Advertisement

ಬಿಟ್‌ ಕಾಯಿನ್‌ ಹಗರಣ: ಯಾರನ್ನೂ ಬಿಡಲ್ಲ, ಯಾವುದನ್ನೂ ಮುಚ್ಚಿಡಲ್ಲ: ಗೃಹ ಸಚಿವ

09:11 PM Mar 07, 2022 | Team Udayavani |

ವಿಧಾನಪರಿಷತ್ತು: ಬಿಟ್‌ ಕಾಯಿನ್‌ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಜೊತೆಗೆ, ಇ-ಪೋರ್ಟಲ್‌ ಮೂಲಕ ಹ್ಯಾಕ್‌ ಮಾಡಿರುವ 11.5 ಕೋಟಿ ರೂ. ಸರ್ಕಾರದ ಹಣವನ್ನು ವಾಪಸ್‌ ಪಡೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ನಿಯಮ 330ರಡಿ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಸರ್ಕಾರದ ಇಲಾಖೆಯ ಇ- ಪೋರ್ಟಲ್‌ ಹ್ಯಾಕ್‌ ಮಾಡಿ ಸಾರ್ವಜನಿಕ ಹಣ ಲೂಟಿ ಮಾಡಿದವರು, ಎಷ್ಟೇ ಬಲಾಡ್ಯರಿದ್ದರೂ ಲೆಕ್ಕಿಸದೆ, ಬಂಧಿಸಿ ಹಣ ವಸೂಲು ಮಾಡಲು ಎಲ್ಲ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. 11.5 ಕೋಟಿ ರೂ. ಹಣವನ್ನು ಹ್ಯಾಕಿಂಗ್‌ ಮಾಡಲಾಗಿದ್ದು, ಸುಮಾರು 36 ವಿವಿಧ ಬ್ಯಾಂಕ್‌ ಖಾತೆಗಳಿಂದ ನಾಗಪುರದ ಒಂದು ಎನ್‌ಜಿಒ ಸೇರಿದಂತೆ ವಿವಿಧ ಕಡೆ ಹಣ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿ 2 ಕೋಟಿ ರೂ. ಹಣ ವಾಪಸ್‌ ಪಡೆದುಕೊಳ್ಳಲಾಗಿದೆ. ಪೊಲೀಸರ ಕಾರ್ಯಚರಣೆ ಮುಂದುವರಿದ್ದು, ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಸಿಬಿಐ, ಎನ್‌ಐಎ ತನಿಖೆಗೆ ಆಗ್ರಹ: ರಾಜ್ಯದ ಆರ್ಥಿಕ ಅಪರಾಧಗಳ ಇತಿಹಾಸದಲ್ಲೇ ಛಾಪಾ ಕಾಗದ ಹಗರಣಕ್ಕಿಂತಲೂ ಬಹುದೊಡ್ಡದಾದ ಬಿಟ್‌ಕಾಯಿನ್‌ ಹ್ಯಾಕಿಂಗ್‌ ಹಗರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಲ್ಲವೇ ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ವಹಿಸಬೇಕು ಎಂಬ ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದಾಗ ಸಮಗ್ರ ತನಿಖೆ ಆಗಬೇಕು ಎಂಬ ಪಕ್ಷಾತೀತ ಆಗ್ರಹ ಕೇಳಿ ಬಂತು.

ಇದನ್ನೂ ಓದಿ : ಹೇ ರಾಮ್ ಎಂಬುದು ಭಾರತೀಯ ಸಂಸ್ಕೃತಿ,  ಜೈ ಶ್ರೀರಾಮ ಬಿಜೆಪಿ ಸಂಸ್ಕೃತಿ : ವಿ.ಎಸ್.ಉಗ್ರಪ್ಪ

Advertisement

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಬಿಟ್‌ಕಾಯಿನ್‌ ಹಗರಣದಲ್ಲಿ ಐಪಿಎಸ್‌ ಅಧಿಕಾರಿಗಳು, ವಿವಿಐಪಿ ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳು ಶಾಮೀಲಾಗಿದ್ದಾರೆ. ಅದೇ ಕಾರಣಕ್ಕೆ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಪಾರದರ್ಶಕವಾಗಿ ಈ ಹಗರಣದ ತನಿಖೆ ನಡೆಸುವ ಇಚ್ಛೆ ಹೊಂದಿದ್ದರೆ ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಸದಸ್ಯರಾದ ಭೋಜೇಗೌಡ, ಮರಿತಿಬ್ಬೇಗೌಡ, ಮಂಜೇಗೌಡ, ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ ಹಾಗೂ ತೇಜಸ್ವಿನಿ ಗೌಡ ಕೂಡ ಚರ್ಚೆಯಲ್ಲಿ ಪಾಲ್ಗೊಂಡು, ಯಾವುದೇ ಪಕ್ಷದವರು, ಯಾವುದೇ ಅಧಿಕಾರಿಗಳು ಶಾಮೀಲಾಗಿದ್ದರೆ ತನಿಖೆಯಿಂದ ಬಹಿರಂಗಗೊಳ್ಳಬೇಕು. ಹಗರಣದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವೇ ಸೂಕ್ತ ತನಿಖೆ ನಡೆಸಲಿದೆ ಎಂದು ಹೇಳಿ ಸಿಬಿಐ ಅಥವಾ ಎನ್‌ಐಎ ತನಿಖೆಗೆ ವಹಿಸುವ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next