ಹಾಗೆ ನೋಡಿದರೆ ಭಾರತದ ಸೋಲಿಗೆ ಕಾರಣಗಳೇ ಇರಲಿಲ್ಲ. ಆದರೆ ಇದು ಫೈನಲ್ ಪಂದ್ಯಕ್ಕೂ ಹಿಂದಿನ ವಾತಾವರಣ. ಎಲ್ಲ ಪಂದ್ಯ ಗೆಲ್ಲುತ್ತ ಬಂದಿದ್ದೇವೆ, ಆಸ್ಟ್ರೇಲಿಯವನ್ನೂ ಮಣಿಸಿದ್ದೇವೆ, ಬ್ಯಾಟಿಂಗ್-ಬೌಲಿಂಗ್ ವಿಭಾಗಗಳೆರಡರಲ್ಲೂ ಉತ್ತುಂಗ ತಲುಪಿದ್ದೇವೆ, 120-130 ಲಕ್ಷದಷ್ಟು ವೀಕ್ಷಕರ ಭರಪೂರ ಬೆಂಬಲವಿದೆ, ಪ್ರಧಾನಿ ಸೇರಿದಂತೆ ಗಣ್ಯರ ದಂಡೇ ನೆರೆಯಲಿದೆ, ಜತೆಗೆ ಹೋಮ್ ಗ್ರೌಂಡ್, ಹತ್ತೂ ಪಂದ್ಯ ಗೆದ್ದವರಿಗೆ ಇನ್ನೊಂದು ಪಂದ್ಯ ಗೆದ್ದು ವಿಶ್ವಕಪ್ ಹೊತ್ತು ಮೆರೆಯುವುದೇನು ಮಹಾ!
Advertisement
ಭಾರತೀಯರೆಲ್ಲರೂ ಇದೇ ಲೆಕ್ಕಾಚಾರದಲ್ಲಿದ್ದರು. ವಿಶ್ವಕಪ್ ಆಗಲೇ ನಮ್ಮ ದಾಗಿದೆ, ನೋಡಿ… ಟ್ರೋಫಿ ಮೇಲೆ ಭಾರತದ್ದೇ ಹೆಸರು ಬರೆದಿದೆ, ಇದಕ್ಕೆ ಅಧಿಕೃತ ಮುದ್ರೆ ಬೀಳುವುದೊಂದು ಬಾಕಿ, ನೀವು ಈಗಲೇ ಬರೆದು ಬಿಡಿ… ಎಂಬ ಅತಿಯಾದ ನಂಬಿಕೆಯಲ್ಲಿ ನಾವೆಲ್ಲ ಮುಳುಗಿದ್ದಾಗ ಆಸ್ಟ್ರೇಲಿಯ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಮುನ್ನುಗ್ಗಿ ಬಂತು. ಚಾಂಪಿಯನ್ನರ ಆಟವಾಡಿತು. ಕೋಟ್ಯಂತರ ಭಾರತೀಯರ ಕಪ್ ಕನಸನ್ನು ಛಿದ್ರಗೊಳಿಸಿತು. ಫೈನಲ್‌ನಲ್ಲಿ ತವರಿನ ತಂಡವನ್ನೇ ಮಣಿಸಿ ವಿಶ್ವಕಪ್ ಗೆದ್ದ ಕೇವಲ ಎರಡನೇ ತಂಡವೆಂಬುದು ಆಸ್ಟ್ರೇಲಿಯ ಪಾಲಿನ ಹೆಗ್ಗಳಿಕೆ.
1975ರಿಂದ ಮೊದಲ್ಗೊಂಡ ಏಕದಿನ ವಿಶ್ವಕಪ್‌ನಲ್ಲಿ ಹೋಮ್ ಟೀಮ್ ವಿರುದ್ಧ ಫೈನಲ್ ಗೆದ್ದು ಚಾಂಪಿಯನ್ ಎನಿಸಿದ ಮೊದಲ ತಂಡ ವೆಸ್ಟ್ ಇಂಡೀಸ್. ಇದು 1979ರ ಕತೆ. ಇದನ್ನು ಹೊರತುಪಡಿಸಿದರೆ ಕಾಣುವುದು ಆಸ್ಟ್ರೇಲಿಯದ ಮೊನ್ನೆಯ ಸಾಹಸ. 1979ರ ಲಾರ್ಡ್ಸ್ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಎದುರಾದ ತಂಡ ಆತಿಥೇಯ ಇಂಗ್ಲೆಂಡ್. 1975ರ ಮೊದಲ ವಿಶ್ವಕಪ್ ಕೂಟದ ನೆಚ್ಚಿನ ತಂಡವಾಗಿದ್ದ ಇಂಗ್ಲೆಂಡ್ ಫೈನಲ್‌ಗೇ ಬಂದಿರಲಿಲ್ಲ. ಆದರೆ 4 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಏರಿತು. ತವರಿನ ತಂಡ ಕಪ್ ಎತ್ತುವು ದನ್ನು ಕಾಣಲು ಆಂಗ್ಲ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ ಕೊನೆಯಲ್ಲಿ ಎಲ್ಲವೂ ತಲೆ ಕೆಳಗಾಯಿತು.
Related Articles
ಭಾರತಕ್ಕೇನಾಯಿತು?
Advertisement
ಮೊನ್ನೆ ಭಾರತಕ್ಕೇನಾಯಿತು? 10 ಪಂದ್ಯ ಗೆದ್ದ ನಮಗೆ 11ನೇ ಜಯ ಖಂಡಿತ ಎಂಬ ಅತಿಯಾದ ಆತ್ಮವಿಶ್ವಾಸ ತಲೆಯನ್ನು ಆವರಿಸಿತ್ತು. ಆದರೆ ಇದಕ್ಕೆ ತಕ್ಕ ಯಾವುದೇ ಗೇಮ್‌ಪ್ಲ್ರಾನ್ ಇರಲಿಲ್ಲ. ಫೈನಲ್ ಎಂಬುದು ಸ್ಪೆಷಲ್ ಗೇಮ್ ಎಂಬುದಾಗಿ ಪರಿಗಣಿಸಲೇ ಇಲ್ಲ. ಇನ್ನೇನು ಗೆಲ್ಲಲು ಸಾಧ್ಯವಿಲ್ಲ ಎಂಬ ಸ್ಥಿತಿ ತಲುಪಿದಾಗ ಪಂದ್ಯವನ್ನೇ ಕೈಚೆಲ್ಲಿದರು! ಕೊನೆಯ ಕ್ಷಣದ ತನಕ ಹೋರಾಡುವ ಛಲವಾಗಲಿ, ಜೋಶ್ ಆಗಲಿ ಕಂಡು ಬರಲಿಲ್ಲ. ಅದು ನಮ್ಮವರ ರಣತಂತ್ರವೂ ಅಲ್ಲ, ಬಿಡಿ!
ಆಸ್ಟ್ರೇಲಿಯನ್ನರದ್ದು ಪಕ್ಕಾ ಚಾಂಪಿಯನ್ನರ ಆಟ. ಕಾಂಗರೂ ಗಳನ್ನೇನಿದ್ದರೂ ಲೀಗ್‌ನಲ್ಲೇ ಬಡಿದು ಹಾಕಬೇಕು. ನಾಕೌಟ್, ಫೈನಲ್ ತಲುಪಿದ ಬಳಿಕ ಅದು ಯಾರನ್ನೂ ಬಿಡುವುದಿಲ್ಲ. ಇಲ್ಲಿ ಭಾರತೀಯರ ದೌರ್ಬಲ್ಯವನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿಯೇ ಕಮಿನ್ಸ್ ಪಡೆ ಆಡಲಿಳಿದಿತ್ತು. ಇದು ಅವರ ಆಟದ ಪ್ರತೀ ಹಂತದಲ್ಲೂ ಕಣ್ಣಿಗೆ ರಾಚುತ್ತಿತ್ತು.ಹೌದು, ಫೈನಲ್ ಹೇಗೆ ಆಡಬೇಕು ಎಂಬುದನ್ನು ಆಸ್ಟ್ರೇಲಿಯನ್ನರಿಂದ ನೋಡಿ ಕಲಿಯಬೇಕು!
ಎಚ್. ಪ್ರೇಮಾನಂದ ಕಾಮತ್