Advertisement

ಗೌರವದಿಂದ ಹಿರಿಯ ನಾಗರಿಕರ ನೋಡಿಕೊಳ್ಳಿ: ಸೆಲ್ವಮಣಿ

12:37 PM Sep 14, 2017 | |

ಬೀದರ: ಹಿರಿಯ ನಾಗರಿಕರಿಗೆ ಮನಸ್ಸಿಗೆ ನೋವುಂಟು ಮಾಡದೇ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌.ಸೆಲ್ವಮಣಿ ಹೇಳಿದರು.

Advertisement

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಪೊಲೀಸ್‌ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಆಟಗಳು ಅವಶ್ಯಕವಾಗಿದ್ದು, ದೇಹವು ಚೈತನ್ಯದಿಂದ ಕೂಡಿರಲು ಆಟಗಳಲ್ಲಿ ಭಾಗವಹಿಸಬೇಕು. ಉಲ್ಲಾಸ ಹೆಚ್ಚುವುದರೊಂದಿಗೆ ಸಂತೋಷದಿಂದ ಇರಬಹುದು. ಹಿರಿಯ ನಾಗರಿಕರು ಉತ್ಸಾಹದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ಹಿರಿಯ ಜೀವಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಿರಿಯ ನಾಗರಿಕರು ಕಿರುಕುಳ, ಯಾವುದೇ ರೀತಿಯ ತೊಂದರೆಗಳಿಗೆ ಒಳಗಾದಲ್ಲಿ ಉಚಿತ ದೂರವಾಣಿ ಸಂಖ್ಯೆ:1090, 08482-223771, 100ಗೆ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ದಾಸ ಸೂರ್ಯವಂಶಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಯುವಕರಿಗಿಂತ ಹೆಚ್ಚುತ್ತಿದೆ. ಮಕ್ಕಳು ತಮ್ಮ ವೃದ್ಧ ಪೋಷಕರನ್ನು ವೃದ್ದಾಶ್ರಮದಲ್ಲಿ ಸೇರಿಸುವುದು ಕಂಡುಬರುತ್ತಿದೆ. ಇಂತಹ ಭಾವನೆ ತ್ಯಜಿಸಬೇಕು. ತಮ್ಮ ಪೋಷಕರನ್ನು ಮಕ್ಕಳು ಜತೆಗೆ ಇಟ್ಟುಕೊಂಡು ಆರೈಕೆ ಮಾಡಿದಲ್ಲಿ ಕುಟುಂಬ ಸುಂದರವಾಗಿರುತ್ತದೆ ಎಂದು ಹೇಳಿದರು.

Advertisement

ಇಲಾಖೆ ಉಪ ನಿರ್ದೇಶಕ ಈರಣ್ಣ ಪಾಂಚಾಳ ಮಾತನಾಡಿ, ನಮ್ಮ ಮನೆಯಲ್ಲಿರುವ ಹಿರಿಯರನ್ನು ಪ್ರೀತಿ ಗೌರವದಿಂದ
ನೋಡಿಕೊಳ್ಳಬೇಕು ಎಂದು ಹೇಳಿದರು. 

ಜಾನಪದ ಪರಿಷತ್ತಿನ ಅಧ್ಯಕ್ಷ ಎಸ್‌.ಬಿ ಕುಚಬಾಳ, ಸಾಹಿತಿ ಪಿ. ಬಸವರಾಜ ಮಾತನಾಡಿದರು. ಸಹಾಯವಾಣಿ ಕೇಂದ್ರದ
ಯೋಜನಾ ಸಂಯೋಜಕಿ, ಆಪ್ತ ಸಮಾಲೋಚಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರಿಯ ನಾಗರಿಕರು, ರೇಣುಕಾ ತಾಂದಳೆ, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬಿ. ಪಾಂಡುರಂಗ ಇದ್ದರು. 

ಸ್ಪರ್ಧೆಗಳಲ್ಲಿ ಹಿರಿಯ ಉತ್ಸಾಹ: ಹಿರಿಯ ನಾಗರಿಕರು ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ವಯಸ್ಸಿಗನುಗುಣ 60ರಿಂದ 70 ವರ್ಷ, 71ರಿಂದ 80 ವರ್ಷ ಮತ್ತು 80 ವರ್ಷ ಮೇಲ್ಪಟ್ಟವರು ಎಂದು ವಿಂಗಡಿಸಲಾಗಿದೆ. ಪುರುಷ ಹಾಗೂ ಮಹಿಳಾ ಹಿರಿಯರಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಓಟ, ನಡಿಗೆ ಮತ್ತು ಶಾಟ್‌ಫುಟ್‌ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next