ಬೆಂಗಳೂರು: ಬಾಡಿ ಮಸಾಜ್ ಮಾಡಿಸಲು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳು ವಿಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಿಜಯನಗರ ನಿವಾಸಿಗಳಾದ ಜಾನ್ ಮೆಲ್ವಿನ್(46) ಹಾಗೂ ಮಂಜುನಾಥ್(32) ಬಂಧಿತರು.
ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನಾಭರಣ,ಎರಡು ದ್ವಿಚಕ್ರ ವಾಹನಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಬಾಡಿ ಮಸಾಜ್ ಮಾಡಿಸಿಕೊಳ್ಳುವ ಚಟಕ್ಕೆ ಬಿದ್ದಿದ್ದರು. ಅಲ್ಲದೇ, ಮಸಾಜ್ ಮಾಡುವ ವರಿಗೆ ಹೆಚ್ಚಿನ ಹಣ ಟಿಪ್ಸ್ ಕೊಡು ತ್ತಿದ್ದರು. ಹೀಗಾಗಿ, ಅದಕ್ಕೆಲ್ಲ ಹಣ ಸಂಗ್ರಹಿಸಲು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಬೀಗ ಮುರಿದು ಮನೆ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು. ಇತ್ತೀಚೆಗೆ ಆರೋಪಿಗಳು ಜ.7ರಂದು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಬೀಗ ಮುರಿದುಒಳನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಕಳವು ಮಾಡಿದ್ದರು.
ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಅಲ್ಲದೆ, ಆತ ನೀಡಿದ ಮಾಹಿತಿ ಮೇರೆಗೆ ಮತ್ತೂಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈ ಆರೋಪಿಗಳ ಬಂಧನದಿಂದ ಕೆಂಗೇರಿ, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳ ಲಾಗಿದೆ ಎಂದು ಪೊಲೀಸರು ಹೇಳಿದರು.
15-20 ಸಾವಿರ ಟಿಪ್ಸ್: ತಾವು ಕಳವು ಮಾಡಿದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳನ್ನು ಗಿರವಿ ಅಂಗಡಿ, ಫೈನಾನ್ಸ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಅದರಲ್ಲಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದರು.ಅಲ್ಲದೆ, ಮಸಾಜ್ ಮಾಡಲು ಬರುತ್ತಿದ್ದವರಿಗೆ 15ರಿಂದ 20 ಸಾವಿರ ಟಿಪ್ಸ್ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.