ಹೊನ್ನಾಳಿ: ಪಟ್ಟಣದ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಸುಕ್ಷೇತ್ರ ಹಿರೇಕಲ್ಮಠಕ್ಕೆ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಹಾಗೂ ಪುಷ್ಕರಣಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.
ನದಿಯಿಂದ ಹಿರೇಕಲ್ಮಠ ಸುಮಾರು 3ಕಿ.ಮೀ. ದೂರವಿದ್ದು ಈಗಾಗಲೇ ಪೈಪ್ ಗಳ ಅಳವಡಿಕೆ ಕಾರ್ಯ ಶ್ರೀಮಠದ ಹತ್ತಿರ ಬಂದಿದ್ದು, ಕೆಲವೇ ದಿನಗಳಲ್ಲಿ ಪುಷ್ಕರಣಿಗೆ ಸಂಪರ್ಕ ಕೊಡುವ ಕೆಲಸ ಮುಗಿಯುತ್ತದೆ ಎಂದು ಕಾಮಗಾರಿಯನ್ನು ಪರಿಶೀಲಿಸಿದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸರ್ಕಾರದ ಹಾಗೂ ಶ್ರೀಮಠದ 90 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ನದಿಯಿಂದ ಪೈಪ್ ಲೈನ್ ಜೋಡಣೆ ಕಾಮಗಾರಿಗೆ ರೂ.60 ಲಕ್ಷ ಹಾಗೂ ಪುಷ್ಕರಣಿ ನಿರ್ಮಿಸುವ ಕಾಮಗಾರಿಗೆ ರೂ.30 ಲಕ್ಷ ವೆಚ್ಚವಾಗುತ್ತಿದೆ. 60 ಎಚ್‌ಪಿ ಸಾಮರ್ಥ್ಯದ ಮೋಟಾರ್‌ನಿಂದ ನದಿ ನೀರನ್ನು ಎತ್ತಿ 3 ಪೈಪ್‌ಲೈನ್ ಮೂಲಕ ಪುಷ್ಕರಣಿಗೆ ಬೀಳುವಂತೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪುಷ್ಕರಣಿ ಕಾಮಗಾರಿ ಭರದಿಂದ ಸಾಗಿದ್ದು ಇದೊಂದು ಅತ್ಯಂತ ಮನಮೋಹಕ ಪುಷ್ಕರಣಿಯಾಗಲಿದೆ. ಪುಷ್ಕರಣಿ ಉದ್ದ 160 ಅಡಿ, ಅಗಲ 60 ಅಡಿ, ಆಳ 20 ಅಡಿ ಇರಲಿದೆ ಎಂದರು. ಪುಷ್ಕರಣಿ ಮುಂಭಾಗ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಎರಡು ಸ್ನಾನಗೃಹಗಳನ್ನು ನಿರ್ಮಿಸಲಾಗುವುದು. ಭಕ್ತಾದಿಗಳು ಮುಂದಿನ ದಿನಗಳಲ್ಲಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಚನ್ನೇಶ್ವರಸ್ವಾಮಿ ದರ್ಶನಕ್ಕೆ ಆಗಮಿಸಬಹುದಾಗಿದೆ ಎಂದು ಹೇಳಿದರು.
ಮಾ. 5ರಿಂದ 7ರವರೆಗೆ ನಡೆಯಲಿರುವ ಲಿಂ| ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ| ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಾರಾಧನೆ ಅಂಗವಾಗಿ ನಡೆಯುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ನದಿ ನೀರು ಶ್ರೀಮಠಕ್ಕೆ ಬರುವಂತೆ ಮಾಡಲಾಗುವುದು. ಇದರಿಂದ ಕೃಷಿ ಮೇಳದಲ್ಲಿ ನೀರಿನ ಸಮಸ್ಯೆಯಾಗಲಾರದು ಎಂದು ಹೇಳಿದರು. ಮುಖಂಡರಾದ ಡಾ| ರಾಜಕುಮಾರ್, ಡಾ| ನಾ.ಕೊಟ್ರೇಶ್ ಉತ್ತಂಗಿ, ಸೋಮಣ್ಣ ಇತರರು ಇದ್ದರು.