ಧಾರವಾಡ: ಸಶ್ರೀ ಕುಮಾಂವು ಪ್ರತಿಷ್ಠಾನ ಮತ್ತು ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಸಹಯೋಗದಲ್ಲಿ ಕವಿಸಂನಲ್ಲಿ ರವಿವಾರ ಉತ್ತರ ಕರ್ನಾಟಕದ ಶೌರ್ಯ ಪದಕ ವಿಜೇತ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಜರುಗಿತು.
ಶೌರ್ಯ ಪ್ರಶಸ್ತಿ ಪಡೆದ ವೀರಯೋಧರು ಹಾಗೂ ಮರಣ ಹೊಂದಿದ ಸೈನಿಕರ ಕುಟುಂಬಸ್ಥರನ್ನು ಸನ್ಮಾನಿಸುವುದರ ಜೊತೆಗೆ ಅವರ ತ್ಯಾಗ, ಬಲಿದಾನ, ಶೌರ್ಯ ಮೆರೆದ ಘಟನೆಗಳನ್ನು ಮೆಲುಕು ಹಾಕಲಾಯಿತು. ಗೌರವ ಸ್ವೀಕರಿಸಿದ ಸೈನಿಕರು ಯುದ್ಧದ ಸಮಯದ ಘಟನಾವಳಿಗಳನ್ನು ಸ್ಮರಿಸಿದರು.
ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ| ಎಂ.ಐ. ಸವದತ್ತಿ ಮಾತನಾಡಿ, ನಾವಿಂದು ಜಾತಿ, ಭಾಷೆಗೆ ಬಡಿದಾಡುತ್ತಿದ್ದೇವೆ. ಸೈನಿಕರು ಮಾತ್ರ ನಿಜವಾಗಲೂ ದೇಶಕ್ಕಾಗಿ ಬಡಿದಾಡುತ್ತಿದ್ದಾರೆ. ಅವರ ದೇಶಭಕ್ತಿ ಅಪಾರ. ಅವರ ಕಾರ್ಯ ಸದಾ ಸ್ಮರಣೀಯ. ಸೈನಿಕರನ್ನು ಗೌರವಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಉತ್ತಮ ಕಾರ್ಯಗಳಿಂದ ದೇಶದ ಉನ್ನತಿ ಆಗಲಿದೆ. ಆದರೆ ಈ ಸ್ಥರಗಳಲ್ಲಿ ಕೇವಲ ಶೇ 5-10ರಷ್ಟು ಮಾತ್ರ ಕಾರ್ಯ ನಿರ್ವಹಣೆಯಾಗುತ್ತಿದೆ. ಸೇನೆಯಿಂದ ಮಾತ್ರ ಸಂಪೂರ್ಣ ಪ್ರಮಾಣದ ಕಾರ್ಯ ನಡೆಯುತ್ತಿದೆ. ಶೌರ್ಯ ಪ್ರಶಸ್ತಿ ಪಡೆದ ಸೈನಿಕರನ್ನು ಹಾಗೂ ಅವರ ಕುಟುಂಬಸ್ಥರನ್ನು ಜನರಿಗೆ ಪರಿಚಯ ಮಾಡಿಕೊಟ್ಟಿರುವ ಕೆಲಸ ಶ್ಲಾಘನೀಯ ಎಂದರು.
ಸಶ್ರೀ ಕುಮಾಂವು ಪ್ರತಿಷ್ಠಾನದ ಕಾರ್ಯ ನಿರ್ವಾಹಕ ಲೆ.ಜನರಲ್ ಎಸ್.ಸಿ. ಸರದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮ್ಮಿನಗಡ, ಕೃಷ್ಣ ಜೋಶಿ, ಅರವಿಂದ ಶಿಗ್ಗಾಂವ, ಕರ್ನಲ್ ಮೋಹನ ಮಠ, ಬ್ರಿಗೇಡಿಯರ್ ಎಸ್.ಬಿ. ಭಾಗವತ್ ಮೊದಲಾದವರಿದ್ದರು. ಸಿ.ಎಸ್. ಹವಾಲ್ದಾರ್ ಸ್ವಾಗತಿಸಿದರು.
ಬೆಳಗಾವಿಯಿಂದ 28, ಧಾರವಾಡ, ಕಾರವಾರ, ಬಾಗಲಕೋಟೆಯಿಂದ ತಲಾ 3 ಮತ್ತು ಗದಗ, ಕೊಪ್ಪಳ, ಬಳ್ಳಾರಿ, ಬೀದರ, ಕಲಬುರ್ಗಿ, ವಿಜಯಪುರದಿಂದ ತಲಾ ಒಬ್ಬ ಶೌರ್ಯ ಪದಕ ವಿಜೇತರು ಸೇರಿ ಒಟ್ಟು 38 ಜನರು ಪಾಲ್ಗೊಂಡಿದ್ದರು. ನಂತರ ಡಿಸಿ ಕಚೇರಿ ಬಳಿ ಸ್ಥಾಪಿಸಿರುವ ಕಾರ್ಗಿಲ್ ಸ್ತೂಪಕ್ಕೆ ತೆರಳಿ ನಮನ ಸಲ್ಲಿಸಲಾಯಿತು.