ಮಹಾಲಿಂಗಪುರ: ಸಮಾಜದ ಪರಿವರ್ತನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವವರ ಅವಶ್ಯಕತೆ ಇದೆ. ಇಂಥ ಮನೋಭಾವ ಹೊಂದಿದ ಸದಸ್ಯರು ಮಾತ್ರ ಲಯನ್ಸ್ ಸಂಸ್ಥೆಗೆ ಬನ್ನಿ, ಸಮಾಜದ ಪರಿವರ್ತನೆ ಲಯನ್ಸ್ ಸಂಸ್ಥೆಯ ಸದಸ್ಯರ ಗುರಿಯಾಗಿರಲಿ ಎಂದು ವೈದ್ಯ ಡಾ.ಎಚ್.ಜಿ. ದಡ್ಡಿ ಹೇಳಿದರು.
ಸ್ಥಳೀಯ ಎಪಿಎಂಸಿ ದಲಾಲ ವರ್ತಕರ ಸಂಘದ ಸಭಾ ಭವನದಲ್ಲಿ ನಡೆದ ಗ್ರೀನ್ ಬೇಸಿನ್ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಧ್ಯೇಯೋದ್ದೇಶಗಳನ್ನು ಅರಿತು ಸಂಘದಲ್ಲಿ ಸದಸ್ಯತ್ವ ಪಡೆಯಿರಿ, ಸದಸ್ಯರು ತಮ್ಮ ಸಮಯ, ಹಣ, ಶಕ್ತಿಯನ್ನು ಸಮಾಜದ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟು ಯಾವ ಸ್ಥಳಗಳಲ್ಲಿ ಜನರ ಹಿತಕ್ಕಾಗಿ ಏನು ಬೇಕಾಗಿದೆ ಎನ್ನುವುದನ್ನು ತಿಳಿದು ಮಾಡುವ ಸೇವಾ ಮನೋಭಾವವೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಸಮಾಜದ ಎಲ್ಲ ಜನಾಂಗಗಳ ಕುರಿತು ಯಾರಿಗೆ ಏನು ಕೊರತೆ ಇದೆ ಎಂದು ತಿಳಿದು ಅವರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಇದಾಗಿದೆ. ನಿಸ್ವಾರ್ಥ ಸೇವೆಯನ್ನೆ ಆಧಾರವಾಗಿಟ್ಟುಕೊಂಡು ಹುಟ್ಟಿದ ಸಂಸ್ಥೆ, ಜಗತ್ತಿನಲ್ಲಿ ದೇಶದ ಸಂಸ್ಕೃತಿ ಉಳಿದಿದೆ ಎಂದರೆ ಅದು ಶ್ರೀಸಾಮಾನ್ಯರಿಂದ ಮಾತ್ರ. ಆರೋಗ್ಯವಂತ ಬದುಕಿಗೆ ಪರಿಸರ ಕೂಡ ಅಷ್ಟೇ ಮುಖ್ಯವಾಗಿದೆ. ನಮ್ಮಲ್ಲಿರುವ ಎಲ್ಲ ಮರಗಳು ಯಾವಾಗ ನಾಶವಾಗುತ್ತವೆಯೋ ಅವಾಗಲೇ ಜಗತ್ತು ಪ್ರಳಯವಾಗುತ್ತದೆ. ಮರಗಳ ಉಳಿವಿನಿಂದ ಮನುಷ್ಯನ ಬದುಕು ಸಾಧ್ಯ. ಯುವಕರ ಜನಪರ ಸೇವೆಯಿಂದ ಮಾತ್ರ ಮನುಕುಲದ ಉದ್ಧಾರ ಸಾಧ್ಯ ಎಂದರು. ನೂತನ ಅಧ್ಯಕ್ಷ ಗೋವಿಂದ ಲಿಂಗಸಾನಿ, ಕಾರ್ಯದರ್ಶಿ ರಮೇಶ ಶೆಟ್ಟರ, ಖಜಾಂಚಿ ಶ್ರೀಮಂತ ಹಳ್ಳಿ ಹಾಗೂ ಸದಸ್ಯರಿಗೆ ಡಾ. ದಡ್ಡಿಯವರು ಪ್ರಮಾಣ ವಚನ ಬೋಧಿಸಿ, ಅಧಿಕಾರ ಹಸ್ತಾಂತರ ಮಾಡಿಸಿದರು. ನಂತರ ಸಂಸ್ಥೆಯಲ್ಲಿ ವಿವಿಧ ಸಾಧನೆ ಮಾಡಿದ ಸದಸ್ಯರಿಗೆ ಹಾಗೂ ಅತಿಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂಜು ಅಂಬಿ, ಶ್ರೀಶೈಲ ಕಾರಜೋಳ, ವಕೀಲ ಎಚ್.ಆರ್. ಮಾರಡ್ಡಿ, ರಾಜು ತೇಲಿ, ಡಾ.ಅಶೋಕ ದಿನ್ನಿಮನಿ, ಡಾ. ವಿಶ್ವನಾಥ ಗುಂಡಾ, ಸೋಮಶೇಖರ ಸಂಶಿ, ಸಂಜು ಶಿರೋಳ, ಬಸವರಾಜ ನಾಗನೂರ, ಬಾಲಕೃಷ್ಣ ಮಾಳವಾದೆ, ಶಿವಾನಂದ ಕೋಳಿಗುಡ್ಡ, ಪ್ರಕಾಶ ತಾಳಿಕೋಟಿ, ಸಾಗರ ಅವರಾದಿ, ವಿನಯ ಗುಂಡಾ, ಸಿದ್ದು ಕೊಣ್ಣೂರ, ಪ್ರಶಾಂತ ಅಂಗಡಿ, ಚನ್ನಪ್ಪ ಸಂಕ್ರಟ್ಟಿ, ಶಿವಲಿಂಗ ಸಿದ್ನಾಳ, ರಾಜು ತಾಳಿಕೋಟಿ, ಶಿವಾನಂದ ತೇಲಿ, ವಿನೋದ ಬಿರಾದಾರ, ಮಹಾಲಿಂಗ ಚನ್ನಾಳ ಸೇರಿದಂತೆ ಹಲವರು ಇದ್ದರು. ಡಾ. ಅಶೋಕ ದಿನ್ನಿಮನಿ ಸ್ವಾಗತಿಸಿದರು.