Advertisement

ಹೊಳಲ್ಕೆರೆ ಪಟ್ಟಣವಾಯ್ತು ಕೊಚ್ಚೆಕೆರೆ!

08:53 AM Mar 22, 2019 | Team Udayavani |

ಹೊಳಲ್ಕೆರೆ: ಪಟ್ಟಣದಲ್ಲಿರುವ ಚರಂಡಿಗಳಲ್ಲಿ ಘನತ್ಯಾಜ್ಯ, ಕಸ, ಕೊಳಚೆ ತಂಬಿಕೊಂಡು ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಪಂಥಾಹ್ವಾನ ನೀಡುತ್ತಿದೆ. ಪಟ್ಟಣದ ಮುಖ್ಯ ರಸ್ತೆಗಳು, ಗಣಪತಿ ರಸ್ತೆ, ಕುರುಬರ ಬಡಾವಣೆ, ವಾಲ್ಮೀಕಿ ಸರ್ಕಲ್‌, ಸಿದ್ದರಾಮಪ್ಪ ಬಡಾವಣೆ, ಕುಂಬಾರ ಬಡಾವಣೆ ಹಾಗೂ 16 ವಾರ್ಡ್‌ಗಳ ಚರಂಡಿಗಳು ನೀರು-ಕೊಳಚೆಯಿಂದ ತುಂಬಿದ್ದು, ಸ್ವತ್ಛತೆ ಮಾಯವಾಗಿದೆ. ರಸ್ತೆಯ ಮೇಲಿನ ಕಸವೆಲ್ಲ ಚರಂಡಿ ಸೇರುವುದರಿಂದ ಚರಂಡಿಯಲ್ಲಿ ಹರಿಯಬೇಕಿದ್ದ ಕೊಳಚೆ ನೀರು ಅಲ್ಲಲ್ಲಿ
ನಿಂತು ದುರ್ವಾಸನೆ ಬೀರುತ್ತಿದೆ. 

Advertisement

ಚರಂಡಿಗಳು ಕಸದಿಂದ ಭರ್ತಿಯಾಗಿರುವ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹಾಗೂ ರಸ್ತೆ ಪಕ್ಕದಲ್ಲಿ ಹರಿದು ಹೋಗುತ್ತಿದೆ. ಪಪಂ ಅಧಿಕಾರಿಗಳ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದನ್ನು ನೋಡಿದರೆ ಪಪಂ ಆರೋಗ್ಯಾಧಿಕಾರಿ ಎಲ್ಲಿದ್ದಾರೆ ಎಂಬ ಸಂಶಯ ಪಟ್ಟಣದ ಜನರನ್ನು ಕಾಡುತ್ತಿದೆ.

ಸ್ವತ್ಛತೆ ಮಾಡಬೇಕೆಂಬ ಮನಸ್ಸಿಲ್ಲ: ಪಟ್ಟಣದಲ್ಲಿರುವ ಸರಕಾರಿ ಕಚೇರಿ ಸುತ್ತಲು ಕಸದ ರಾಶಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಟ್ಟಣದ ತಾಲೂಕು ಕಚೇರಿ ಸುತ್ತಲು ಘನತ್ಯಾಜ್ಯಗಳ ರಾಶಿ ಬಿದ್ದಿದ್ದರೂ ತಹಶೀಲ್ದಾರ್‌ ಸೇರಿದಂತೆ ಯರೊಬ್ಬರು ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ತಾಲೂಕು ಕಚೇರಿ ಸುತ್ತಲು ಕಸ, ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದರೂ ಅವುಗಳನ್ನು ತೆರವುಗೊಳ್ಳಿಸುವ ಮನಸ್ಸು ಅಧಿಕಾರಿಗಳಿಗೆ ಇಲ್ಲವಾಗಿದೆ.

ಗೋಡೆಯೇ ಬಯಲ ಶೌಚಾಲಯ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೊಳಚೆಯಲ್ಲಿ ಮುಳುಗಿ ಹೋಗಿದೆ. ಸುತ್ತಲಿರುವ ಚರಂಡಿಗಳ ನೀರೆಲ್ಲ ಕಚೇರಿ ಮುಂದೆ ಜಮಾಯಿಸಿದೆ. ಅಕ್ಕಪಕ್ಕದಲ್ಲಿರುವ ಹೊಟೇಲ್‌ಗ‌ಳ ಮುಸುರೆ, ಪ್ಲಾಸ್ಟಿಕ್‌ ತಾಜ್ಯ, ಕಚೇರಿ ಮುಂದೆ ತಂದು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆ ಗೋಡೆಯೇ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.

ಕುಡಿಯುವ ನೀರಿಗೆ ಪರದಾಟ: ಪಟ್ಟಣಕ್ಕೆ ಬೇಕಾದ ಕುಡಿಯುವ ನೀರು ಪೂರೈಕೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದರೂ ತಿಂಗಳಿಗೊಮ್ಮೆ ಸೂಳೆಕೆರೆಯ ಕುಡಿಯುವ ನೀರನ್ನು ನಾಗರಿಕರಿಗೆ ಪೂರೈಸುತ್ತಿದ್ದಾರೆ. ನೀರನ್ನು ಪೂರೈಸುವ ವಾಲ್‌ಗ‌ಳು ಕೊಚ್ಚೆ ಗುಂಡಿಗಳಾಗಿವೆ. ವಾಲ್‌ಗ‌ಳಲ್ಲಿನ ಕೊಳಚೆ ಕುಡಿಯುವ ನೀರಿಗೆ ಸೇರುತ್ತಿದೆ.

Advertisement

ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿರುವ ಹೂವು, ಹಣ್ಣು, ತರಕಾರಿ, ಬಾಳೆಹಣ್ಣು, ಫಾಸ್ಟ್‌ಫುಡ್‌, ಬೇಕರಿ, ಮಟನ್‌, ಚಿಕನ್‌, ಮೀನು ಮಾರಾಟ ಅಂಗಡಿಗಳಿಂದ ಬರುವಂತ ಕಸವನ್ನು ಸೂಕ್ತವಾಗಿ ವಿಲೆ ಮಾಡುವ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಎಸೆಯುತ್ತಿದ್ದಾರೆ. ಇದರಿಂದ ಪಟ್ಟಣದ ರಸ್ತೆಗಳೆಲ್ಲ ಕಸಮಯವಾಗಿದ್ದು ಪರಿಸರವೆಲ್ಲ ಕಲುಷಿತವಾಗುತ್ತಿದೆ. ಶುದ್ಧ ಪರಿಸರ, ಸ್ವತ್ಛ ಪರಿಸರಕ್ಕಾಗಿ ನಾಗರಿಕರು ಹಲವಾರು ಬಾರಿ ಪಪಂಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊನ್ನಕೆರೆ ಎನ್ನುವ ಹೊಳಲ್ಕೆರೆ ಈಗ ಹೊಸಲುಕೆರೆ ಎನ್ನುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೂ ಸೂಕ್ತ ಕ್ರಮ ಕೈಗೊಂಡು ಸ್ವತ್ಛ ಹೊಳಲ್ಕೆರೆ ಮಾಡವರೇ ಎಂದು ಕಾದುನೋಡಬೇಕಿದೆ.

ಪಟ್ಟಣವನ್ನು ವೀಕ್ಷಿಸಲು ಸಮಯ ಸಮಯದ ಅಭಾವದ ಕೊರತೆಯಾಗಿದೆ. ಚುನಾವಣೆ ಕರ್ತವ್ಯದಲ್ಲಿ ಬಿಜೆಯಾಗಿದ್ದೇನೆ. ಕೊಳಚೆ ನಿರ್ಮೂಲನೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 ನಾಗರಾಜ್‌, ತಹಶೀಲ್ದಾರ್‌.

ಪಟ್ಟಣದಲ್ಲಿರುವ ಕೊಳಚೆಯನ್ನು ಪೌರಕಾರ್ಮಿಕರು ನಿತ್ಯ ತೆಗೆಯುತ್ತಿದ್ದಾರೆ. ಅದರೂ ಕೆಲವಡೆ ಹೆಚ್ಚಾಗಿದೆ. ಅದನ್ನು ಹಂತಹಂತವಾಗಿ ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಉಮೇಶ್‌, ಮುಖ್ಯಾಧಿಕಾರಿ ಪಪಂ, ಹೊಳಲ್ಕೆರೆ.

ಸ್ವತ್ಛತೆಗೆ ಮೊದಲ ಆದ್ಯತೆ ನೀಡುವುದು ಪಟ್ಟಣ ಪಂಚಾಯತ್‌ನ ಕರ್ತವ್ಯವಾಗಬೇಕು. ನಾಗರಿಕರು ಪಪಂಗೆ ಹಲವಾರು ಬಾರಿ ಮನವಿ ಸಲ್ಲಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿರುವುದು ಪ್ರಜಾಪ್ರಭುತ್ವದ ದುರಂತ.
 ಎಸ್‌.ಅರ್‌. ಮೋಹನ್‌ ನಾಗರಾಜ್‌, ತಾಪಂ ಮಾಜಿ ಅಧ್ಯ

„ಎಸ್‌. ವೇದಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next