Advertisement
ನಮ್ಮ ಕನ್ನಡದ ಹಲವಾರು ಕಿರುತೆರೆ ಧಾರಾವಾಹಿಗಳು ಪೈಪೋಟಿಯಿಂದ ವೀಕ್ಷಕರಿಗೆ ಉಣಬಡಿಸುವ ರಸದೌತಣಗಳ ಬಗ್ಗೆ ಚಿಂತಿಸಿದಾಗ ಹೀಗೆ ಒಂದು ಕುಟುಂಬ ಅಥವಾ ಮನೆಯ ಸದಸ್ಯರು ಇದ್ದರೆ ಅದು ಮನೆ ಎನ್ನಿಸಿಕೊಳ್ಳುತ್ತದಾ? ಕುಟುಂಬದ ಜೊತೆಯಲ್ಲಿ, ಮನೆ ಎಂಬೋ ನೆಮ್ಮದಿಯ ತಾಣದಲ್ಲಿ ಕಳೆವ ಸಮಯಕ್ಕೆ ಬೆಲೆ ಕಟ್ಟಲಾಗದು. ಮನೆ ಅದೆಷ್ಟು ವೈಭವೋಪೇತವಿರಲಿ ಅಥವಾ ಪುಟ್ಟ ಸರಳವಾದ ಮನೆಯಾಗಿರಲಿ, ಅದು ನಮ್ಮದು. ದಣಿದ ಮೈಮನಗಳ ವಿಶ್ರಾಂತಿಯ ತಾಣ. ಮನೆಯಲ್ಲಿ, ಹೆತ್ತವರ ಜೊತೆ ಅಥವಾ ಮಡದಿ, ಮಕ್ಕಳ ಒಡನಾಟ, ಪತಿ, ಪತ್ನಿಯ ಸಾಂಗತ್ಯದ ಕ್ಷಣಗಳು ಎಲ್ಲ ಒತ್ತಡವನ್ನು ಕಳೆದು ಮೈಮನಸ್ಸನ್ನು ಹಗುರಾಗಿಸುವ ತಂಪಿನ ತಾಣ ಎನ್ನುವುದು ಸತ್ಯ. ಮುಕ್ತವಾಗಿ ಮನಸ್ಸುಗಳು ಬೆಸೆಯುವ ಮನೆ ಬರೀ ನಾಲ್ಕು ಗೋಡೆಗಳ ಕಟ್ಟಡವಲ್ಲ. ಅದಕ್ಕೊಂದು ಪಾವಿತ್ರ್ಯವಿದೆ. ಮನೆಯವರು ಒಬ್ಬರ ಹಿತಕ್ಕಾಗಿ ಇನ್ನೊಬ್ಬರು ಆತ್ಮಾರ್ಥವಾಗಿ ಶ್ರಮಿಸುವ ನಿಸ್ವಾರ್ಥತೆ. ಈಗ ಕುಟುಂಬದ ಬಂಧಗಳು ಸಡಿಲವಾಗುತ್ತಿವೆ ಎನ್ನುವ ಕೂಗು ಮೇಲಿಂದ ಮೇಲೆ ಕೇಳಿ ಬರುತ್ತಿವೆ; ಹಾಗೇ ಬಂಧಗಳು ಬಿಗಿಯಾಗಿ ಬೆಸೆದ ಮನೆಗಳೂ ಸಹಸ್ರಾರು. ಸಾಮಾನ್ಯವಾಗಿ ಮನೆ ಎಂದರೆ ಎಲ್ಲ ವಯೋಮಾನದ ಸದಸ್ಯರೂ ಇರುತ್ತಾರೆ. ಇಂದಿಗೆ ಮನೆಯ ಒಳಗಿದ್ದೇ ಮನರಂಜನೆ ಎಂಬ ಹೆಸರಿನ ಕಾರ್ಯಕ್ರಮಗಳನ್ನು ತೋರಿಸುವ ಟೆಲಿವಿಷನ್ ನಿಧಾನವಾಗಿ ಮನೆಯವರ ಮುಂದೆ ಉಣಬಡಿಸುವ ಧಾರಾವಾಹಿಗಳೆಂಬ ಮನೆ ಮನೆ ಕಥೆಗಳು ಒಟ್ಟಾರೆಯಾಗಿ ವೀಕ್ಷಕರಿಗೆ ಅದೇನನ್ನು ಕೊಡುತ್ತವೆ?
Related Articles
Advertisement
ಹೀಗೇಕೆ ಎಂದು ದಿಗ್ಭ್ರಮೆಯಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಇಂದಿಗೂ ಮರೆಯುವಂತಿಲ್ಲ. ಕಥೆಯೇ ಇಲ್ಲದೆ ವರ್ಷಗಟ್ಟಲೆ ಆಫ್ರಿಕನ್ ಸ್ನೆಯಿಲ… ಥರ ತೆವಳುವ ಈ ಧಾರಾವಾಹಿಗಳ ಹೆಚ್ಚಿನ ವೀಕ್ಷಕರು ಮಹಿಳೆಯರು. ಅದರಲ್ಲೂ ಮಧ್ಯಮ ವರ್ಗದವರು. ಬದುಕಿನಲ್ಲಿ ಕಷ್ಟ-ಸುಖಗಳನ್ನು ಅನುಭವಿಸುವ ಅವರಿಗೆ ಅತೀವ ಶ್ರೀಮಂತರ ಕಥೆಗಳು ಹೆಚ್ಚು ಹತ್ತಿರವಾಗುತ್ತದೆ. ಅವರ ಉಡುಗೆ, ತೊಡುಗೆ, ಆಹಾರ, ವಿಹಾರ, ವೈಭವದ ಬದುಕು, ಐಷಾರಾಮಿ ಕಾರುಗಳು, ಮನೆಯಲ್ಲೂ ಉಡುವ ರೇಷ್ಮೆ ಸೀರೆಗಳು, ಅರಮನೆಯ ಹಾಗಿರುವ ಮನೆಗಳು ಎಲ್ಲವನ್ನೂ ಮಧ್ಯಮವರ್ಗದ ಮಹಿಳೆ ಕಾಣಲು ಇಚ್ಛಿಸುತ್ತಾಳೆ. ಅವುಗಳನ್ನು ಬೆರಗಾಗಿ ನೋಡುವ ಆಕೆಗೆ ಅವರಿಗಿಂತ ತಾನು, ತನ್ನ ಕುಟುಂಬದವರು ಸುಖೀಗಳು ಎನ್ನಿಸುವುದು ಮುಖ್ಯ. ಅದಕ್ಕಾಗಿ ನಿರಂತರವಾಗಿ ಕಷ್ಟ ಕಷ್ಟ ಕಷ್ಟ. ರಾಶಿ ಚಿನ್ನ ಹೇರಿದ ಸೊಸೆಗೆ ಸುಖ, ನೆಮ್ಮದಿ ಇಲ್ಲವಾದಾಗ ಅವರಿಗಿಂತ ತಾನೇ ನೆಮ್ಮದಿಯಾಗಿದ್ದೇನೆ ಎನಿಸಬೇಕು, ಕದನ, ಕಾದಾಟ, ವಂಚನೆ, ಮೋಸ ನಿತ್ಯದ ಬದುಕಾಗುವಾಗ ತನ್ನಲ್ಲಿ ಹಾಗಿಲ್ಲವೆಂಬ ಸಂತೃಪ್ತಿ ಉಕ್ಕುತ್ತದೆ, ಈಗಂತೂ ಗಂಡಸರನ್ನು ವಿಲನ್ ಪಾತ್ರದಲ್ಲಿ ತರುವ ಬದಲಿಗೆ ಒಬ್ಬ ಯುವತಿಯನ್ನೇ ವಿಲನ್ ಆಗಿ ಕುಣಿಸಿದರೆ ಹೆಚ್ಚು ಪ್ರಭಾವ ಬೀರುತ್ತದೆ. ಒಬ್ಬರಿಗೊಬ್ಬರು ನಂಬದಂಥ ವಾತಾವರಣವನ್ನು ಸೃಷ್ಟಿಸತಕ್ಕದ್ದು. ಅತೀವವಾಗಿ ಕಂಡ ಕಂಡ ಗೋಸಾಯಿಗಳ ಹಿಂದೆ ಹೋಗಿ ಮನೆಯ ಕಷ್ಟ ಹೇಳಿ ಮೊರೆಯಿಡುವಿಕೆ, ಇವೆಲ್ಲ ವಾಸ್ತವವಾಗಿ ಸಾಮಾನ್ಯ ಮಹಿಳೆಯನ್ನು ಸೆಳೆದುಕೊಳ್ಳಲು ಮಾಡುವ ಅತಿ ಬುದ್ಧಿವಂತಿಕೆಯ ತಂತ್ರ ಎಂದು ಅವರ ಮಾತಿನಿಂದ ಅರ್ಥವಾದಾಗ ಬೆಚ್ಚಿಬೀಳುವ ಹಾಗಾಗಿತ್ತು. ಇವನ್ನೆಲ್ಲ ನಿತ್ಯ ಕಾಣುವ ಅತ್ತೆ ತನ್ನ ಸೊಸೆಯತ್ತ ಸಂಶಯದ ದೃಷ್ಟಿ ಹಾಯಿಸಿ ಅವಳು ಕೊಟ್ಟಿದ್ದು ತಿನ್ನಲು ಅನುಮಾನಿಸಿದರೆ! ಸೊಸೆ ಆ ತನಕ ವಿಶ್ವಾಸವಾಗಿದ್ದ ಅತ್ತೆಯತ್ತ ದುರುದುರು ನೋಡಿ ಗುರಾಯಿಸಿದರೆ ಮನೆ ಮನೆಯ ಸ್ಥಿತಿ ಹದಗೆಡದೆ ಇದ್ದೀತೇ?
ಸೊಸೆ ಕೊಟ್ಟ ಕಾಫಿ ಅತ್ತೆ ಮುಟ್ಟಲಿಕ್ಕಿಲ್ಲ. ಅತ್ತೆ ಮಾಡಿದ ತಿಂಡಿ ಸೊಸೆ ತಿನ್ನಲಿಕ್ಕಿಲ್ಲ. ಇವೆಲ್ಲ ಮನೆ-ಮನೆಗಳನ್ನು ನಿಧಾನವಾಗಿ ಒಡೆಯುವ ವಿಷವಲ್ಲವೇ? ಸುಖ-ಸೌಹಾರ್ದತೆಗೆ ಸಿರಿವಂತಿಕೆಗಿಂತ ಮಿಗಿಲಾದದ್ದು ಪರಸ್ಪರ ಮಧುರ ಸಂಬಂಧಗಳು. ಈ ಧಾರಾವಾಹಿಗಳು ದಿನೇ ದಿನೇ ತೆವಳುತ್ತ ಉಣಬಡಿಸುವ ಕಾಳಗ, ಕದನ, ಮೋಸ, ವಂಚನೆ ಎನ್ನುವ ನಿಧಾನ ವಿಷ ಕಲ್ಲು, ಇಟ್ಟಿಗೆ, ಸಿಮೆಂಟ್, ಗಾರೆ ಸೇರಿಸಿ ಕಟ್ಟಿದ ಮನೆ ಮನೆಗಳನ್ನು ಮುರಿದು ಹಾಕುವುದರಲ್ಲಿ ಅನುಮಾನವಿಲ್ಲ.
ಇತರ ಭಾಷೆಗಳ, ಮಲಯಾಳ ಚಾನೆಲ…ಗಳಲ್ಲಿ ಅದು ಹೇಗೆ ಅವರು ಉತ್ತಮವಾದ ಕಥೆಗಳನ್ನು ಆಯ್ಕೆ ಮಾಡಿ ವೀಕ್ಷಕರ ಮನ ಗೆಲ್ಲುತ್ತಾರೆ? ಈ ಪರಿಯ ಮಹಿಳಾ ವಿಲನ್‌ಗಳು ಅಲ್ಲಿಲ್ಲ. ವಿಲನ್‌ಗಳೆಲ್ಲ ಪುರುಷರೇ. ಸರಳವಾಗಿ ಪಂಚೆ, ಅಡ್ಡ ಮುಂಡು ಉಟ್ಟ ನಟ-ನಟಿಯರ ಅಬ್ಬರದ, ಐಷಾರಾಮಿ ಬದುಕಿಲ್ಲದ, ಪ್ರಾಕೃತಿಕ ದೃಶ್ಯಗಳಿಂದ ಕೂಡಿದ್ದು ಹಿಟ್ ಆಗುತ್ತದೆ. ಅಲ್ಲಿ ನಡೆಯುವುದು ಇÇÉೇಕೆ ನಡೆಯಬಾರದು?
ಮುಕ್ತಾಯವಾಗಿ ಕನ್ನಡದ ಸಿರಿಗಂಪನ್ನು ಸಮರ್ಥವಾಗಿ ಬಿಂಬಿಸಿ ವೀಕ್ಷಕರ ಮನಗೆದ್ದ ಟೆಲಿವಿಷನ್ ಧಾರಾವಾಹಿಗಳೂ ಇವೆೆ. ಅವುಗಳು ಜನತೆಯ ಮನದಲ್ಲಿ ಅಚ್ಚಳಿಯದ ಪ್ರಭಾವ ಬೀರುವುದು ನಿಜ. ಆದರೆ, ಅಂಥ ಕಲಾತ್ಮಕತೆಯ ಅಭಾವ ಜಾಸ್ತಿಯಾಗಿ ಥಳುಕು ಬಳುಕಿನ ಟೊಳ್ಳು ಎದ್ದೆದ್ದು ಕುಣಿಯುತ್ತದೆ. ಅತ್ತೆಯ ಕಥೆಗಳಿವೆ, ನಿರ್ದೇಶಕರಿದ್ದಾರೆ, ತಾಂತ್ರಿಕ ವರ್ಗವಿದೆ. ಎಲ್ಲ ಇದ್ದೂ ಕ್ವಾಲಿಟಿಗಿಂತ ಅಬ್ಬರವೇ ಹೆಚ್ಚಾಗುತ್ತಿದೆ. ಇಂಥ ಕಥೆಗಳು ಸಮಾಜಕ್ಕೆ ಕೊಡುವುದೇನನ್ನು ?
ಕೃಷ್ಣವೇಣಿ ಕಿದೂರು