Advertisement

ಭತ್ತ ಖರೀದಿ ನೋಂದಣಿ ಸ್ಥಗಿತ: ರೈತರ ಪರದಾಟ

06:37 PM Jun 29, 2020 | Naveen |

ಹೊನ್ನಾಳಿ: ಭತ್ತ ಖರೀದಿ ನೋಂದಣಿಯನ್ನು ಎಪಿಎಂಸಿಯಲ್ಲಿ ಸ್ಥಗಿತಗೊಳಿಸಿರುವುದರಿಂದ ರೈತರು ಪರದಾಡುವ ಸ್ಥಿತಿ ಉಂಟಾಗಿದೆ.

Advertisement

2019-20ನೇ ಸಾಲಿನಲ್ಲಿ ರೈತರು ಬೆಳೆದ ಭತ್ತವನ್ನು ಖರೀದಿಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಸರ್ಕಾರ 2019ರ ಡಿಸೆಂಬರ್‌ 30 ರಂದು ಅನುಮತಿ ನೀಡಿತ್ತು. ಫೆಬ್ರವರಿವರೆಗೂ ರೈತರು ನೋಂದಣಿ ಮಾಡಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. ಮಾರ್ಚ್‌ನಲ್ಲಿ ಪ್ರಾರಂಭವಾದ ಲಾಕ್‌ಡೌನ್‌ ಸತತ ಎರಡೂವರೆ ತಿಂಗಳು ಮುಂದುವರಿದಿದ್ದರಿಂದ ರೈತರು ಭತ್ತ ಖರೀದಿಗೆ ನೋಂದಣಿ ಮಾಡಿಸಲು ಆಗಲೇ ಇಲ್ಲ. ಈಗ ಜೂನ್‌ 15 ರಿಂದ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈ ಮಧ್ಯೆ ಎಪಿಎಂಸಿ ಮುಂಭಾಗದಲ್ಲಿ ನೋಂದಣಿ ಕಾರ್ಯ ಹಮ್ಮಿಕೊಳ್ಳದೆ ಒಳಭಾಗದ ಗೋದಾಮಿನಲ್ಲಿ ನೋಂದಣಿ ಕಾರ್ಯ ನಡೆಸಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಕನಿಷ್ಠ ಪಕ್ಷ ಈ ಬಗ್ಗೆ ಸೂಚನಾ ಫಲಕವನ್ನೂ ಹಾಕಿರಲಿಲ್ಲ. ಇದರಿಂದಾಗಿ ಎಷ್ಟೋ ಭತ್ತ ಬೆಳೆಗಾರರು ಎಪಿಎಂಸಿವರೆಗೆ ಬಂದು ಹಾಗೆಯೇ ಹಿಂದಿರುಗಿದ್ದೂ ಇದೆ. ಎಲ್ಲಿ ನೋಂದಣಿ ಮಾಡಿಸಬೇಕೆಂಬುದು ಗೊತ್ತಾಗದೆ ಭತ್ತವನ್ನು ಮನೆಯಲಿಟ್ಟುಕೊಂಡು ಕುಳಿತಿದ್ದಾರೆ.

ಭತ್ತದ ಬೆಲೆ 1815 ರೂ. ಹಾಗೂ ಪ್ರೋತ್ಸಾಹಧನ 200 ಸೇರಿ ಒಟ್ಟು 2015 ರೂ. ಇದೆ. ಹೊರಗಡೆ ಕೇವಲ 1400 ರಿಂದ 1500 ರೂ. ವರೆಗೆ ಇದೆ. ಭತ್ತವನ್ನು ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡೋಣವೆಂದರೆ ಅದೂ ಸಾಧ್ಯವಾಗುತ್ತಿಲ್ಲ.

ಕಳೆದ ಮೂರು ತಿಂಗಳಲ್ಲಿ ಕೇವಲ 876 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೊನ್ನಾಳಿಯ ಮಂಜುನಾಥ ರೈಸ್‌ಮಿಲ್‌, ದಾವಣಗೆರೆಯ ಮುರುಘರಾಜೇಂದ್ರ ಇಂಡಸ್ಟ್ರೀಸ್‌, ಬಸವೇಶ್ವರ ಇಂಡಸ್ಟ್ರೀಸ್‌ ಹಾಗೂ ಎಚ್‌.ಬಿ. ಇಂಡಸ್ಟ್ರೀಸ್‌ನಲ್ಲಿ ಭತ್ತ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.

ಗೋದಾಮಿನ ವ್ಯವಸ್ಥಾಪಕರು ಎಲ್ಲಿ ಹೇಳುತ್ತಾರೋ ಅಂತಹ ಕಡೆ ರೈತರು ತಮ್ಮ ಭತ್ತವನ್ನು ದಾಸ್ತಾನು ಮಾಡಬೇಕಿದೆ. ಅವಳಿ ತಾಲೂಕಿನ ಅನೇಕ ರೈತರು ಭತ್ತ ಖರೀದಿ ನೋಂದಣಿ ಸಲುವಾಗಿ ಎಪಿಎಂಸಿಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ನೋಂದಣಿ ದಿನಾಂಕ ಮುಗಿದಿರುವುದರಿಂದ ಈಗ ನೋಂದಣಿ ಮಾಡಿಸಿಕೊಳ್ಳುವುದಿಲ್ಲ ಎಂದು ಸಾಗ ಹಾಕುತ್ತಿದ್ದಾರೆ. ಇದರಿಂದ ರೈತರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು, ಸರ್ಕಾರ ನೋಂದಣಿ ಅವಧಿಯನ್ನು ವಿಸ್ತರಿಸಿ ಭತ್ತ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕಿದೆ.

Advertisement

‌ಸಮಸ್ಯೆಗೆ ಅಧಿಕಾರಿಗಳೇ ಕಾರಣ
ಕಷ್ಟ ಪಟ್ಟು ಭತ್ತ ಬೆಳೆದರೂ ಅಧಿಕಾರಿಗಳು ಖರೀದಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರವೇ ಎರಡುವರೆ ತಿಂಗಳು ಲಾಕ್ ಡೌನ್‌ ಮಾಡಿದೆ. ಅಲ್ಲದೆ ಅಧಿಕಾರಿಗಳು ನೋಂದಣಿ ಸ್ಥಳವನ್ನು ತಮಗೆ ಇಷ್ಟ ಬಂದ ಕಡೆ ಮಾಡಿರುವುದರಿಂದ ಎಲ್ಲಿ ನೋಂದಣಿ ಮಾಡಿಸಬೇಕೆಂದು ಗೊತ್ತಾಗದೆ ಅಲೆದಾಡಿ ಕೊನೆಗೆ ಕೇಳಿಕೊಂಡು ಇಲ್ಲಿಗೆ ಬಂದರೆ ನೋಂದಣಿ ಸಮಯ ಮುಗಿದಿದೆ ಎಂದು ಹೇಳುತ್ತಿದ್ದಾರೆ. ಸಾಲ ಮಾಡಿ ಬೆಳೆದ ನಾವು ಎಲ್ಲಿಗೆ ಹೋಗಬೇಕು ಎಂದು ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಭತ್ತ ಬೆಳೆಗಾರ ಬಸವನಗೌಡ ಬೇಸರ ವ್ಯಕ್ತಪಡಿಸಿದರು.

ಎಂ.ಪಿ.ಎಂ ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next