದಂತೆ ಭಾರೀ ಹಾನಿ ಸಂಭವಿಸಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ಅತಿವೃಷ್ಟಿಗೊಳಗಾದ ತಾಲೂಕಿನ ಪಟ್ಟಿಯಲ್ಲಿ ಹೊಸನಗರ ಕಾಣದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಬರೋಬ್ಬರಿ ರೂ.39.33 ಕೋಟಿ ಹಾನಿ: ಹೌದು, ಈ ಬಾರಿ ಮಳೆಹಾನಿಯಿಂದ ತಾಲೂಕಿನಲ್ಲಿ ರೂ.39.33 ಕೋಟಿ ಹಾನಿ ಸಂಭವಿಸಿದೆ ಎಂದು ತಾಲೂಕು ಆಡಳಿತವೇ ಸರ್ಕಾರಕ್ಕೆ ವರದಿ ನೀಡಿದೆ.ಜಾನುವಾರು ಜೀವಹಾನಿ 5 ಪ್ರಕರಣದಿಂದ ರೂ.1.5 ಲಕ್ಷ,, ಜಾನುವಾರು ಕೊಟ್ಟಿಗೆ ಹಾನಿ 13 ಪ್ರಕರಣದಿಂದ 0.27ಲಕ್ಷ, ಸಂಪೂರ್ಣ ಮನೆ ಹಾನಿ 6 ಪ್ರಕರಣದಿಂದ 30 ಲಕ್ಷ, ಭಾಗಶಃ ಮನೆಹಾನಿ 5 ಪಕರಣದಿಂದ 5 ಲಕ್ಷ, ಅಲ್ಪಸ್ವಲ್ಪ ಮನೆಹಾನಿ 27 ಪ್ರಕರಣದಿಂದ 13.5 ಲಕ್ಷ, 61 ಹೆಕ್ಟೇರ್‌ ಕೃಷಿ ಬೆಳೆಹಾನಿಯಿಂದ 3.77 ಲಕ್ಷ, 3 ಹೆಕ್ಟೇರ್‌ ಪ್ರದೇಶ ತೋಟಗಾರಿಕಾ ಬೆಳೆಹಾನಿಯಿಂದ 0.40 ಲಕ್ಷ, 244 ಹೆಕ್ಟೇರ್‌ ಜಮೀನಿನಲ್ಲಿ ಮರಳು ತುಂಬಿ ಹಾನಿ 29.28 ಲಕ್ಷ, 72 ಪ್ರಾಥಮಿಕ ಶಾಲಾ ಕಟ್ಟಡಗಳ ಹಾನಿ 359 ಲಕ್ಷ, 35 ಅಂಗನವಾಡಿ ಕಟ್ಟಡಗಳಿಗೆ ಹಾನಿ 70 ಲಕ್ಷ, 9 ಗ್ರಾಪಂ ಕಟ್ಟಡಗಳ ಹಾನಿ 60 ಲಕ್ಷ, 21 ಪಿಎಚ್‌ಸಿ ಕಟ್ಟಡಗಳ ಹಾನಿ 88
ಲಕ್ಷ, 5.45 ಕಿಮೀ ಹೆದ್ದಾರಿ ಹಾನಿ 159 ಲಕ್ಷ, 22.32 ಕಿಮೀ ಜಿಲ್ಲಾ ಹೆದ್ದಾರಿ ಹಾನಿ 975 ಲಕ್ಷ, 217 ಕಿಮೀ ಗ್ರಾಮೀಣ ರಸ್ತೆ ಹಾನಿ 425 ಲಕ್ಷ, 8.5 ಕಿಮೀ ನಗರ ಪ್ರದೇಶದ ರಸ್ತೆ ಹಾನಿ 102 ಲಕ್ಷ, 42 ಸೇತುವೆಗಳ ಹಾನಿ 708 ಲಕ್ಷ, 21 ಆರ್‌ಡಿಪಿಆರ್‌ ಕೆರೆಗಳ ಹಾನಿ 161 ಲಕ್ಷ, 13 ಸಣ್ಣ ನೀರಾವರಿ ಕೆರೆ ಹಾನಿ 645 ಲಕ್ಷ, 1 ಸಣ್ಣ ನೀರಾವರಿ ಎಂಬ್ಯಾಕ್‌ವೆುಂಟ್‌ ಹಾನಿ 20 ಲಕ್ಷ, 350 ವಿದ್ಯುತ್‌ ಕಂಬಗಳ ಹಾನಿ 14 ಲಕ್ಷ,
45 11ಕೆವಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಹಾನಿ 45 ಲಕ್ಷ, 5 ವಿದ್ಯುತ್‌ ಲೈನ್‌ ಹಾನಿಯಿಂದ 2.5 ಲಕ್ಷ ಹಾನಿಯುಂಟಾಗಿದೆ ಎಂದು ತಾಲೂಕು ಆಡಳಿತ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ರವಾನಿಸಿದೆ.

ಇದನ್ನೂ ಓದಿ:ದಕ್ಷಿಣಕನ್ನಡ ಸೇರಿ ಎಂಟು ಜಿಲ್ಲೆಗಳಲ್ಲಿ ಈ ಹಿಂದಿನ ನಿಯಮಗಳೇ ಮುಂದುವರಿಕೆ : ಹೊಸ ನಿಯಮಗಳಿಲ್ಲ

ಸಚಿವದ್ವಯರೇ ಪ್ರತ್ಯಕ್ಷ ಸಾಕ್ಷಿ: ಜಿಲ್ಲೆಯಲ್ಲಿ ಮಳೆಹಾನಿಗೆ ತುತ್ತಾಗಿದ್ದು ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕು. ಹಾಗಾಗಿ ಜಿಲ್ಲಾಧಿಕಾರಿಗಳೇ
ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಗೃಹಮಂತ್ರಿ ಆರಗ ಜ್ಞಾನೇಂದ್ರ ಇಡೀ ದಿನ ಈ ಭಾಗದಲ್ಲೇ ಸಂಚರಿಸಿ ಹಾನಿಯ ಪ್ರತ್ಯಕ್ಷ ದರ್ಶನ ಮಾಡಿದ್ದರು. ಕೆರೆಹಳ್ಳಿ ಮತ್ತು ಕಸಬಾ ಹೋಬಳಿಯಲ್ಲಿ ಶಾಸಕ ಹಾಲಪ್ಪ ಕೂಡ ಮಳೆಹಾನಿ ಪರಿಶೀಲಿಸಿದ್ದರು. ಹಾನಿಯ ಬಗ್ಗೆ ಜಿಲ್ಲಾ ಧಿಕಾರಿಗಳಿಂದ ವರದಿ ಪಡೆದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ
ಸಚಿವರು ಭರವಸೆ ನೀಡಿದ್ದರು.

ಗಂಜಿ ಕೇಂದ್ರ ಕೂಡ ತೆರೆಯಲಾಗಿತ್ತು:
ಅಂಡಗದೋದೂರು ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಿಂದ ಪ್ರವಾಹ ಪರಿಸ್ಥಿತಿ ಕಂಡು ಬಂದಿದ್ದು 6 ಕುಟುಂಬಗಳು ನೆಲೆ ಕಳೆದುಕೊಂಡಿದ್ದವು. ಕೂಡಲೇ ರ್ಯಾವೆ ಸರ್ಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆದು ರಕ್ಷಣೆ ನೀಡಲಾಗಿತ್ತು. ಇಲ್ಲಿಗೂ ಕೂಡ ಸಚಿವದ್ವಯರು ಮತ್ತು ಜಿಲ್ಲಾ ಧಿಕಾರಿಗಳು ಭೇಟಿ ನೀಡಿ ಅಹವಾಲು ಸ್ವೀಕರಿಸಿದ್ದರು.

Advertisement

ಮೂರು ಜೀವ ಹಾನಿ: ಹೊಸನಗರ ತಾಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ಮೂವರು ಮೃತಪಟ್ಟಿದ್ದಾರೆ. ಎರಡು ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರ ನೀಡಲಾಗಿದೆ. ಒಂದು ಶವ ನದಿಯಲ್ಲಿ ಪತ್ತೆಯಾದ ಕಾರಣ ಪೊಲೀಸ್‌ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಾಕಿ ಇದ್ದು ಪರಿಹಾರ ವಿತರಣೆಯಾಗಿಲ್ಲ.

ಅತಿವೃಷ್ಟಿ ಪಟ್ಟಿಯಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ವಾಡಿಕೆ ಮಳೆಯಾಧಾರದಲ್ಲಿ ಮಳೆ ಕಡಿಮೆಯಾಗಿರಬಹುದು. ಆದರೆ ಕೇವಲ 12 ಗಂಟೆ ಅವಧಿಯಲ್ಲಿ 15 ದಿನಗಳ ಮಳೆ ಒತ್ತಟ್ಟಿಗೆ ಸುರಿದಿದ್ದು ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ವ್ಯಾಪಕ ಹಾನಿಯಾಗಿದೆ. ಪಟ್ಟಿ ಅವೈಜ್ಞಾನಿಕವಾಗಿದ್ದು ಬಿಟ್ಟು ಹೋದ ತಾಲೂಕುಗಳನ್ನು ಸೇರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು
-ಆರಗ ಜ್ಞಾನೇಂದ್ರ, ಗೃಹಮಂತ್ರಿ

ಹೊಸನಗರ ತಾಲೂಕು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಈ ಬಾರಿ ರಾಜ್ಯದಲ್ಲಿ ಒಂದೇ ದಿನ 401 ಮಿಮೀ ಮಳೆ ದಾಖಲಾದ ಚಕ್ರಾನಗರ ಕೂಡ ಹೊಸನಗರದಲ್ಲೇ ಬರುತ್ತದೆ. ಆದರೆ ಅತಿವೃಷ್ಟಿ ಪೀಡಿತ ಪಟ್ಟಿಯಲ್ಲಿ ಹೊಸನಗರ ಇಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಅನ್ಯಾಯವನ್ನು ಸರಿಪಡಿಸಿ ಅತಿವೃಷ್ಟಿ ಪಟ್ಟಿಗೆ ಹೊಸನಗರ ತಾಲೂಕನ್ನು ಸೇರ್ಪಡೆ ಮಾಡಬೇಕು.
-ಬಿ.ಜಿ. ಚಂದ್ರಮೌಳಿ, ಕೋಡೂರು

-ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next