Advertisement
ಕಲಬುರಗಿ ವೈದ್ಯಕೀಯ ಕಾಲೇಜಿನಲ್ಲಿ ಸಭೆ ಕರೆದು ಎಚ್‌ಕೆಆರ್‌ಡಿಬಿಯಿಂದ 2015-16ನೇ ಸಾಲಿನಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿತ್ತು. ಈ ಪೈಕಿ ಕೆಲವು ಉಪಕರಣಗಳನ್ನು ಇನ್ನು ಸರಬರಾಜು ಮಾಡಿಲ್ಲ. ಅಂತಹ ಉಪಕರಣಗಳ ಪಟ್ಟಿ ಮಾಡಿ ಅವುಗಳನ್ನು ರದ್ದುಗೊಳಿಸಬೇಕು ಎಂದು ಸೂಚಿಸಿದರು.
Related Articles
Advertisement
ಯಾವುದೇ ಬೃಹತ್ ಪ್ರಮಾಣದ ಯೋಜನೆಗಳಿಗೆ ಮಂಜೂರಾತಿ ನೀಡುವ ಮುನ್ನ ಇಲಾಖೆ ಮುಖ್ಯಸ್ಥರಿಂದ ಪ್ರಸ್ತಾವನೆ ಮತ್ತು ವಿವರಣೆ ಪಡೆಯಬೇಕು. ಇದರಿಂದ ಎಚ್‌ಕೆಆರ್‌ಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿಗಳು ಇಲಾಖೆ ಗಮನಕ್ಕೆ ಬಂದು ಕಟ್ಟಡಗಳ ನಿರ್ವಹಣೆ ಹಾಗೂ ಸಿಬ್ಬಂದಿಗಳ ಅವಶ್ಯಕತೆಗಳ ಬಗ್ಗೆ ತಿಳಿಯುತ್ತದೆ ಎಂದು ಹೇಳಿದರು.
ಜಿಮ್ಸ್ ಕಟ್ಟಡಗಳಿಗಾಗಿ ಪ್ರತ್ಯೇಕ ಕೊಳಚೆ ನೀರು ಶುದ್ಧೀಕರಣ ಘಟಕ ರೂಪಿಸುವ ಅವಶ್ಯಕತೆಯಿದೆ. ಜಿಮ್ಸ್ ಆವರಣದ ಕಟ್ಟಡಗಳ ನಿರ್ವಹಣೆ ಅವಶ್ಯಕತೆ ಇದೆ. ಇವುಗಳನ್ನು ಇಲಾಖೆಯಿಂದ ಕೈಗೊಳ್ಳಲು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬೇಕು.
ಕಲಬುರಗಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕಾಗಿ ಎಚ್‌ಕೆಆರ್‌ಡಿಬಿಯಿಂದ 3 ಕೋಟಿ ರೂ. ನೀಡಲಾಗಿದೆ. ಈ ಹಣವು ಖರ್ಚಾಗದೇ ಉಳಿದಿರುವುದರಿಂದ ಇದನ್ನು ಹಿಂದಕ್ಕೆ ಪಡೆದು ಆಸ್ಪತ್ರೆ ನಿರ್ಮಾಣದ ಸಮಯದಲ್ಲಿ ನೀಡಬೇಕು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಖರ್ಚಾಗುವ ಒಟ್ಟು ಮೊತ್ತದಲ್ಲಿ ಎಚ್‌ಕೆಆರ್‌ಡಿಬಿಯಿಂದ 3 ಕೋಟಿ ರೂ. ನೀಡಲಾಗುವುದು ಎಂದು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
2018-19ನೇ ಸಾಲಿನಲ್ಲಿ ಜಿಮ್ಸ್‌ಗೆ ಟ್ರಾಮಾ ಸೆಂಟರ್‌ನಲ್ಲಿ 10 ವೆಂಟಿಲೇಟರ್ ಅಳವಡಿಸಲು ಒಂದು ಕೋಟಿ ರೂ. ಹಾಗೂ ಜಿಲ್ಲಾ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಐಸಿಯು ವಿಭಾಗಕ್ಕೆ ವೈದ್ಯಕೀಯ ಉಪಕರಣಗಳ ಖರೀದಿಗಾಗಿ 9.73 ಕೋಟಿ ರೂ. ನೀಡಲಾಗಿದೆ. ಆದಷ್ಟು ಬೇಗ ಉಪಕರಣಗಳನ್ನು ಖರೀದಿಸಲು ಟೆಂಡರ್ ಕರೆಯಬೇಕು ಎಂದು ತಿಳಿಸಿದರು.
ಟ್ರಾಮಾ ಸೆಂಟರ್‌ನ ಮೂರನೇ ಮಹಡಿಯಲ್ಲಿ 31 ಹಾಸಿಗೆಯ ಬರ್ನ್ಸ್ ವಾರ್ಡ್ ಮತ್ತು 20 ಹಾಸಿಗೆಯ ಪ್ಲಾಸ್ಟಿಕ್ ಸರ್ಜರಿ ವಾರ್ಡ್ ಪ್ರಾರಂಭಿಸಲು ಒಟ್ಟು 13 ಕೋಟಿ ರೂ.ಗಳ ಅವಶ್ಯಕತೆಯಿದೆ. ಈಗಾಗಲೇ ಬರ್ನ್ಸ್ ವಾರ್ಡನಲ್ಲಿ 12 ಹಾಸಿಗೆ ಪ್ರಾರಂಭಿಸಲು ಕೇಂದ್ರ ಸರ್ಕಾರ 4.9 ಕೋಟಿ ರೂ. ನೀಡುತ್ತಿದೆ.
ಉಳಿದ 7.1 ಕೋಟಿ ರೂ.ಗಳ ಪೈಕಿ ಅರ್ಧದಷ್ಟು ಅಂದರೆ 3.55 ಕೋಟಿ ರೂ.ಗಳನ್ನು ಎಚ್‌ಕೆಆರ್‌ಡಿಬಿ ನೀಡಲಿದೆ. ಉಳಿದ ಅರ್ಧದಷ್ಟು ಅನುದಾನವನ್ನು ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದರು.
ಜಿಮ್ಸ್ ನಿರ್ದೇಶಕ ಡಾ| ಉಮೇಶ ಎಸ್.ಆರ್., ವೈದ್ಯಕೀಯ ಅಧಿಧೀಕ್ಷಕ ಡಾ| ಶಿವಕುಮಾರ ಸಿ.ಆರ್., ಜಿಲ್ಲಾ ಶಸ್ತ್ರಜ್ಞ ಡಾ| ಸುರಗಾಳಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಶೇಷ ಅಧಿ ಕಾರಿ ಡಾ| ಸಂದೀಪ, ಜಯದೇವ ಹೃದ್ರೋಗ ಆಸ್ಪತ್ರೆಯ ವ್ಯವಸ್ಥಾಪಕ ಡಾ| ಬಾಬುರಾವ್ ಹುಡಗಿಕರ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮೇಲ್ವಿಚಾರಕ ಡಾ. ದೇಶಪಾಂಡೆ, ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕ ಬಸವರಾಜ, ಬರ್ನ್ಸ್ ವಾರ್ಡ್ ವೈದ್ಯಾಧಿಕಾರಿ ಡಾ| ಶಫಿ ಹಾಜರಿದ್ದರು.
ಕಲಬುರಗಿ ವಿಭಾಗದಲ್ಲಿರುವ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಹಚ್ಚಲು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಿಂದ ಸಂಚಾರಿ ಕ್ಯಾನ್ಸರ್ ತಪಾಸಣೆ ವಾಹನ ಖರೀದಿಸಲು 2 ಕೋಟಿ ರೂ. ನೀಡಲಾಗಿದೆ. ಆದರೆ ಯಾವುದೇ ಪ್ರಗತಿ ಆಗಿಲ್ಲ. 20 ಲಕ್ಷ ರೂ.ಗಳನ್ನು ಬಟ್ಟೆ ಒಗೆಯುವ ಯಂತ್ರಕ್ಕಾಗಿ ನೀಡಲಾಗಿದೆ. ಈ ಅನುದಾನವು ಖರ್ಚಾಗಿಲ್ಲ. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜಯದೇವ ಹೃದ್ರೋಗ ಆಸ್ಪತ್ರೆಯ ಡಾರ್ಮೆಟರಿ ನಿರ್ಮಾಣಕ್ಕೆ 1.75 ಕೋಟಿ ರೂ. ನೀಡಲಾಗಿದ್ದು, ಶೀಘ್ರವೇ ಸ್ಥಳಾವಕಾಶ ಗುರುತಿಸಿ ಕಾಮಗಾರಿ ರಂಭಿಸಬೇಕು.ಸುಬೋಧ ಯಾದವ್, ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ