ಅಯೋಧ್ಯೆ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ರಾಮ ಮಂದಿರಕ್ಕೆ ಶ್ರೀಲಂಕಾದ ಪವಿತ್ರ ಧಾರ್ಮಿಕ ಕ್ಷೇತ್ರ ‘ಸೀತಾ ಎಲಿಯಾ’ದಿಂದ ಕಲ್ಲು ಉಡುಗೊರೆಯಾಗಿ ಸಿಕ್ಕಿದೆ.
ಸೀತಾ ಎಲಿಯಾ ಸ್ಥಳಕ್ಕೆ ಐತಿಹಾಸಿ ಹಾಗೂ ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಇದೆ. ಈ ಸ್ಥಳದ ಕುರಿತು ಧಾರ್ಮಿಕ ಕಥೆ ಕೂಡ ಇದೆ. ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವಂತೆ ಲಂಕಾದ ಅಧಿಪತಿ ರಾವಣ ಸೀತಾ ಮಾತೆಯನ್ನು ಅಪಹರಿಸಿ ಎಲಿಯಾ ಗ್ರಾಮದಲ್ಲಿ ಬಂಧನದಲ್ಲಿ ಇರಿಸಿದ್ದನಂತೆ. ಅಯೋಧ್ಯೆಯ ರಾಮ, ರಾವಣನ ಮೇಲೆ ಯುದ್ಧ ಸಾರಿ ಸೀತಾ ಮಾತೆಯನ್ನು ಬಂಧನದಿಂದ ಬಿಡಿಸಿದ ನಂತರ ಈ ಸ್ಥಳ ಧಾರ್ಮಿಕ ಕ್ಷೇತ್ರವಾಗಿ ಬದಲಾಯಿತು.
ಮತ್ತೊಂದು ಕಥೆಯ ಪ್ರಕಾರ ಸೀತಾಮಾತೆಯ ಬಿಡುಗಡೆಗೆ ಎಲಿಯಾ ಗ್ರಾಮದಲ್ಲಿ ದೇವಾನುದೇವತೆಗಳು ರಾಮನಲ್ಲಿ ಪ್ರಾರ್ಥನೆ ಮಾಡುತ್ತಿದ್ದರಂತೆ. ಅದೇ ಕಾರಣಕ್ಕೆ ಎಲಿಯಾ ಸ್ಥಳ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆಯಂತೆ.
ಇನ್ನು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ರಾಮ ಮಂದಿರಲ್ಲಿ ಶ್ರೀಲಂಕಾ ಸರ್ಕಾರ ಸೀತಾ ಎಲಿಯಾ ಸ್ಥಳದಿಂದ ದೇಣಿಗೆ ರೂಪದಲ್ಲಿ ಕಲ್ಲನ್ನು ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕೊಲಂಬೊದಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ಕಚೇರಿ, ರಾಮಮಂದಿರ ನಿರ್ಮಾಣಕ್ಕೆ ಶ್ರೀಲಂಕಾದ ಸೀತಾ ಎಲಿಯಾದಿಂದ ಕಲ್ಲನ್ನು ನೀಡಲಾಗುತ್ತಿದ್ದು, ಇದು ಭಾರತ ಮತ್ತು ಶ್ರೀಲಂಕಾ ದ್ವೀಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದಿದೆ.
ಈ ಕಲ್ಲನ್ನು ಮಯೂರಪತಿ ಅಮ್ಮನ್ ದೇವಸ್ಥಾನದಲ್ಲಿ ಶ್ರೀಲಂಕಾದ ಹೈ ಕಮಿಷನರ್ ಸ್ವೀಕರಿಸಿದರು. ನಂತರ ಇದನ್ನು ಭಾರತದ ಹೈ ಕಮಿಷನರ್ ಮಿಲಿಂಡಾ ಮೊರಗೋಡ ಅವರಿಗೆ ಹಸ್ತಾಂತರಿಸಿದರು ಎಂದು ಟ್ವೀಟ್‍ನಲ್ಲಿ ತಿಳಿಸಿದೆ.