Advertisement
ಜಿಲ್ಲಾಧಿಕಾರಿ ಕಚೇರಿಯಿಂದ ಮೀನು ಗಾರಿಕೆ ಬಂದರಿಗೆ ತೆರಳುವ ರಸ್ತೆಯ ಬಲಬದಿಯಲ್ಲಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ಮುಂಭಾಗದಲ್ಲಿನ ಹಿಂದಿನ ಮುನ್ಸಿಪಾಲಿಟಿ ಕಟ್ಟಡವನ್ನು ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಲುಪಾಲಿಕೆ ತೀರ್ಮಾನಿಸಿದೆ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಹಾಗೂ ಪಾಲಿಕೆಯ ಇತರ ಕಾರ್ಯಗಳಿಗೆ ಮೀಸಲಿಡಲು ಉದ್ದೇಶಿಸಲಾಗಿದೆ.
ಪಾಲಿಕೆಯ 45ನೇ ಪೋರ್ಟ್ ವಾರ್ಡ್‌ಗೆ ಸಂಬಂಧಿಸಿ ಸ್ಮಾರ್ಟ್‌ಸಿಟಿಯಿಂದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯು ಪ್ರಗತಿಯಲ್ಲಿದೆ. ಅದರಂತೆ ಬದ್ರಿಯಾ ಶಾಲೆ ರಸ್ತೆ ಜಂಕ್ಷನ್‌ಗೆ ಸಂಪರ್ಕಿಸುವ ಕೆನರಾ ಚೇಂಬರ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ. ಇದರಂತೆ ಪಾಲಿಕೆ ಹಳೇ ಕಚೇರಿ ಕಟ್ಟಡವನ್ನು ನೆಲಸಮಗೊಳಿಸುವಂತೆ ಸ್ಮಾರ್ಟ್‌ಸಿಟಿಯಿಂದ ಮಂಗಳೂರು ಪಾಲಿಕೆಗೆ ಪತ್ರ ಬರೆಯಲಾಗಿತ್ತು. ಸ್ಮಾರ್ಟ್‌ಸಿಟಿಯವರು ಪಾಲಿಕೆಗೆ ಸಲ್ಲಿಸಿರುವ ನಕ್ಷೆಯ ಅನ್ವಯ ಒಟ್ಟು 35.60 ಚ.ಮೀ. (0.88 ಸೆಂಟ್ಸ್)ಜಾಗವು ರಸ್ತೆ ಅಭಿವೃದ್ಧಿಗೆ ಆವಶ್ಯಕವಾಗಿದೆ. ಹೀಗಾಗಿ ಕಟ್ಟಡ ಇರುವ ಒಂದು ಭಾಗವನ್ನು ತೆರವುಗೊಳಿಸಿದರೆ ಉಳಿದ ಭಾಗವು ಅಪಾಯಕ್ಕೆ ಕಾರಣವಾಗಬಹುದು. ಈ ಕಾರಣದಿಂದ ಶಿಥಿಲಾ ವಸ್ಥೆಯಲ್ಲಿರುವ ಹಾಗೂ ಉಪಯೋಗವಿಲ್ಲದ ಕಟ್ಟಡದ ಭಾಗವನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ನೀಡಲು ತೀರ್ಮಾ ನಿಸಲಾಗಿದೆ.
Related Articles
1866ರಲ್ಲಿ ಮಂಗಳೂರು ಮುನ್ಸಿಪಾಲಿಟಿ ಆರಂಭವಾಯಿತು. 1909ರ ವರೆಗೆ ಮಂಗಳೂರು ಮುನ್ಸಿಪಾಲಿಟಿಯ ಕಾರ್ಯಚಟುವಟಿಕೆಗಳು ಹಾಗೂ ಸಭೆಗಳು ಜಿಲ್ಲಾ ಕಲೆಕ್ಟರ್ ಕಚೇರಿ(ಜಿಲ್ಲಾಧಿಕಾರಿ ಕಚೇರಿ)ಯಲ್ಲಿ ನಡೆಯಿತು. ಬಳಿಕ ಮುನ್ಸಿಪಾಲಿಟಿ ಕಚೇರಿಯು ಬಂದರು ರಸ್ತೆಯ ಕಟ್ಟಡಕ್ಕೆ ವರ್ಗಾವಣೆಗೊಂಡಿತು. 1909 ಫೆ. 22ರಿಂದ ಈ ಕಟ್ಟಡದಲ್ಲಿ ಕಾರ್ಯಚಟುವಟಿಕೆಗಳು ನಡೆಯಿತು. ಇದಕ್ಕೂ ಮೊದಲು ಈ ಕಟ್ಟಡವನ್ನು ಈಸ್ಟ್ ಇಂಡಿಯಾ ಕಂಪೆನಿಯವರು ಉಗ್ರಾಣವಾಗಿ ಬಳಸುತ್ತಿದ್ದರು ಎಂದು ಹೇಳಲಾಗಿದೆ. 1979ರಲ್ಲಿ ಮುನ್ಸಿಪಾಲಿಟಿಯನ್ನು ರದ್ದುಗೊಳಿಸಲಾಯಿತು. ಬಳಿಕ ಆಡಳಿತಾಧಿಕಾರಿ (ಅಂದಿನ ಜಿಲ್ಲಾಧಿಕಾರಿ)ಅಧಿಕಾರಕ್ಕೆ ಒಳಪಟ್ಟಿತು. ಬಳಿಕ 1980 ಜೂ. 23ರಂದು ಮಂಗಳೂರು ಪಾಲಿಕೆಯಾಗಿ ಪರಿವರ್ತನೆಗೊಂಡಿತು. 1984ರಲ್ಲಿ ಪಾಲಿಕೆಗೆ ಮೊದಲ ಚುನಾವಣೆ ನಡೆಯಿತು. ಅಲ್ಲಿಂದ 1988ರ ವರೆಗೆ ಬಂದರ್‌ನ ಕಟ್ಟಡವೇ ಪಾಲಿಕೆ ಕಚೇರಿ ಆಯಿತು. ಬಳಿಕ ಲಾಲ್‌ಬಾಗ್‌ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡಕ್ಕೆ ಆಡಳಿತ ವ್ಯವಸ್ಥೆ ವರ್ಗಾವಣೆಯಾಯಿತು ಎಂದು ಮಂಗಳೂರು ದರ್ಶನ ಪುಸ್ತಕದಲ್ಲಿ ಉಲ್ಲೇಖವಿದೆ.
Advertisement
ಶಿಥಿಲಾವಸ್ಥೆಯ ಕಟ್ಟಡ ತೆರವು
ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಬಂದರ್‌ನ ಹಳೆ ಮಂಗಳೂರು ಪಾಲಿಕೆ ಕಚೇರಿಯನ್ನು ತೆರವುಗೊಳಿ ಸಲು ಈಗಾಗಲೇ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಭಾಗದಲ್ಲಿ ಸ್ಮಾರ್ಟ್‌ಸಿಟಿಯಿಂದ ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಕೂಡ ನಡೆಯಲಿವೆ. ಸದ್ಯ ಉಪಯೋಗವಿಲ್ಲದ ಕಾರಣದಿಂದ ಹಳೆ ಕಟ್ಟಡವನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ.
-ಪ್ರೇಮಾನಂದ ಶೆಟ್ಟಿ, ಮೇಯರ್,
ಮಂಗಳೂರು ಪಾಲಿಕೆ