Advertisement

ಮತದಾರರಿಗೆ ಗೌರವ ತಂದಿರುವೆ, ಮತ್ತೊಮ್ಮೆ ಗೆಲ್ಲಿಸಿ

07:36 AM Mar 22, 2019 | Team Udayavani |

ಮೈಸೂರು: ಎರಡು ಅವಧಿಗೆ ಸಂಸದನಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನತೆ ತಮಗೇ ಮತ ನೀಡಲಿದ್ದು, ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವುದಾಗಿ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಂಸದ ಆರ್‌.ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಅನುದಾನ: ಹತ್ತು ವರ್ಷಗಳ ಕಾಲ ಸಂಸದನಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದೇನೆ. ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿರುವ ನನಗೆ ಕೆಲಸ ಮಾಡುವ ಹುಮ್ಮಸ್ಸು -ಚೈತನ್ಯ ಇದೆ. ನನ್ನನ್ನು ಗೆಲ್ಲಿಸಿದ ಮತದಾರರಿಗೆ ಗೌರವ ತರುವ ಕೆಲಸ ಮಾಡಿದ್ದೇನೆ.

ವರ್ಷದ 365 ದಿನಗಳಲ್ಲಿ 100 ದಿನ ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಿದ್ದೇನೆ. ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ದಲಿತರು ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಮತ ನೀಡಲ್ಲ. ದಲಿತರ ಮತ ಯಾವತ್ತಿಗೂ ಕಾಂಗ್ರೆಸ್‌ ಪಕ್ಷಕ್ಕೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ವಿಫ‌ಲವಾಗಿರುವ ಪ್ರಧಾನಿ ನರೇಂದ್ರಮೋದಿ ಅವರು, ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಚುನಾವಣಾ ಅಸ್ತ್ರವಾಗಿಸಿಕೊಂಡು, ಪ್ರಚೋದನೆ ಮೂಲಕ ಮತ ಹಾಕಿಸಿಕೊಳ್ಳಲು ನೋಡುತ್ತಿದ್ದಾರೆ ಎಂದರು.

Advertisement

ಕೇಂದ್ರ ಸಚಿವರನ್ನಾಗಿಸಿ: ಮಾಜಿ ಸಚಿವೆ ಡಾ.ಗೀತಾ ಮಹದೇವ ಪ್ರಸಾದ್‌ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಸಂಸದ ಆರ್‌. ಧ್ರುವನಾರಾಯಣ್‌ ಯಾವಾಗಲು ಮುಂದೆ ಇರುತ್ತಾರೆ, ಹೀಗಾಗಿ ಅವರನ್ನು  ಮತ್ತೊಮ್ಮೆ ಗೆಲ್ಲಿಸುವ ಮೂಲಕ ಕೇಂದ್ರ ಸಚಿವರನ್ನಾಗಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಆರ್‌.ಧ್ರುವನಾರಾಯಣ್‌ಗೆ ಸಮನಾದ ಅಭ್ಯರ್ಥಿ ಸಿಗದೆ ಬಿಜೆಪಿಯವರು ಚುನಾವಣಾ ನಿವೃತ್ತಿ ಘೋಷಿಸಿದ್ದವರನ್ನು ಕಣಕ್ಕಿಳಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಶಾಸಕ ಅನಿಲ್‌ ಚಿಕ್ಕಮಾದು, ಮಾಜಿ ಶಾಸಕರಾದ ಎ.ಆರ್‌.ಕಷ್ಣಮೂರ್ತಿ, ಎಸ್‌.ಬಾಲರಾಜು, ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ಜಯಕುಮಾರ್‌, ಪಕ್ಷದ ಮುಖಂಡರಾದ ಎಸ್‌.ಸಿ.ಬಸವರಾಜು, ಮಾರುತಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಧ್ರುವ ದೇಶದ 5ನೇ ಅತ್ಯುತ್ತಮ ಸಂಸದ: ಸೇಡು ತೀರಿಸಿಕೊಳ್ಳುವ ನಾಯಕ ಬೇಕೋ? ಕ್ಷೇತ್ರದ ಅಭಿವೃದ್ಧಿ ಮಾಡುವ ಸಂಸದರು ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಶಾಸಕ ಡಾ.ಯತೀಂದ್ರ ತಿಳಿಸಿದರು.  ಬಿಜೆಪಿ ವ್ಯಾಪಾರಿಗಳು, ಶ್ರೀಮಂತರ ಪರವಾದ ಪಕ್ಷ. ಹೀಗಾಗಿ ಶ್ರೀಮಂತರಿಗೆ ಅನುಕೂಲವಾಗುವ ರೀತಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ಸಾಧನೆ ಹಾಗೂ ರಾಜ್ಯದಲ್ಲಿನ ಸಿದ್ದರಾಮಯ್ಯ ಸರ್ಕಾರಗಳ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಧ್ರುವನಾರಾಯಣ್‌ ಅವರನ್ನು ಗೆಲ್ಲಿಸಿಕೊಳ್ಳಬೇಕು.ದೇಶದ ಸಂಸದರಲ್ಲಿ 5ನೇ ಅತ್ಯುತ್ತಮ ಹಾಗೂ ರಾಜ್ಯದ ಮೊದಲ ಸಂಸದ ಆರ್‌. ಧ್ರುವನಾರಾಯಣ್‌ ಆಗಿರುವ ಕಾರಣ ಸೇಡು ತೀರಿಸಿಕೊಳ್ಳುವ ನಾಯಕನ ಬದಲಿಗೆ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವ ಸಂಸದರನ್ನು ಆರಿಸಿಕೊಳ್ಳಿ ಎಂದು ಕೋರಿದರು.

25ರಂದು ನಾಮಪತ್ರ ಸಲ್ಲಿಕೆ: 25ರಂದು ಚಾಮರಾಜ ನಗರದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಈ ವೇಳೆ ರಾಜ್ಯ ಕಾಂಗ್ರೆಸ್‌ ನ ಹಲವು ನಾಯಕರು ಹಾಗೂ ಸಚಿವರಾದ ಸಾ.ರಾ. ಮಹೇಶ್‌, ಜಿ.ಟಿ. ದೇವೇಗೌಡ, ಶಾಸಕರಾದ ಡಾ.ಯತೀಂದ್ರ, ಎಂ.ಅಶ್ವಿ‌ನ್‌ ಕುಮಾರ್‌ ಜೊತೆಗಿರಲಿದ್ದಾರೆ ಎಂದು ಸಂಸದ, ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವನಾರಾಯಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next