Advertisement

ಮತ್ತೆ ಹಾಕಿ ಕೋಚ್‌ ಬದಲಾವಣೆ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌

12:30 AM Jan 10, 2019 | |

ಹೊಸದಿಲ್ಲಿ: ಭಾರತೀಯ ಹಾಕಿ ಮತ್ತೆ ಸುದ್ದಿಯಲ್ಲಿದೆ. ಆದರೆ ಸಾಧನೆಯ ಕಾರಣದಿಂದಲ್ಲ, ಮತ್ತೂಮ್ಮೆ ತರಬೇತುದಾರನನ್ನು ಉಚ್ಛಾಟಿಸುವ ಮೂಲಕ!

Advertisement

ಹೌದು, 2018ರಲ್ಲಿ ಭಾರತದ ಹಾಕಿಪಟುಗಳು ಕಳಪೆ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ “ಹಾಕಿ ಇಂಡಿಯಾ’ ಹಿರಿಯರ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರಿಗೆ ಗೇಟ್‌ಪಾಸ್‌ ನೀಡಿದೆ.

ಹರೇಂದ್ರ ಸಿಂಗ್‌ ಜೂನಿಯರ್‌ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೀನಿಯರ್‌ ತಂಡದ ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಆದರೆ, 2018ರ ಪ್ರಮುಖ ಟೂರ್ನಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫ‌ಲವಾದ ಕಾರಣ ಭಾರತೀಯ ಹಾಕಿ ಫೆಡರೇಶನ್‌ ದಿಢೀರನೇ ಈ ನಿರ್ಧಾರವನ್ನು ಕೈಗೊಂಡಿದೆ.

ನಿರಾಶಾದಾಯಕ ವರ್ಷ
“2018 ಭಾರತೀಯ ಪುರುಷರ ಹಾಕಿ ತಂಡಕ್ಕೆ ನಿರಾಶಾದಾಯಕ ವರ್ಷವಾಗಿತ್ತು. ನಿರೀಕ್ಷೆಯಂತೆ ಫ‌ಲಿತಾಂಶ ದಾಖಲಾಗಲಿಲ್ಲ. ಜೂನಿಯರ್‌ ತಂಡಕ್ಕೆ ಹೆಚ್ಚಿನ ಬಂಡವಾಳ ಹಾಕಿದರೆ ದೀರ್ಘಾಕಾಲಿನ ಲಾಭಗಳು ಸಿಗಬಹುದು ಎಂದು ಹಾಕಿ ಇಂಡಿಯಾ ಚಿಂತಿಸುತ್ತಿದೆ’ ಎಂದು ಹರೇಂದ್ರರ್‌ ಸಿಂಗ್‌ ಅವರನ್ನು ಕೈಬಿಟ್ಟ ನಿರ್ಧಾರಕ್ಕೆ ಹಾಕಿ ಇಂಡಿಯಾ ಸ್ಪಷ್ಟನೆ ನೀಡಿದೆ.

ಜೂನಿಯರ್‌ ವಿಶ್ವಕಪ್‌ ವಿಜೇತ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರನ್ನು ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ಬಳಿಕ ಹಿರಿಯರ ತಂಡದ ಕೋಚ್‌ ಆಗಿ ನೇಮಿಸಲಾಗಿತ್ತು. ಗೋಲ್ಡ್‌ಕೋಸ್ಟ್‌ನಿಂದ ಭಾರತ ತಂಡ ಪದಕ ರಹಿತವಾಗಿ ಮರಳಿತ್ತು. ಆದರೆ ಹರೇಂದ್ರ ಸಿಂಗ್‌ ಅವರಿಗೆ ಹಿರಿಯರ ತಂಡದ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಹರೇಂದ್ರ ಸಿಂಗ್‌ ಮಾರ್ಗದರ್ಶನದಲ್ಲಿ ಹಾಲಿ ಚಾಂಪಿಯನ್‌ ಆಗಿ ಏಶ್ಯನ್‌ ಗೇಮ್ಸ್‌ಗೆ ತೆರಳಿದ್ದ ಭಾರತ ಈ ಬಾರಿ ಕಂಚಿನ ಪದಕದೊಂದಿಗೆ ತವರಿಗೆ ಮರಳಿತ್ತು. ಅಲ್ಲದೆ ತವರಿನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ನಿರಾಶೆ ಮೂಡಿದಿತ್ತು. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಹಾಕಿ ಇಂಡಿಯಾ ಈ ನಿರ್ಧಾರಕ್ಕೆ ಬಂದಿದೆ.

Advertisement

ನೂತನ ಕೋಚ್‌ಗೆ ಅರ್ಜಿ ಆಹ್ವಾನ
ಹರೇಂದ್ರ ಸಿಂಗ್‌ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಹಾಕಿ ಇಂಡಿಯಾ ನೂತನ ತರಬೇತುದಾರನ ನೇಮಕಕ್ಕೆ ಮುಂದಾಗಿದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್‌ ಆರಂಭವಾಗಲಿರುವ 23ರಿಂದ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಟೂರ್ನಿಗಾಗಿ ಫೆಬ್ರವರಿಯಿಂದ ತರಬೇತಿ ಶಿಬಿರ ಆರಂಭವಾಗಲಿದೆ. ಈ ಶಿಬಿರಕ್ಕೂ ಮುನ್ನ ನೂತನ ಕೋಚ್‌ನ ನೇಮಕಾತಿ ಆಗಬೇಕೆಂದು ಹಾಕಿ ಇಂಡಿಯಾ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next