Advertisement

ಮನೆ ತಲುಪಿಸಿದ ಪುಣ್ಯಾತ್ಮ

03:19 PM Jun 19, 2018 | Harsha Rao |

ಸುಮಾರು 13 ವರ್ಷಗಳ ಹಿಂದಿನ ಘಟನೆ. ನಾನಾಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯ ಸಲುವಾಗಿ ನನ್ನೂರಾದ ವಿಜಯಪುರಕ್ಕೆ ಬಸ್ಸಿನಲ್ಲಿ ಹೊರಟೆ. ಬಸ್ಸು ತುಂಬಾ ರಶ್‌ ಇದ್ದಿದ್ದರಿಂದ ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳೆಯಬೇಕಾಯಿತು. ಬೆಳಗ್ಗೆ ವಿಜಯಪುರ ಬಸ್‌ ನಿಲ್ದಾಣಕ್ಕೆ ತಲುಪಿದಾಗ ತುಂಬಾ ಸುಸ್ತಾಗಿ ಹೋಗಿದ್ದೆ. ಇರುವ ಹಣವನ್ನೆಲ್ಲಾ ಬಸ್‌ ಚಾರ್ಜ್‌ಗೆ ಕೊಟ್ಟಿದ್ದರಿಂದ ಕೈಯಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ಮನೆಗೆ ಬರುತ್ತಿರುವ ಸುದ್ದಿಯನ್ನು ನಮ್ಮ ತಂದೆಗೆ ಹೇಳಿರಲಿಲ್ಲ. 

Advertisement

ಆಗೆಲ್ಲಾ ಈಗಿನಷ್ಟು ಮೊಬೈಲ್‌ ಬಳಕೆ ಇರಲಿಲ್ಲ. ಒಂದೆಡೆ ಆಯಾಸ, ಹಸಿವು, ನಿದ್ರೆಯಿಲ್ಲದೆ ಬಳಲಿ ಬೆಂಡಾಗಿ ಹೋಗಿದ್ದೆ. ಮತ್ತೂಂದೆಡೆ ಭಾರವಾದ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವಷ್ಟು ಶಕ್ತಿ ನನ್ನಲ್ಲಿರಲಿಲ್ಲ. ಹೀಗಾಗಿ ದಿಕ್ಕು ತೋಚದೆ ಬಸ್‌ ನಿಲ್ದಾಣದ ಹೊರಗೆ ಕುಳಿತುಬಿಟ್ಟೆ. ದಾರಿಹೋಕರು ನನ್ನತ್ತ ಕನಿಕರದ ನೋಟ ಬೀರುತ್ತಾ ಹೋಗುತ್ತಿದ್ದರೇ ಹೊರತು ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಆಗ ನನ್ನನ್ನು ಗಮನಿಸಿದ ಆಟೋ ಚಾಲಕರೊಬ್ಬರು ಬಳಿ ಬಂದು ನನ್ನ ಬಗ್ಗೆ ವಿಚಾರಿಸಿದರು. ಸುಸಾಗಿದ್ದ ನನ್ನನ್ನು ಅವರೇ ಸ್ವತಃ ಆಟೋದಲ್ಲಿ ಕುಳ್ಳಿರಿಸಿದರು. ನಂತರ ವಿಳಾಸ ಕೇಳಿ ಮನೆಯತ್ತ ಕರಕೊಂಡು ಹೋದರು. ಅಲ್ಲಿ ನೋಡಿದರೆ ನಮ್ಮ ಮನೆಯವರು ಮನೆ ಖಾಲಿ ಮಾಡಿ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು. ಈ ಸಂಬಂಧವಾಗಿ ಅಪ್ಪ ಬರೆದಿದ್ದ ಪತ್ರ ತಲುಪುವ ಮೊದಲೇ ನಾನು ಹೊರಟು ಬಂದಿದ್ದೆ. 

ಇಷ್ಟು ವಿಷಯ ತಿಳಿದಾಗ, ಆಟೋಚಾಲಕರು ಅಕ್ಕಪಕ್ಕದವರನ್ನು ವಿಚಾರಿಸಿ ನಮ್ಮ ಕುಟುಂಬದವರು ಇದ್ದ ಮನೆಯ ಹೊಸ ವಿಳಾಸ ಪಡೆದುಕೊಂಡರು. ನನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ, ನನ್ನ ತಂದೆಗೆ ಕಿವಿಮಾತು ಹೇಳಿ, ಯಾವುದೇ ಹಣ ತೆಗೆದುಕೊಳ್ಳದೇ ಹೊರಟುಹೋದರು. ಆ ಮಹಾನುಭಾವನ ಹೆಸರು ನನಗೆ ಗೊತ್ತಿಲ್ಲ. ಆದರೆ, ಅವರು ಮಾಡಿದ ಉಪಕಾರ ಇವತ್ತಿಗೂ ನನಗೆ ನೆನಪಿದೆ. ಮಾನವೀಯತೆ ಜೀವಂತವಿದೆ ಎಂಬುದಕ್ಕೆ ಇಂಥ ಪುಣ್ಯಾತ್ಮರೇ ದೊಡ್ಡ ಉದಾಹರಣೆ.

– ಹನಮಂತ ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next