Advertisement

ಸರಣಿ ರಜೆ: ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳತ್ತ ಜನ

12:53 AM Dec 27, 2020 | mahesh |

ಮಲ್ಪೆ: ಕ್ರಿಸ್ಮಸ್‌ ರಜೆ, ವರ್ಷಾಂತ್ಯದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌, ಸೀವಾಕ್‌, ಸೈಂಟ್‌ಮೇರೀಸ್‌ಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶನಿವಾರ ಬೆಳಗ್ಗಿನಿಂದಲೇ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

Advertisement

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲೂ ಮಲ್ಪೆ ಕಡಲತೀರದ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಜನ ಜಂಗುಳಿಯಾಗುತ್ತಿದೆ. ಶನಿವಾರ ನಸುಕಿನಲ್ಲೇ ಪ್ರವಾಸಿಗರು ಮಲ್ಪೆಯತ್ತ ಆಗಮಿಸುತ್ತಿದ್ದು ಮಧ್ಯಾಹ್ನ ಬಿರು ಬಿಸಿಲಿಗೂ ಮೈಯೊಡ್ಡಿ ಕುಳಿತಿರುವ, ನೀರಿನಲ್ಲಿ ಆಟವಾಡುತ್ತಿರುವ ದೃಶ್ಯ ಕಂಡುಬಂದಿದೆ.

ಸಂಚಾರ ದಟ್ಟಣೆ
ಪ್ರವಾಸಿಗರ ವಾಹನಗಳಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ಉಲ್ಬಣಿಸಿದೆ. ಸಂಜೆ ವೇಳೆಗಂತೂ ಸರದಿಯಲ್ಲಿ ಸಾಗಬೇಕಾಯಿತು. ಸಂಚಾರ ನಿಯಂತ್ರಿಸಲು ಪೊಲೀ ಸರು ಹರಸಾಹಸ ಪಡುವಂತಾಯಿತು.

ಪಾರ್ಕಿಂಗ್‌ ದೊಡ್ಡ ಸಮಸ್ಯೆ
ಶುಕ್ರವಾರದಿಂದಲೇ ಅಪಾರ ಸಂಖ್ಯೆಯಲ್ಲಿ ಬೀಚ್‌ ಮತ್ತು ಸೀವಾಕ್‌ಗೆ ಜನ ಭೇಟಿ ನೀಡುತ್ತಿದ್ದಾರೆ. ಶನಿವಾರ ವಡಭಾಂಡೇಶ್ವರದಿಂದ ಮಲ್ಪೆ ಹನುಮಾನ್‌ ವಿಠೊಭ ಭಜನ ಮಂದಿರದ ವರೆಗೂ ಪಾರ್ಕಿಂಗ್‌ ಮಾಡಿದರೂ ಮತ್ತೂ ಜಾಗ ಸಾಲದಾಯಿತು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಾಗ ವಾಹನ ಪಾರ್ಕಿಂಗ್‌, ಸಂಚಾರ ದಟ್ಟಣೆ, ಶೌಚಾಲಯ, ಶುದ್ಧ ಕುಡಿಯುವ ನೀರು ಮುಂತಾದ ಮೂಲಸೌಕರ್ಯಗಳ ಕೊರತೆ ಕಂಡುಬಂದಿತು. ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಹಲವಾರು ಮಾರ್ಗಸೂಚಿಗಳನ್ನು ನೀಡಿ ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತದೆ. ಆದರೆ ಮಲ್ಪೆ ಬೀಚ್‌ನಲ್ಲಿ ಅದ್ಯಾವುದರ ಪಾಲನೆಯೂ ಕಂಡುಬರಲಿಲ್ಲ. ಪ್ರವಾಸಿ ಗರಿಗೆ ತಿಳಿಹೇಳುವವರೂ ಕಾಣಿಸಲಿಲ್ಲ!

ಕುಕ್ಕೆ, ಧರ್ಮಸ್ಥಳ, ಉಡುಪಿ ಭರ್ತಿ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿಯ ಜತೆಗೆ ಸರಣಿ ರಜೆಯೂ ಇರುವ ಕಾರಣ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

Advertisement

ಶನಿವಾರ ಸಹಸ್ರಾರು ಭಕ್ತರು ಸುಬ್ರಹ್ಮಣ್ಯನ ದರುಶನ ಪಡೆದು ಸೇವಾದಿಗಳನ್ನು ನೆರವೇರಿಸಿ ದರು. ಕ್ಷೇತ್ರದ ವಸತಿ ಗೃಹಗಳು, ಖಾಸಗಿ ವಸತಿಗೃಹಗಳು ತುಂಬಿವೆ. ಭಕ್ತರ ವಾಹನಗಳಿಂದಾಗಿ ಸಂಚಾರ ದಟ್ಟಣೆಯೂ ತಲೆದೋರಿದೆ. ಶನಿವಾರ ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಬಫೆ ಮಾದರಿಯಲ್ಲಿ ಅನ್ನಪ್ರಸಾದ ವಿತರಿಸಲಾಯಿತು.

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಶನಿವಾರ ಭಕ್ತಸಮೂಹವೇ ಹರಿದುಬಂದಿತ್ತು. ಶನಿವಾರ 25,000ಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು. ನೇತ್ರಾವತಿ ಸ್ನಾನಘಟ್ಟ ಸೇರಿದಂತೆ, ವಸತಿಗೃಹಗಳು ತುಂಬಿದ್ದವು.

ಶ್ರೀಕೃಷ್ಣ ಮಠ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ ದಾಖಲೆ ಎಂಬಂತೆ 15,000ಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು. ಪಾರ್ಕಿಂಗ್‌ ಪ್ರದೇಶದಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚಿಗೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next