ರಮಲ್ಲ : ಸ್ವತಂತ್ರ ಪ್ಯಾಲೇಸ್ತೀನ್ ರಾಷ್ಟ್ರವನ್ನು ಕಾಣುವ ದಿನಗಳು ಬೇಗನೆ ಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಪ್ರಕೃತ ಪಶ್ಚಿಮ ಏಶ್ಯ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಶನಿವಾರ ಸ್ವತಂತ್ರ, ಸಾರ್ವಭೌಮ ಪ್ಯಾಲೇಸ್ತೀನ್ ದೇಶಕ್ಕಾಗಿ, ಅಲ್ಲಿಗೆ ನೀಡಿರುವ ತಮ್ಮ ಚೊಚ್ಚಲ ಭೇಟಿಯಲ್ಲಿ ಹೇಳಿದರು.
“ಪ್ಯಾಲೇಸ್ತೀನ್ ಜನರ ಹಿತಾಸಕ್ತಿಯನ್ನು ಭಾರತ ರಕ್ಷಿಸುವುದೆಂಬ ಭರವಸೆಯನ್ನು ನಾನು ಅಧ್ಯಕ್ಷ ಅಬ್ಟಾಸ್ ಅವರಿಗೆ ನೀಡಿದ್ದೇನೆ. ಪ್ಯಾಲೇಸ್ತೀನ್ ಬೇಗನೆ ಶಾಂತಿಯುತವಾಗಿ ಒಂದು ಸ್ವತಂತ್ರ, ಸಾರ್ವಭೌಮ ದೇಶವಾಗಿ ಮೂಡಿ ಬರಲೆಂದು ಭಾರತ ಹಾರೈಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಪಶ್ಚಿಮ ಏಶ್ಯಕ್ಕೆ ಶಾಂತಿ ಬೇಗನೆ ಮರಳಲೆಂದು ಭಾರತ ಹಾರೈಸುತ್ತದೆ ಎಂದು ತಮ್ಮ ಭಾಷಣದಲ್ಲಿ ಮೋದಿ ಹೇಳುವ ಮೂಲಕ ತಮ್ಮ ಪ್ಯಾಲೇಸ್ತೀನ್ ಐತಿಹಾಸಿಕ ಭೇಟಿಯನ್ನು ಮುಗಿಸಿದರು. ಪ್ಯಾಲೇಸ್ತೀನ್‌ಗೆ ಭೇಟಿ ಕೊಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
“ನಮಗೆ ಗೊತ್ತಿದ್ದು; ಇದು ಹೇಳಿದಷ್ಟು ಸುಲಭ ಅಲ್ಲ ಅಂತ; ಆದರೆ ಇದರಲ್ಲಿ ನಮ್ಮ ಹಿತಾಸಕ್ತಿಗಳು ಅಡಕವಾಗಿರುವುದರಿಂದ ನಾವು ಅದಕ್ಕಾಗಿ ಸಾಕಷ್ಟು ಶ್ರಮಿಸಬೇಕಾಗತ್ತದೆ’ ಎಂದು ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಉಭಯತರು 50 ದಶಲಕ್ಷ ಡಾಲರ್ ನೆರವಿನ ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ 30 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯೂ ಸೇರಿದೆ.