Advertisement
ಜನರ ಆಗ್ರಹದ ಮೇರೆಗೆ ಈ ವರ್ಷ ಆಯವ್ಯಯದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಆರಂಭಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಕೈಬಿಟ್ಟಿದ್ದಾರೆ. ಸ್ತನಕ್ಯಾನ್ಸರ್ ಪರೀಕ್ಷೆಗೆ ಮೆಮೋಗ್ರಫಿ ಯಂತ್ರ ಲಭ್ಯ ಇರುವ ಜಿಲ್ಲೆಗಳ ಸಹಿತ 10ಜಿಲ್ಲೆಗೆ ಈ ಯಂತ್ರವನ್ನು ಕೊಟ್ಟಿದ್ದು ತುರ್ತು ಅಗತ್ಯವಿದ್ದ ಉತ್ತರ ಕನ್ನಡವನ್ನು ಕೈಬಿಟ್ಟಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆ ಸಾಮಾನ್ಯರಿಗೆ ತಲುಪುತ್ತಿಲ್ಲ.
Related Articles
Advertisement
11 ತಾಲೂಕುಗಳ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳ, ಸಿದ್ದಾಪುರ, ಹಳಿಯಾಳದಿಂದ ಕಾರವಾರಕ್ಕೆ ಹೋಗಲು 100ಕಿಮೀಗಿಂತ ದೂರ ಪ್ರಯಾಣಿಸಬೇಕು. ಅಲ್ಲಿಂದ ಪತ್ರಪಡೆದು 200ಕಿಮೀ ದೂರದ ಮಂಗಳೂರು ವೆನ್ಲಾಕ್‌ಗೆ ಹೋಗಬೇಕು. ಅಲ್ಲೂ ಸಾಧ್ಯವಿಲ್ಲವಾದರೆ ಮಣಿಪಾಲವೋ, ಬೆಂಗಳೂರೋ ನೋಡಿಕೊಳ್ಳಬೇಕು. ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆಯಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎಂಬುದು ಸತ್ಯ. ಆದರೆ ಬಡವ ಎಲ್ಲೆಲ್ಲಿ ಓಡಾಡಬೇಕು. ಆದಿನ ವೈದ್ಯರು ಸಿಗದಿದ್ದರೆ ಊರಿಗೆ ಬಂದು ಮತ್ತೆ ಹೋಗಬೇಕು. ಎಷ್ಟು ಜನ ಬಿಪಿಎಲ್ ಕಾರ್ಡುದಾರರಿಗೆ ಇದು ಸಾಧ್ಯ? ತಾಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪುಕ್ಕಟೆ ಕೆಲಸ ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಎಲ್ಲವನ್ನೂ ತಾವೇ ಮಾಡುತ್ತೇವೆ ಅನ್ನುತ್ತಾರೆ. ವಿಶ್ವಾಸವಿದ್ದಲ್ಲಿ ಚಿಕಿತ್ಸೆ ಪಡೆಯುವುದು ರೋಗಿಯ ಮೂಲಭೂತ ಹಕ್ಕು. ಜಿಲ್ಲೆಯ ಬಡವರಿಗೆ ಇದು ಸಾಧ್ಯವಿಲ್ಲ. ಜಿಲ್ಲಾ ಕೇಂದ್ರದಲ್ಲಿದ್ದವರಿಗೆ ಇದು ಸ್ವಲ್ಪಮಟ್ಟಿಗೆ ಅನುಕೂಲ.
ಎಪಿಎಲ್ ಕಾರ್ಡುದಾರರಿಗೆ ಮತ್ತು ಕಾರ್ಡು ಇಲ್ಲದವರಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಶೇ. 30ರಷ್ಟು ರಿಯಾಯತಿ ದೊರೆಯುತ್ತದೆ. ಈ ರಿಯಾಯತಿಗಾಗಿ ಆತ ಎರಡುಮೂರು ದಿಕ್ಕಿನಲ್ಲಿ ಓಡಾಡಲು ಸಾಧ್ಯವೇ? ಯಶಸ್ವಿನಿ ಇದ್ದಿದ್ದರೆ ಕಾರ್ಡು ಹಿಡಿದುಕೊಂಡು ಬೆಂಗಳೂರು, ಮಂಗಳೂರು ಎಲ್ಲಿ ಬೇಕಾದರೂ ನೂರಾರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಿತ್ತು. ಯಶಸ್ವಿನಿಯಲ್ಲಿದ್ದಷ್ಟು ರೋಗಗಳಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ಬರೆದಿಲ್ಲ. ತಪಾಸಣೆಗೆ ರಿಯಾಯತಿಯೂ ಇಲ್ಲ. ಎಲ್ಲವನ್ನೂ ಕೋಡ್‌ನಲ್ಲಿ ಗುರುತಿಸಲಾಗಿದ್ದು ಎಲ್ಲ ಪತ್ರಪಡೆದು ದೊಡ್ಡ ಆಸ್ಪತ್ರೆಗೆ ಹೋದರೆ ಕೋಡ್ ಇಲ್ಲವಾದರೆ ಚಿಕಿತ್ಸೆ ಇಲ್ಲ. ಈಗಿನ ಯೋಜನೆಯಲ್ಲಿ ಚಿಕಿತ್ಸೆ ಪಡೆಯುವ ನಿಯಮಾವಳಿ ಸರಳಗೊಳಿಸದಿದ್ದರೆ, ಯಶಸ್ವಿನಿ ಪುನರಾರಂಭಿಸದಿದ್ದರೆ, ಉಚಿತ ಚಿಕಿತ್ಸೆ, ರಿಯಾಯತಿ ಚಿಕಿತ್ಸೆ ಕನ್ನಡಿಯ ಗಂಟಾಗುತ್ತದೆ. ಜಿಲ್ಲೆಯ ಶಾಸಕರು, ಸಚಿವರು ವಿಧಾನಸಭೆಯಲ್ಲಿ ಪ್ರಶ್ನಿಸಿ ಜಿಲ್ಲೆಗೆ ನ್ಯಾಯ ಕೊಡಿಸಲಿ ಎಂಬುದು ಜನರ ಹೆಬ್ಬಯಕೆ.
•ಜೀಯು, ಹೊನ್ನಾವರ