ರಬಕವಿ-ಬನಹಟ್ಟಿ: ಸ್ಥಳೀಯ ಎಸ್‌ಆರ್‌ಎ ಮೈದಾನದಲ್ಲಿ 18ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೋಳಿ ಹಬ್ಬದ ನಿಮಿತ್ತವಾಗಿ ವಿಶೇಷ ಹೋಳಿ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮುಖಂಡ ಸಿದ್ದಣ್ಣ ಕೊಣ್ಣೂರ ತಿಳಿಸಿದರು.
ಮಂಗಳವಾರ ಸ್ಥಳೀಯ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ರಬಕವಿ, ಬನಹಟ್ಟಿ, ಮಹಾಲಿಂಗಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಹಬ್ಬಗಳು, ನಮ್ಮ ಸಂಸ್ಕೃತಿಗಳು ಇಂದು ಆಧುನಿಕತೆಯಿಂದ ತಮ್ಮ ಸತ್ವ ಕಳೆದುಕೊಳ್ಳುತ್ತಿವೆ. ನಮ್ಮ ಯುವ ಪೀಳಿಗೆಗಳಿಗೆ ನಮ್ಮ ಹಬ್ಬಗಳ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಹೋಳಿ ರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಂಗೋತ್ಸವದಲ್ಲಿ ಕೇವಲ ನೈಸರ್ಗಿಕ ಬಣ್ಣಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಇದೊಂದು ವಿಶೇಷ ರಂಗೋತ್ಸವ ಆಗಲಿದೆ ಎಂದರು.
ಮತ್ತೂರ್ವ ಯುವ ಮುಖಂಡ ರಾಜೇಂದ್ರ ಭದ್ರನವರ ಮಾತನಾಡಿ, ರಂಗೋತ್ಸವದಲ್ಲಿ ಎಲ್ಲ ಜಾತಿ, ಧರ್ಮದವರು ಮುಕ್ತವಾಗಿ ಭಾಗವಹಿಸಬಹುದಾಗಿದೆ. ಮಹಿಳೆಯರಿಗೆ ಪ್ರತ್ಯೇಕ ರಂಗೋತ್ಸವದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕೂಡಿಕೊಂಡು ಒಂದಾಗಿ ಹಬ್ಬ ಆಚರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡರಾದ ರಾಜು ಬಗನಾಳ, ನಿಲೇಶ ದೇಸಾಯಿ, ಪರಪ್ಪ ಪಾಲಭಾವಿ, ಲಕ್ಕಪ್ಪ ಪಾಟೀಲ ಮಾತನಾಡಿದರು. ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವೆ ಉಮಾಶ್ರೀ, ಪ್ರೊ| ಬಸವರಾಜ ಕೊಣ್ಣೂರ, ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ ಸೇರಿದಂತೆ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಶ್ರೀಶೈಲ ದಲಾಲ, ರಾಜು ನಂದೆಪ್ಪನವರ, ಮಹಾದೇವ ಧೂಪದಾಳ, ಶಂಕರ ಜಾಲಿಗಿಡದ, ಶಂಕರ ಬಟಕುರ್ಕಿ, ಪ್ರಕಾಶ ಉಳ್ಳಾಗಡ್ಡಿ, ಸಂಜಯ ಜೋತಾವರ, ಉಮೇಶ ಪೂಜಾರಿ ಇದ್ದರು.