Advertisement

ಕುಸಿಯುವ ಭೀತಿಯಲ್ಲಿ ಚಿಕ್ಕಪೇಟೆ ತಂಗುದಾಣ

11:57 AM Apr 14, 2019 | |

ಹೊಸನಗರ: ರಾಣೇಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸಾರ್ವಜನಿಕರ ತಂಗು ನಿಲ್ದಾಣವೊಂದು ಸಂಪೂರ್ಣ ಶಿಥಿಲಾವಸ್ಥೆ
ತಲುಪಿದ್ದು ಕುಸಿಯುವ ಭೀತಿಯಲ್ಲಿದೆ. ತುಕ್ಕು ಹಿಡಿದ ತಂಗುದಾಣದಲ್ಲೇ ಪ್ರಯಾಣಕ್ಕಾಗಿ ಕಾಯುವ ಅನಿವಾರ್ಯತೆಗೆ ಸಿಲುಕಿ ಈ ಭಾಗದ ಜನ ಪರದಾಡುವಂತಾಗಿದೆ.

Advertisement

ಇದು ರಾಣೇಬೆನ್ನೂರು- ಸಾಗರ- ಹೊಸನಗರ- ಕೊಲ್ಲೂರು ಮಾರ್ಗವಾಗಿ ಬೈಂದೂರಿಗೆ ಸಂಪರ್ಕ ಬೆಳೆಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ
ಸಾರ್ವಜನಿಕ ಬಸ್‌ ತಂಗುದಾಣದ ದೈನೇಸಿ ಸ್ಥಿತಿ. ಹೊಸನಗರ ತಾಲೂಕಿನ ನಗರ- ಚಿಕ್ಕಪೇಟೆ ಸರ್ಕಲ್‌ ನಲ್ಲಿರುವ ಈ ತಂಗುದಾಣ ಬಳಸಿ ದಿನವೊಂದಕ್ಕೆ
ನೂರಾರು ಪ್ರಯಾಣಿಕರು ಸಾಗುತ್ತಾರೆ. ಸುಮಾರು 8 ವರ್ಷಗಳ ಹಿಂದೆ ಸಂಸದರಾಗಿದ್ದ ಬಿ.ವೈ. ರಾಘವೇಂದ್ರ ತಮ್ಮ ಅನುದಾನಲ್ಲಿ ಈ ತಂಗುದಾಣ ನಿರ್ಮಾಣಕ್ಕೆ ಅವಕಾಶ ನೀಡಿದ್ದರು. ಆದರೆ ಈಗ ತಂಗುದಾಣ ಶಿಥಿಲಾವಸ್ಥೆಯಲ್ಲಿದ್ದು ಕುಸಿಯುವ ಭೀತಿಯಲ್ಲಿದೆ.

ಜನನಿಬಿಡ ಪ್ರದೇಶ: ಹೇಳಿ ಕೇಳಿ ನಗರ ಚಿಕ್ಕಪೇಟೆ ಸರ್ಕಲ್‌ ಸದಾ ಜನಜಂಗುಳಿ ಇರುವ ಸ್ಥಳ. ಶಿವಮೊಗ್ಗ, ಸಾಗರ, ಕೊಲ್ಲೂರು, ಉಡುಪಿ,
ಮಂಗಳೂರು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಅಲ್ಲದೆ ಪ್ರಮುಖ ಯಾತ್ರಾಸ್ಥಳ ಕೊಲ್ಲೂರು, ಸಿಗಂದೂರು, ಕೊಡಚಾದ್ರಿ, ಬಾಳೆಬರೆ
ಚಂಡಿಕಾಂಬಾ ಸನ್ನಿಧಿ ಸಂಪರ್ಕಿಸುವ ಪ್ರಮುಖ ಜಂಕ್ಷನ್‌ ಕೂಡ ಇದಾಗಿದೆ. ದಿನವೊಂದಕ್ಕೆ ನೂರಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಬಸ್ಸು ಗಳು ಇದೇ
ಸರ್ಕಲ್‌ ಬಳಸಿ ಸಂಪರ್ಕ ಸಾಧಿಸುತ್ತಿವೆ. ಹಾಗಾಗಿ ಚಿಕ್ಕಪೇಟೆ ತಂಗುದಾಣ ಜನರಿಗೆ ಅನಿವಾರ್ಯ ಮಾತ್ರವಲ್ಲ ಮಹತ್ವ ಪಡೆದಿದೆ.

ಕಬ್ಬಿಣದ ತಂಗುದಾಣ: ಕಳೆದ ಎಂಟು ವರ್ಷದ ಹಿಂದೆ ನವನವೀನ ಮಾದರಿಯಲ್ಲಿ ಸಂಪೂರ್ಣ ಕಬ್ಬಿಣವನ್ನೇ ಬಳಸಿ ತಂಗುದಾಣ ನಿರ್ಮಿಸಲಾಗಿತ್ತು. ಆದರೀಗ ಕಬ್ಬಿಣದ ಪಿಲ್ಲರ್‌, ಸರಳುಗಳು ತುಕ್ಕು
ಹಿಡಿದಿವೆ. ತುಕ್ಕು ಹಿಡಿದದ್ದನ್ನು ನೋಡಿದರೆ ಯಾರೇ ಆಗಲಿ ಒಮ್ಮೆ ಹೌಹಾರಬೇಕು. ಈ ಭಾಗದಲ್ಲಿ ಮಳೆ ವ್ಯಾಪಕ ಸುರಿಯುವ ಕಾರಣ ನಿಲ್ದಾಣ
ಬಾಳಿಕೆ ಬರಲಿಲ್ಲ ಎನ್ನಬಹುದಾದರೂ ನಿಲ್ದಾಣ ನಿರ್ಮಾಣಗೊಂಡ ಮೇಲೆ ಸ್ಥಳೀಯ ಆಡಳಿತವಾಗಲಿ, ಅಧಿಕಾರಿಗಳಾಗಲಿ ಈ ನಿಲ್ದಾಣದ ನಿರ್ವಹಣೆ
ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.

ದುರಸ್ಥಿಗೆ ಒತ್ತಾಯ: ಚಿಕ್ಕಪೇಟೆ ತಂಗುದಾಣದಲ್ಲಿ ದಿನಕ್ಕೆ ನೂರಾರು ಪ್ರಯಾಣಿಕರು ಬರುವುದು ಒಂದೆಡೆಯಾದರೆ ಈ ತಂಗುದಾಣಕ್ಕೆ
ಹೊಂದಿಕೊಂಡಂತೆ ಆಟೋ ನಿಲ್ದಾಣ ಕೂಡ ಇದೆ. ಸಂಪೂರ್ಣ ತುಕ್ಕು ಹಿಡಿದು ಯಾವಾಗ ಬೇಕಾದರೂ ಕುಸಿಯಬಹುದು ಎಂಬ ಸ್ಥಿತಿಯಲ್ಲಿರುವ ನಿಲ್ದಾಣ ಕಂಡು ಪ್ರಯಾಣಿಕರ ಜೊತೆಗೆ ಆಟೋ ಚಾಲಕರು ಆತಂಕಗೊಂಡಿದ್ದಾರೆ. ನಿಲ್ದಾಣವನ್ನು ಕೂಡಲೇ ದುರಸ್ಥಿಗೊಳಿಸಿ ಇಲ್ಲವೇ ಹಳೆ ನಿಲ್ದಾಣ ಕೆಡವಿ ಹೊಸ ನಿಲ್ದಾಣ ನಿರ್ಮಿಸಿ ಎಂದು ಸ್ಥಳೀಯರಾದ ಕುಮಾರ ಭಟ್‌, ವಿಶ್ವನಾಥ್‌, ಪ್ರಶಾಂತ್‌, ಉದಯಕುಮಾರ ಶೆಟ್ಟಿ, ಬಶೀರ್‌, ಸಂತೋಷ್‌, ಹರೀಶ್‌, ಪೂರ್ಣೇಶ್‌, ಕಾರ್ತಿಕ್‌, ಆಸಿಫ್‌ ಒತ್ತಾಯಿಸಿದ್ದಾರೆ.

Advertisement

ಒಟ್ಟಾರೆ ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಂಪರ್ಕಿಸುವ ಚಿಕ್ಕಪೇಟೆ ಸರ್ಕಲ್‌ ನಿಲ್ದಾಣ ಕುಸಿದು ಅಪಾಯ ಎದುರಾಗುವ ಮುನ್ನ ಸಂಬಂಧಪಟ್ಟ ಇಲಾಖೆ ಮತ್ತು ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಿದೆ. ನಿಲ್ದಾಣದ ತುರ್ತು ದುರಸ್ಥಿ ಇಲ್ಲವೇ ನೂತನ ನಿಲ್ದಾಣ ನಿರ್ಮಾಣದ ಬಗ್ಗೆ ಗಮನ ಹರಿಸಬೇಕಿದೆ.

ಕುಮುದಾ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next