Advertisement

ಆತ್ಮಹತ್ಯೆಗಾಗಿ ವಿಮಾನವನ್ನೇ ಕದ್ದ!

06:00 AM Aug 12, 2018 | Team Udayavani |

ವಾಷಿಂಗ್ಟನ್‌: ಉಗ್ರರು ವಿಮಾನ ಅಪಹರಿಸುವ, ಪ್ರಯಾಣಿಕರನ್ನು ಒತ್ತೆಯಿಟ್ಟಿರುವ ಉದಾಹರಣೆಗಳಿವೆ. ಆದರೆ, ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೇ ವಿಮಾನ ಅಪಹರಿಸಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಅಮೆರಿಕದ ಸೀಟಲ್‌- ಟಾಕೋಮಾ ಏರ್‌ಪೋರ್ಟ್‌ನಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿದೆ. ಅಷ್ಟಕ್ಕೂ ಆತ ವಿಮಾನ ಕದ್ದೊಯ್ದಿದ್ದು ಏಕೆ ಗೊತ್ತೇ? ಆತ್ಮಹತ್ಯೆ ಮಾಡಿಕೊಳ್ಳಲು!

Advertisement

ಅಲಸ್ಕಾ ಏರ್‌ಲೈನ್ಸ್‌ಗೆ ಸೇರಿದ “ದ ಹಾರಿಜಾನ್‌ ಏರ್‌ ಕ್ಯೂ400′ ವಿಮಾನವನ್ನು ಅದೇ ಸಂಸ್ಥೆಯ ಸಿಬ್ಬಂದಿ(ಮೆಕ್ಯಾನಿಕ್‌) ವಿಮಾನ ನಿಲ್ದಾಣದಿಂದ ಹೈಜಾಕ್‌ ಮಾಡಿದ್ದಾನೆ. ನಿಲ್ದಾಣದಲ್ಲಿ ನಿಂತಿದ್ದ ಖಾಲಿ ವಿಮಾನವನ್ನು ಈತ ದಿಢೀರನೆ ಚಲಾಯಿಸಿಕೊಂಡು ಹೋಗಿದ್ದಾನೆ. ತಕ್ಷಣ ಇದನ್ನು ಗಮನಿಸಿದ ವಿಮಾನ ನಿಲ್ದಾಣ ಸಿಬ್ಬಂದಿ ಭದ್ರತಾ ಪಡೆಯ ಗಮನಕ್ಕೆ ತಂದಿದ್ದಾರೆ. ಈ ಕುರಿತು ಮಾಹಿತಿ ಪಡೆದ ತಕ್ಷಣ ಕಾರ್ಯಾಚರಣೆಗಿಳಿದ ವಾಯುಪಡೆ, ಎರಡು ಲಘು ಯುದ್ಧ ವಿಮಾನಗಳನ್ನು ಕಳುಹಿಸಿತು. ಈ ಯುದ್ಧವಿಮಾನಗಳು ಹಾರಿಜಾನ್‌ ಅನ್ನು ಚೇಸ್‌ ಮಾಡುತ್ತಾ ಹೋಯಿತು.

ಇದು ಗೊತ್ತಾದ ಕೂಡಲೇ ಆ ವ್ಯಕ್ತಿಯು ವಿಮಾನವನ್ನು ನಗರ ಪ್ರದೇಶದ ಕಡೆಯಿಂದ ಸಮುದ್ರದ ಕಡೆಗೆ ತಿರುಗಿಸಿದ್ದಾನೆ. ಜನವಸತಿ ಪ್ರದೇಶದಿಂದ ದೂರದಲ್ಲಿರುವ ಕೆಟ್ರಾನ್‌ ದ್ವೀಪದ ಬಳಿ ವಿಮಾನ ಪತನಗೊಂಡಿದೆ. ಅದರ ಜೊತೆಗೆ, ಕದ್ದೊಯ್ದ ವ್ಯಕ್ತಿಯೂ ಅಸುನೀಗಿದ್ದಾನೆ. ದ್ವೀಪದಲ್ಲಿ ಪತನಗೊಂಡ ಕಾರಣ, ಬೇರಿನ್ನಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ಹಾರಾಟದ ದೃಶ್ಯ ಹಾಗೂ ಯುದ್ಧ ವಿಮಾನ ಹಿಂಬಾಲಿಸಿದ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಮಾನ ಹೈಜಾಕ್‌ ಮಾಡಿದ ವ್ಯಕ್ತಿ 29 ವರ್ಷದ ಮೆಕ್ಯಾನಿಕ್‌ ಎಂದು ವಿಮಾನಯಾನ ಸಂಸ್ಥೆ ಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next