ಮಂಡ್ಯ: ಲೋಕಸಭಾ ಚುನಾವಣಾ ಸೋಲಿನ ನಂತರವೂ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಮತ್ತೂಂದು ಸುತ್ತಿನ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಲೋಕಸಭಾ ಚುನಾವಣೆ ಸೋಲಿನಿಂದ ಧೃತಿಗೆಡದ ನಿಖಿಲ್, ಪಕ್ಷದ ಮುಖಂಡರ ಸಭೆ ಕರೆದು ಹೇಳಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದು ಮಂಡ್ಯ ರಾಜಕಾರಣದಲ್ಲೇ ನಿಖಿಲ್ ಉಳಿಯುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.
ಮಂಡ್ಯದಲ್ಲಿ ತೋಟ: ಮಂಡ್ಯದ ಜನರು ಚುನಾವಣೆಯಲ್ಲಿ ನನ್ನನ್ನು ಸೋಲಿಸಿರಬಹುದು. ಆದರೆ, ಸೋಲಿನಿಂದ ನಾನು ಕುಗ್ಗಿಲ್ಲ. ಚುನಾವಣಾ ಪೂರ್ವದಲ್ಲಿ ಮಂಡ್ಯದಲ್ಲಿ ತೋಟದ ಮನೆ ಮಾಡುವುದಾಗಿ ಹೇಳಿದ್ದ ಮಾತಿಗೆ ಈಗಲೂ ನಾನು ಬದ್ಧನಾಗಿದ್ದೇನೆ. ಶೀಘ್ರದಲ್ಲೇ ಮಂಡ್ಯದಲ್ಲಿ ತೋಟ ಮಾಡುತ್ತೇನೆ. ಮನೆ ಕಟ್ಟೋವರೆಗೂ ಅಲ್ಲೇ ಶೆಡ್ ಹಾಕಿಕೊಂಡು ವಾಸಕ್ಕೂ ನಾನು ಸಿದ್ಧವಾಗಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ.
ನಾನು ಹಿಂದೆ ಇದ್ದಿದ್ದಕ್ಕೂ, ಈಗ ಇರೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂದು ಮಂಡ್ಯದಲ್ಲಿ ಸೋಲು ಕಂಡಿದ್ದೇನೆ. ಎಲ್ಲೋ ಒಂದು ಕಡೆ ಜನರಿಗೆ ಬೇಸರವಾಗಿದೆ. ಅವರು ಮುಂದೊಂದು ದಿನ ನನ್ನ ಕೈಹಿಡಿಯಲಿದ್ದಾರೆ. ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆಂದು ಗೊತ್ತಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನಿಖಿಲ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟು ಅದಕ್ಕೆ ಈಗಿನಿಂದಲೇ ಪೂರ್ವತಯಾರಿ ಆರಂಭಿಸಲು ರೆಡಿಯಾಗುತ್ತಿರುವಂತೆ ಕಂಡುಬರುತ್ತಿದ್ದಾರೆ. ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಲು ಪ್ರಕ್ರಿಯೆಗಳನ್ನೂ ಆರಂಭಿಸಿದ್ದಾರೆ.