Advertisement

ಇತಿಹಾಸ ಪ್ರಸಿದ್ಧ ಕೊಕ್ಕಡ ಕೋರಿ ಜಾತ್ರೆ ಇಂದು

10:03 AM Dec 16, 2017 | Team Udayavani |

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಹೋಬಳಿ ಕೇಂದ್ರ ಕೊಕ್ಕಡವು ಬಹು ಪುರಾತನ ವೈದ್ಯನಾಥೇಶ್ವರ, ವಿಷ್ಣು ಮೂರ್ತಿ ದೇವರ ಕಾರಣಿಕದಂತೆಯೇ ರೈತರು ಜಾನುವಾರುಗಳೊಂದಿಗೆ ಹರಕೆ ಒಪ್ಪಿಸುವ ಮೂಲಕ ಆರೋಗ್ಯ ಭಾಗ್ಯವನ್ನು ಬೇಡಿಕೊಳ್ಳುವ ಕೊಕ್ಕಡ ಕೋರಿ ಜಾತ್ರೆಗೂ ಪ್ರಸಿದ್ಧಿ ಪಡೆದಿದೆ. ಡಿ. 16ರಂದು ಕೊಕ್ಕಡದಲ್ಲಿ ಜಾತ್ರೆ ನಡೆಯಲಿದೆ.

Advertisement

ಕ್ಷೇತ್ರಾಧಿಪರಾದ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಆಗಮಿಸಿ, ಪರಿವಾರದವರ ಉಪಸ್ಥಿತಿಯಲ್ಲಿ ಜಾತ್ರೆ ನಡೆಯುತ್ತದೆ. ತಿಂಗಳ ಮೊದಲೇ ಕೊಕ್ಕಡ ಸೀಮೆಯ ಪ್ರತಿ ಮನೆಗೂ ನಲಿಕೆಯವರು ಕೊರಗ ಭೂತದ ವೇಷ ತೊಟ್ಟು ತೆರಳಿ, ಜಾತ್ರೆಗೆ ಆಹ್ವಾನಿಸುತ್ತಾರೆ. ಗದ್ದೆ ಕೋರುವ ಸಲುವಾಗಿ ಜಾನುವಾರುಗಳ ಸಮೇತ ಆಗಮಿಸುವಂತೆ ಬಿನ್ನವಿಸುತ್ತಾರೆ. ಕೊರಗ ವೇಷದ ಜತೆಗೆ ಡೋಲು ಬಾರಿಸುತ್ತಾ ಬೇರೆಯೇ ಒಂದು ತಂಡ ಗ್ರಾಮ ಸಂಚಾರ ಮಾಡುತ್ತದೆ.

ಜಾತ್ರೆಯ ಮುನ್ನಾದಿನ ಸಂಜೆ ಗುತ್ತು, ದೇವಸ್ಥಾನದ ಒಕ್ಕಲಿನವರು, ನಲ್ಕೆಯವರು ಗದ್ದೆಗೆ ತೆರಳಿ, ಹಾಲೆರೆಯುತ್ತಾರೆ. ಮಲೆ ಕುಡಿಯ ಜನಾಂಗದವರು ಗದ್ದೆಯ ಸುತ್ತ ಕೋಲ್ತಿರಿ ಹಚ್ಚಿ ಅಲಂಕರಿಸುತ್ತಾರೆ. ಜಾತ್ರೆಯ ಬೆಳಗ್ಗೆ ಅಲಂಕರಿಸಿದ ಹೋರಿ, ಕೋಣಗಳ ಜತೆಗಳನ್ನು ದೇವಸ್ಥಾನಕ್ಕೆ ಕರೆತರುತ್ತಾರೆ. ಬಳಿಕ ವಾದ್ಯಘೋಷಗಳೊಂದಿಗೆ ದೇವರ ಗದ್ದೆಗೆ ಬರಮಾಡಿಕೊಳ್ಳುತ್ತಾರೆ. ಗುತ್ತಿನ ಹೋರಿಗಳನ್ನು ಮೊದಲು ಇಳಿಸಿ, ಇತರ ಜಾನುವಾರುಗಳನ್ನೂ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ಓಡಿಸುತ್ತಾರೆ. ಆರೋಗ್ಯಕ್ಕಾಗಿ ಹರಕೆ ಹೇಳಿಕೊಂಡವರು ಸೊಪ್ಪಿನ ಕಟ್ಟನ್ನು ತಲೆ ಮೇಲಿಟ್ಟುಕೊಂಡು ಗದ್ದೆಗೆ ಸುತ್ತು ಬರುತ್ತಾರೆ. ಬಳಿಕ ಸೊಪ್ಪನ್ನು ಗದ್ದೆಗೆ ಹಾಕಿ, ಗದ್ದೆಯ ನೀರನ್ನು ತೀರ್ಥದಂತೆ ಸೇವಿಸುತ್ತಾರೆ, ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ.

ಕೋಳಿ ಅಂಕ
ಕೋರಿ ಜಾತ್ರೆ ಮರುದಿನ ಈ ಮಜಲಿನಲ್ಲಿರುವ ಪರಿವಾರ ದೈವಗಳ ಪ್ರೀತ್ಯರ್ಥ ಕೋರಿ ಮಜಲಿನಲ್ಲಿ ಕೋಳಿ ಅಂಕ ನಡೆಯುತ್ತದೆ. ಈ ವೇಳೆ ನೆಲಕ್ಕೆ ಬಿದ್ದ ರಕ್ತ ತರ್ಪಣ ದೈವಗಳಿಗೆ ಸಲ್ಲುತ್ತದೆ ಎನ್ನುವುದು ನಂಬಿಕೆ. ದೇವಸ್ಥಾನ, ಗ್ರಾಮದ ರಕ್ಷಣೆ, ಸಮೃದ್ಧ ಮಳೆ, ಬೆಳೆ ಹಾಗೂ ಆರೋಗ್ಯ ಈ ದೈವಗಳ ಹೊಣೆ. ಹೀಗಾಗಿ, ಸಂಪ್ರದಾಯ ಪಾಲಿಸುತ್ತಾರೆ.

ಮೂರ್ತೆದಾರನ ಸಂಕಲ್ಪ
ಮೊದಲು ದೇವಸ್ಥಾನದ ಎದುರಿನ ಮಡ್ಯೋಳ ಗುಂಡಿಯ ಸಣ್ಣ ಗದ್ದೆಯಲ್ಲೇ ಕೋರಿ ನಡೆಯುತ್ತಿತ್ತು. ಪಕ್ಕದಲ್ಲೇ ತಾಳೆ ಮರದಲ್ಲಿ ಮೂರ್ತೆ ಮಾಡುತ್ತಿದ್ದ ವ್ಯಕ್ತಿ, ದೇವರು ತನ್ನ ವಿಶಾಲ ಗದ್ದೆಗೆ ಬಂದಿದ್ದರೆ ಚೆನ್ನಾಗಿದ್ದು ಎಂದುಕೊಂಡನಂತೆ. ಆತ ಮೂರ್ತೆ ಮುಗಿಸಿ ಶೇಂದಿ ಬಿಂದಿಗೆಯನ್ನು ತಲೆಗಿಟ್ಟು ಭಂಡಾರಿ ಮಜಲು ಸಮೀಪ ಬರುವ ಹೊತ್ತಿಗೆ ವಾದ್ಯಘೋಷ ಕೇಳಿ ಬಂತು. ತಿರುಗಿ ನೋಡಿದರೆ, ದೇವರೇ ಪರಿಹಾರ ಸಮೇತ ಬರುತ್ತಿದ್ದರಂತೆ.

Advertisement

ಗಾಬರಿಯಿಂದ ಓಡುವಾಗ ಶೇಂದಿ ಚೆಲ್ಲಿದ್ದರಿಂದ ಮಡಿವಾಳರು ಹಾಸಿದ ಶುಭ್ರ ಬಟ್ಟೆಯ ಮೇಲೆ ದೇವರು ನಡೆದು ಬಂದು ಕಟ್ಟೆಯ ಮೇಲೆ ಕುಳಿತರಂತೆ. ಈಗಲೂ ದೇವರ ಮೆರವಣಿಗೆ ದಾರಿಯಲ್ಲಿ ಬಿಳಿ ಬಟ್ಟೆ ಹಾಸುವ ಪದ್ಧತಿ ಇದೆ.

ಮೆರವಣಿಗೆ
ನಾಗಬ್ರಹ್ಮ ದೈವಗಳು ಗದ್ದೆಗೆ ಒಂದು ಸುತ್ತು ಹಾಕಿ ವ್ಯವಸ್ಥೆ ಸರಿಯಾಗಿದೆ ಎಂದ ಮೇಲೆ ದೇವಸ್ಥಾನದಿಂದ ವೈದ್ಯನಾಥ, ವಿಷ್ಣುಮೂರ್ತಿ ದೇವರ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರುವ ದೃಶ್ಯವನ್ನು ನೋಡಲು ಸಾವಿ ರಾರು ಜನ ಸೇರುತ್ತಾರೆ. ಗದ್ದೆಯ ಎದು ರಿನ ಸ್ಥಳ ಭಂಡಾರಿ ಮಜಲೆಂದೇ ಪ್ರಸಿದ್ಧಿ. ಕಟ್ಟೆಯಲ್ಲಿ ದೇವರು ಪ್ರತಿಷ್ಠಾಪನೆಯಾದ ಮೇಲೆ ಗದ್ದೆಯ ಮಧ್ಯಭಾಗದಲ್ಲಿ ನಾಗ ಬ್ರಹ್ಮನ ಕುರುಹಾಗಿ ಹೂವಿನಿಂದ ಅಲಂಕರಿಸಿದ ಎತ್ತರದ ತೇರನ್ನು (ಪೂಕರೆ) ನಿಲ್ಲಿಸಿ ದೇವರಿಗೆ ಪೂಜೆ ನಡೆಯುತ್ತದೆ.

ಗುರುಮೂರ್ತಿ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next