ಕುಷ್ಟಗಿ: ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದ್ದು, ಮನೆಯಲ್ಲಿದ್ದ ಕುಟುಂಬ ಅಪಾಯದಿಂದ ಪಾರಾದ ಘಟನೆ ಟೆಂಗುಂಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಜಪ್ಪ ಬಾಳಪ್ಪ ಮಾದರ ಅವರ ಮನೆಯಲ್ಲಿ 10 ಜನ ವಾಸಗಿದ್ದರು. ತಡರಾತ್ರಿ ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆ ಮಣ್ಣು, ಕಲ್ಲು ಉದುರಿದ ಶಬ್ದಕ್ಕೆ ಹೊರಬಂದಾಗ ಮನೆಯ ಛತ್ತು ಕುಸಿದಿತ್ತು. ನಂತರ ಮನೆಯ ಗೋಡೆ ಭಾಗಶಃ ಬಿದ್ದಿದೆ.
ಈ ಹಿನ್ನೆಲೆ ರಾಜಪ್ಪ ಬಾಳಪ್ಪ ಮಾದರ ಕುಟುಂಬ ನಿರಾಶ್ರಿತರಾಗಿದ್ದು, ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಓ ಗಮನಕ್ಕೆ ತರಲಾಗಿದೆ ಎಂದು ಯಮನೂರು ಮೇಲಿನಮನಿ ಮಾಹಿತಿ ನೀಡಿದ್ದಾರೆ.
ಕಳೆದ ಅ.9 ಹಾಗೂ 10 ರಂದು ತಾಲೂಕಿನಲ್ಲಿ 25 ಮನೆಗಳು ಕುಸಿತ:
ತಾಲೂಕಿನಲ್ಲಿ ಬಹುತೇಕ ಮನೆಗಳು ಮಣ್ಣಿನ ಮನೆಗಳಾಗಿವೆ. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಕಾರಣ ಕಳೆದ ಸೆಪ್ಟಂಬರ್ 30 ರವರೆಗೂ ಒಟ್ಟು 183 ಮನೆಗಳು ಬಿದ್ದಿದೆ. ಈ ಎಲ್ಲಾ ಮನೆಗಳ ಫಲಾನುಭವಿಗಳಿಗೂ ಪರಿಹಾರವನ್ನು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಹಶೀಲ್ದಾರ್ ಗುರುರಾಜ್ ಚಲವಾದಿ ಮಾಹಿತಿ ನೀಡಿದ್ದಾರೆ.
ತಡರಾತ್ರಿ ತಾವರಗೇರಾ, ಕಿಲ್ಲಾರಹಟ್ಟಿಯಲ್ಲಿ ಹೆಚ್ಚು ಮಳೆಯಾಗಿದೆ. ತಾವರಗೇರಾದಲ್ಲಿ 84 ಮೀ.ಮೀ. ಕಿಲ್ಲಾರಹಟ್ಟಿಯಲ್ಲಿ 79 ಮೀ.ಮೀ. ಅಧಿಕ ಮಳೆ ಬಿದ್ದಿದ್ದು, ಉಳಿದೆಡೆ ಸಾಧರಣ ಮಳೆಯಾಗಿದೆ.