Advertisement

Hockey: ಸಿಂಗಾಪುರ ವಿರುದ್ಧ 16-1 ಜಯಭೇರಿ

11:05 PM Sep 26, 2023 | Team Udayavani |

ಹ್ಯಾಂಗ್‌ಝೂ: ಏಷ್ಯಾಡ್‌ ಹಾಕಿಯಲ್ಲಿ ಸ್ವರ್ಣ ಪದಕಕ್ಕೆ ಹೊಂಚು ಹಾಕಿರುವ ಭಾರತ, ಮಂಗಳವಾರದ ಲೀಗ್‌ ಪಂದ್ಯದಲ್ಲಿ ಸಿಂಗಾಪುರವನ್ನು 16-1 ಗೋಲುಗಳಿಂದ ಕೆಡವಿದೆ. ಇದರಿಂದ ಕೂಟದ 2 ಪಂದ್ಯಗಳಿಂದ ಭಾರತ 32 ಗೋಲು ಸಿಡಿಸಿದಂತಾಯಿತು. ಮೊದಲ ಮುಖಾಮುಖೀಯಲ್ಲಿ ಉಜ್ಬೆಕಿಸ್ಥಾನ ವಿರುದ್ಧವೂ ಹರ್ಮನ್‌ಪ್ರೀತ್‌ ಪಡೆ 16 ಗೋಲು ಹೊಡೆದಿತ್ತು.

Advertisement

ಸಿಂಗಾಪುರ ವಿರುದ್ಧ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಮನದೀಪ್‌ ಸಿಂಗ್‌ ಹ್ಯಾಟ್ರಿಕ್‌ ಸಾಧನೆಗೈದರು. ಹರ್ಮನ್‌ಪ್ರೀತ್‌ ಅವರದು ಸರ್ವಾಧಿಕ 4 ಗೋಲುಗಳ ಸಾಹಸ. ಪಂದ್ಯದ 24ನೇ, 39ನೇ, 40ನೇ ಹಾಗೂ 42ನೇ ನಿಮಿಷದಲ್ಲಿ ಇವರು ಸಿಂಗಾಪುರದ ಮೇಲೆರಗಿ ಹೋದರು. ಮನ್‌ದೀಪ್‌ 3 ಗೋಲು ಸಿಡಿಸಿದರು (12ನೇ, 30ನೇ ಹಾಗೂ 51ನೇ ನಿಮಿಷ). ಉಳಿದಂತೆ ಅಭಿಷೇಕ್‌ (51ನೇ, 52ನೇ ನಿಮಿಷ), ವರುಣ್‌ ಕುಮಾರ್‌ (ಎರಡೂ 55ನೇ ನಿಮಿಷ) ಅವಳಿ ಗೋಲು ಬಾರಿಸಿದರು. ಲಲಿತ್‌ ಕುಮಾರ್‌ ಉಪಾಧ್ಯಾಯ, ಗುರ್ಜಂತ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಮನ್‌ಪ್ರೀತ್‌ ಸಿಂಗ್‌ ಮತ್ತು ಶಮ್ಶೆರ್‌ ಸಿಂಗ್‌ ಒಂದೊಂದು ಗೋಲು ಹೊಡೆದರು. ಸಿಂಗಾಪುರದ ಏಕೈಕ ಗೋಲು 53ನೇ ನಿಮಿಷದಲ್ಲಿ ಝಾಕಿ ಜುಲ್ಕರ್‌ನೆನ್‌ ಅವರಿಂದ ದಾಖಲಾಯಿತು.

ಭಾರತ ಪಂದ್ಯದುದ್ದಕ್ಕೂ ಸಿಂಗಾಪುರದ ಸರ್ಕಲ್‌ನಲ್ಲೇ ಇತ್ತು. ಆದರೆ ಆರಂಭದ ನಿಮಿಷದ ಕೆಲವು ಅವಕಾಶಗಳು ವ್ಯರ್ಥವಾದವು. 6ನೇ ನಿಮಿಷದಲ್ಲಿ ಸುಖ್‌ಜೀತ್‌ ಸಿಂಗ್‌ ಅವರ ಹೊಡೆತವನ್ನು ಸಿಂಗಾಪುರದ ಗೋಲ್‌ಕೀಪರ್‌ ಸಂದ್ರಾನ್‌ ಗುಗಾನ್‌ ತಡೆಯುವಲ್ಲಿ ಯಶಸ್ವಿಯಾದರು. ಮುಂದಿನ ನಿಮಿಷದಲ್ಲಿ ಲಭಿಸಿದ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿಸುವಲ್ಲಿ ಹರ್ಮನ್‌ಪ್ರೀತ್‌ ವಿಫ‌ಲರಾದರು. ಆದರೆ 12ನೇ ನಿಮಿಷದಲ್ಲಿ ಗೋಲು ಸುರಿಮಳೆಗೆ ಮುಹೂರ್ತ ಫಿಕ್ಸ್‌ ಆಯಿತು.

ಏಷ್ಯಾಡ್‌ ಟೆನಿಸ್‌ ನಲ್ಲಿ ಭಾರತ ಮಿಶ್ರ ಫ‌ಲಿತಾಂಶ ದಾಖಲಿ ಸಿದೆ. ಸುಮಿತ್‌ ನಾಗಲ್‌ ಮತ್ತು ಅಂಕಿತಾ ರೈನಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಋತುಜಾ ನಿರ್ಗಮಿಸಿದರು.

ಸುಮಿತ್‌ ನಾಗಲ್‌ ತೃತೀಯ ಸುತ್ತಿನ ಪಂದ್ಯದಲ್ಲಿ ಕಜಕಸ್ಥಾನದ ಬಿಗ್‌ ಸರ್ವಿಂಗ್‌ ಟೆನಿಸಿಗ ಬೀಬಿಟ್‌ ಜುಕಯೇವ್‌ ವಿರುದ್ಧ ಭಾರೀ ಹೋರಾಟ ನಡೆಸಿ 7-6 (9), 6-4 ಅಂತರದಿಂದ ಗೆದ್ದು ಬಂದರು. ಅಂಕಿತಾ ರೈನಾ ಹಾಂಕಾಂಗ್‌ನ ಆದಿತ್ಯಾ ಪಿ. ಕರುಣಾರತ್ನೆ ವಿರುದ್ಧ 6-1, 6-2 ಅಂಕಗಳ ಸುಲಭ ಜಯ ಸಾಧಿಸಿದರು.

Advertisement

ಋತುಜಾ ಭೋಂಸ್ಲೆ ಫಿಲಿಪ್ಪೀನ್ಸ್‌ನ ಅಲೆಕ್ಸಾಂಡ್ರಾ ಎಲಾ ವಿರುದ್ಧ 6-7 (5), 2-6ರಿಂದ ಎಡವಿದರು. ರಾಮ್‌ಕುಮಾರ್‌ ರಾಮನಾಥನ್‌ ಅವರನ್ನು ಜಪಾನ್‌ನ ಯೊಸುಕೆ ವಟಾನುಕಿ 7-5, 6-7 (3), 7-5ರಿಂದ ಹಿಮ್ಮೆಟ್ಟಿಸಿದರು.

ಭಾರತದ ಎರಡೂ ಸ್ಕ್ವಾಷ್‌ ತಂಡಗಳು ಗೆಲುವಿನ ಆರಂಭ ಪಡೆದಿವೆ. ವನಿತಾ ತಂಡ ಪಾಕಿಸ್ಥಾನವನ್ನು 3-0 ಅಂತರದಿಂದ, ಪುರುಷರ ತಂಡ ಸಿಂಗಾಪುರವನ್ನು 3-0 ಅಂತರದಿಂದ ಮಣಿಸಿತು.

ಗುರಿ ತಪ್ಪಿದ ಶೂಟಿಂಗ್‌
10 ಮೀ. ಮಿಶ್ರ ಏರ್‌ ರೈಫ‌ಲ್‌ ಶೂಟಿಂಗ್‌ನಲ್ಲಿ ಭಾರತದ ದಿವ್ಯಾಂಶ್‌ ಪನ್ವಾರ್‌-ರಮಿತಾ ಜಿಂದಾಲ್‌ ಅವರಿಗೆ ಸ್ವಲ್ಪದರಲ್ಲೇ ಕಂಚಿನ ಪದಕದ ಗುರಿ ತಪ್ಪಿತು. ಇಲ್ಲಿ ಕೊರಿಯಾದ ಪಾರ್ಕ್‌ ಹಾಜುನ್‌-ಲೀ ಯುನ್ಸೆವೊ 20-18 ಅಂತರದ ಮೇಲುಗೈ ಸಾಧಿಸಿದರು.

ಈಜು: 5ನೇ ಸ್ಥಾನ
ಪುರುಷರ 4ಗಿ400 ಮೀಟರ್‌ ಈಜು ರಿಲೇಯಲ್ಲಿ ಭಾರತ 5ನೇ ಸ್ಥಾನಕ್ಕೆ ಸಮಾಧಾನಪಟ್ಟಿತು. ಶ್ರೀಹರಿ ನಟರಾಜ್‌, ಲಿಖೀತ್‌ ಸೆಲ್ವರಾಜ್‌, ಸಾಜನ್‌ ಪ್ರಕಾಶ್‌ ಮತ್ತು ತನಿಷ್‌ ಜಾರ್ಜ್‌ ಮ್ಯಾಥ್ಯೂ ಅವರನ್ನೊಳಗೊಂಡ ಭಾರತ ತಂಡ 3:40.84 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next