ಬೆಂಗಳೂರು: ಲಕ್ಷಾಂತರ ಜನ ರೈತರ ಬದುಕಿಗೆ ಬೆನ್ನೆಲುಬು ಆಗಿರುವ ಅಡಿಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರವಿಲ್ಲ, ಬದಲಿಗೆ ಅನೇಕ ಬಗೆಯಲ್ಲಿ ಲಾಭವಿದೆ ಎಂಬ ಬಗ್ಗೆ, ಸಂಶೋಧನೆಗಳು ನಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕ ಮತ್ತು ನಿಷೇಧಿಸಬೇಕು ಎಂದು ನೀಡಿದ್ದ ಹೇಳಿಕೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ, ಅಡಿಕೆ ದೇಹಕ್ಕೆ ಹಾನಿಕಾರಕ ಅಲ್ಲ, ಆ ರೀತಿ ಮಾತಿನಿಂದ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ರಾಜ್ಯದ ಅಡಿಕೆ ಕಾರ್ಯಪಡೆ ನಿಯೋಗದ ವತಿಯಿಂದ ದಿಲ್ಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು ಎಂದು ಹೇಳಿದರು.
ಅಡಿಕೆ ಬಗ್ಗೆ ಕೋರ್ಟ್‌ನಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನು ನೀಡಬಾರದು, ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಪರಿಶೀಲನೆಗೆ ತಜ್ಞರ ಸಮಿತಿ: ಬಿ.ಸಿ. ನಾಗೇಶ್
ಅಡಿಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರಕಾರ ಸುಪ್ರೀಂ ಕೋರ್ಟ್‌ಗೆ ಒಂದು ಅಫಿದವಿತ್ ನೀಡಿದ್ದು, ಈ ಅಫಿದವಿತ್ ಅನ್ನು ತೆಗೆಯುವ ಸಲುವಾಗಿ ನಾವು ಪ್ರಯತ್ನ ಮಾಡ್ತಿದ್ದೇವೆ ಹಾಗೂ ಅಡಿಕೆ ಹಾನಿಕರಕ ಅಲ್ಲ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನು ಸಹ ಮಾಡಲಾಗುತ್ತಿದೆ ಎಂದು ಹೇಳಿದರು.