ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾವು ಭಾರತದಲ್ಲಿ ಯಾವುದೇ ಸ್ವಂತ ಮನೆಯಾಗಲಿ, ವಾಹನವಾಗಲಿ ಹೊಂದಿಲ್ಲ. ಆದರೆ ಇಟಲಿಯಲ್ಲಿ ಪೂರ್ವಜರಿಂದ ಬಂದ 27 ಲಕ್ಷ ರೂಪಾಯಿ ಮೌಲ್ಯದ ಮನೆ ಇದೆ ಎಂದು ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ.
ಇದನ್ನೂ ಓದಿ:Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ… 9 ಮಂದಿ ಮೃತ್ಯು, ಹಲವರಿಗೆ ಗಾಯ
ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಈ ಅಂಶ ನಮೂದಿಸಲಾಗಿದೆ. ಅಲ್ಲದೇ ಸೋನಿಯಾ ಗಾಂಧಿ ಒಟ್ಟು 12.53 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಅಫಿಡವಿಟ್ ಪ್ರಕಾರ, ಸೋನಿಯಾ ಗಾಂಧಿ, ಚಿನ್ನಾಭರಣ, ಆಕ್ಸ್ ಫರ್ಡ್ ಯೂನಿರ್ವಸಿಟಿಯಿಂದ ಬಂದ ರಾಯಲ್ಟಿ, ಹೂಡಿಕೆ, ಬಾಂಡ್ಸ್, ಬ್ಯಾಂಕ್ ಠೇವಣಿ ಸೇರಿದಂತೆ ಒಟ್ಟು 6.38 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದು, 90,000 ನಗದು ಇದ್ದಿರುವುದಾಗಿ ಉಲ್ಲೇಖಿಸಿದ್ದಾರೆ.
ಇಟಲಿಯಲ್ಲಿ ನನ್ನ ತಂದೆಯಿಂದ ಬಂದ ಮನೆ ಇದ್ದು, ಪ್ರಸ್ತುತ ಮಾರುಕಟ್ಟೆ ಬೆಲೆ ಪ್ರಕಾರ ಆ ಮನೆ 26.83 ಲಕ್ಷ ರೂಪಾಯಿ ಮೌಲ್ಯ ಹೊಂದಿರುವುದಾಗಿ ಸೋನಿಯಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಸೋನಿಯಾ ಬಳಿ 1.07 ಕೋಟಿ ರೂ. ಮೌಲ್ಯದ ಚಿನ್ನಾಭರಣ, 88 ಕೆಜಿ ಬೆಳ್ಳಿ (57.2 ಲಕ್ಷ) ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ನಮೂದಿಸಿರುವುದಾಗಿ ವರದಿ ತಿಳಿಸಿದೆ.
ನವದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಸೋನಿಯಾ ಗಾಂಧಿ 2,529.28 ಚದರ ಅಡಿಯಷ್ಟು ಕೃಷಿ ಭೂಮಿ ಹೊಂದಿದ್ದು, ಪ್ರಸಕ್ತ ಮಾರುಕಟ್ಟೆ ಪ್ರಕಾರ 5.88 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಸಂಸದೆ ಸ್ಥಾನದ ಸಂಬಳ, ರಾಯಲ್ಟಿ ಧನ, ಬ್ಯಾಂಕ್ ಠೇವಣಿಯ ಬಡ್ಡಿ, ಮ್ಯೂಚುವಲ್ ಫಂಡ್ಸ್ ಇತರೆ ಆದಾಯ ಮೂಲವಾಗಿದೆ.
5 ವರ್ಷಗಳಲ್ಲಿ 72 ಲಕ್ಷ ಆದಾಯ ಹೆಚ್ಚಳ:
ಸೋನಿಯಾ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಕಳೆದ 5 ವರ್ಷಗಳಲ್ಲಿ 72 ಲಕ್ಷ ರೂಪಾಯಿ ಆದಾಯ ಹೆಚ್ಚಳವಾಗಿದೆ. 2014ರ ಲೋಕಸಭಾ ಚುನಾವಣೆ ವೇಳೆ 9.28 ಕೋಟಿ ರೂ. ಮೊತ್ತದ ಆಸ್ತಿ ಇದ್ದಿರುವುದಾಗಿ ಘೋಷಿಸಿದ್ದರು. 2019ರ ಚುನಾವಣೆ ವೇಳೆ 11.82 ಕೋಟಿ ರೂ. ಮೊತ್ತದ ಆಸ್ತಿ ಇದ್ದಿರುವುದಾಗಿ ಘೋಷಿಸಿದ್ದು, ಇದೀಗ 2024ರಲ್ಲಿ 12.53 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.