Advertisement
ಆದ್ದರಿಂದ ಹದಿಹರೆಯದವರ ಪೂರ್ಣಾರೋಗ್ಯ ಸೌಂದರ್ಯ ಹಾಗೂ ವಿಶೇಷ ವ್ಯಕ್ತಿತ್ವಕ್ಕಾಗಿ ಇಲ್ಲಿದೆ ಬರಹಗುತ್ಛ.ಷೋಡಶ ಪ್ರಾಯವೇ ಅಂತಹದು, ಷೋಡಶಿಯರ ಮನಸ್ಸೇ ಅಂತಹದು. ಮಲ್ಲಿಗೆಯಂಥ ಮೊಗದಲ್ಲಿ ಮೆಲ್ಲಗೊಂದು ಮೊಡವೆ ಚುಕ್ಕೆ ಕಂಡರೂ, ಆಗಸವೇ ಕಳಚಿ ಬಿದ್ದಂತೆ ಭಾಸವಾಗುತ್ತದೆ, ಆ ಪ್ರಾಯದಲ್ಲಿ. ಒಂದು ಕಿಲೋ ತೂಕ ಹೆಚ್ಚಿದರೆ ಒಂದು ವಾರ ಉಪವಾಸ ಮಾಡಿಯಾದರೂ ತೂಕ ಕಡಿಮೆ ಮಾಡಬೇಕೆನ್ನುವಷ್ಟು ದಿಗಿಲು, ಷೋಡಶಿಯರಲ್ಲಿ. ಹರೆಯಕ್ಕೆ ಕಾಲಿಡುವ ಸಮಯದಲ್ಲಿ ಹಾರ್ಮೋನುಗಳ ವ್ಯತ್ಯಯದಿಂದ ಸಹಜವಾಗಿ ತುಸು ಆತಂಕವಿರುವುದು ದಿಟ. ಅದರ ಜೊತೆಗೆ ಇಂದಿನ ಆಧುನಿಕ ಯುಗದ ಧಾವಂತ, ಒತ್ತಡಗಳು ಜೊತೆಯಾಗಿ ಷೋಡಶಿಯರ ಮೈಮನವನ್ನು ಮತ್ತಷ್ಟು ದಣಿಸುತ್ತವೆ.
Related Articles
Advertisement
“ಹೋಮ್ ಸ್ಪಾ’ದೊಂದಿಗೆ ಮೊಡವೆಯನ್ನು ನಿವಾರಿಸುವುದರ ಜೊತೆಗೆ ರಜಾದಿನವನ್ನು ರಿಲ್ಯಾಕ್ಸ್ ಆಗಿ ಕಳೆಯಬಹುದು.ಮೊದಲು ಅಭ್ಯಂಗಸ್ನಾನ. ಕೊಬ್ಬರಿ ಎಣ್ಣೆ ಬೆಚ್ಚಗೆ ಮಾಡಿ ಅದರಲ್ಲಿ 8-10 ಹನಿ ಶ್ರೀಗಂಧ ತೈಲ ಬೆರೆಸಿ ಮಾಲೀಶು ಮಾಡಬೇಕು. ಹಾಂ! “ಹೋಮ್‌ಸ್ಪಾ’ದ ದಿನದಂದು ನಿಮ್ಮ ಮೊಬೈಲ್, ಟಿವಿ ಇತ್ಯಾದಿಗಳನ್ನು ಆಪ್ ಮಾಡಿ. ಇದು ಕೇವಲ ಮೊಡವೆಗೆ ಮಾತ್ರ ಚಿಕಿತ್ಸೆಯಲ್ಲ, ಅದರ ಜೊತೆಗೆ ಮೈಮನಸ್ಸುಗಳನ್ನು ಉತ್ಸಾಹಪೂರ್ಣತೆಯಿಂದ ತುಂಬುವ ಗೃಹೋಪಚಾರ. ಹಾಂ! ಎಷ್ಟೋ ಸಂದರ್ಭಗಳಲ್ಲಿ ಒತ್ತಡದಿಂದಲೂ ಮೊಡವೆಯಾಗುತ್ತದೆ. ಯಾವುದೇ ಮುಖಲೇಪ, ಔಷಧಿಗಳಿಗೆ ಜಗ್ಗದ ಈ ಮೊಡವೆಯ ಒಂದು ಬಗೆ, ಒತ್ತಡ ನಿವಾರಣೆಯಾಗುತ್ತಲೇ ಮಾಯವಾಗುತ್ತದೆ! ಬಾದಾಮಿ ತೈಲ, ಆಲಿವ್ ತೈಲಗಳಿಂದಲೂ ಮೃದುವಾಗಿ ಮುಖವನ್ನು ಮಾಲೀಶು ಮಾಡಬಹುದು. ಮಾಲೀಶು ಮಾಡುವಾಗ ತುದಿ ಬೆರಳುಗಳಿಂದ ಮೃದುವಾಗಿ ತೈಲ ಲೇಪಿಸಿ ವರ್ತುಲಾಕಾರದಲ್ಲಿ ಹೆಚ್ಚು ಒತ್ತಡ ನೀಡದೆ ಮಾಲೀಶು ಮಾಡಬೇಕು. ಮೈಕೈಗಳಿಗೆ ಮಾಲೀಶು ಮಾಡಲು ಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಶುದ್ಧ ಕರ್ಪೂರ ಬೆರೆಸಿ ಈ ಎಣ್ಣೆಯಿಂದ ಮಾಲೀಶು ಮಾಡಿದರೆ ಮೈಕೈ ನೋವು ಇದ್ದರೂ ನಿವಾರಣೆಯಾಗುವುದರ ಜೊತೆಗೆ ಕರ್ಪೂರವು ಕೇಂದ್ರೀಯ ನರಮಂಡಲವನ್ನು ಉದ್ದೀಪಿಸುವುದರಿಂದ, ಮನಸ್ಸು ಉಲ್ಲಸಿತವಾಗುತ್ತದೆ. ಶಿರೋಭ್ಯಂಗ ಅಥವಾ ತಲೆಕೂದಲಿಗೆ ತೈಲ ಲೇಪಿಸಲು ಅವರವರ ದೇಹ ಪ್ರಕೃತಿಯಂತೆ ಹಲವು ತೈಲಗಳನ್ನು ಆರಿಸಬಹುದು. ಆಲಿವ್‌ತೈಲ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ- ಇವು ಕೂದಲನ್ನು ಸಂರಕ್ಷಿಸಲು ಹಿತಕರ. ತುಂಬಾ ಉಷ್ಣ ದೇಹವುಳ್ಳವರು, ಕಣ್ಣು ಉರಿ ಉಳ್ಳವರು ಕೊಬ್ಬರಿ ಎಣ್ಣೆಯೊಂದಿಗೆ ಹರಳೆಣ್ಣೆ ಬೆರೆಸಿ ಮಾಲೀಶು ಮಾಡಬಹುದು. ಎಳ್ಳೆಣ್ಣೆಗೆ ಕರಿಬೇವು, ಒಂದೆಲಗ, ಮದರಂಗಿ ಸೊಪ್ಪು ಅರೆದು ಬೆರೆಸಿ ಕುದಿಸಿ ತೈಲ ತಯಾರಿಸಿದರೆ ತಲೆಕೂದಲು ಉದುರುವುದು, ಹೊಟ್ಟು ಉದುರುವುದು ನಿವಾರಣೆಯಾಗುತ್ತದೆ. ಮೊಡವೆ ಉಂಟುಮಾಡುವ ಹಲವು ಹೇತುಗಳಲ್ಲಿ ತಲೆಹೊಟ್ಟು ಸಹ ಒಂದು ಮುಖ್ಯಕಾರಣ. ಮೊಗದ ಮೇಲೆ ಸಣ್ಣ ಮೊಡವೆಗಳನ್ನು ಉಂಟುಮಾಡಿ, ತುರಿಕೆಯನ್ನು ಉಂಟುಮಾಡುವ ಈ ತಲೆಹೊಟ್ಟು ಬೆನ್ನಿನ ಭಾಗದಲ್ಲಿ ಸಹ ಉಂಟುಮಾಡುತ್ತದೆ. – ಡಾ. ಅನುರಾಧಾ ಕಾಮತ್