Advertisement

ಡೇಟಾ ಸ್ಟೋರೇಜ್ ಸಿಸ್ಟಮ್ ನ ಕ್ರಾಂತಿಕಾರಿ ಬದಲಾವಣೆಯ ಮಹತ್ವದ ಮಾಹಿತಿ

08:39 AM Jun 30, 2021 | ಮಿಥುನ್ ಪಿಜಿ |

ಇತ್ತೀಚಿನ ದಶಕಗಳಲ್ಲಿ ಡಿಜಿಟಲ್ ಡೇಟಾ ಸ್ಟೋರೆಜ್  ಗಾಗಿ ತಂತ್ರಜ್ಞಾನಗಳು ವ್ಯಾಪಕವಾಗಿ ವಿಸ್ತಾರವಾಗುತ್ತಿದೆ. ಮೊದಮೊದಲು ಕೇವಲ ಕಿಲೋ ಬೈಟ್ಸ್ ನಷ್ಟಿದ್ದ ಸ್ಟೋರೇಜ್ ಸಾಮರ್ಥ್ಯ ಇಂದು ಅನೇಕ ಟೆರಾಬೈಟ್ಸ್ ಗಳಾಗಿ ಮಾರ್ಪಟ್ಟಿದೆ. ಇದೀಗ ಡೇಟಾ ಸಂಗ್ರಹ ಸಿಸ್ಟಮ್ ನಲ್ಲಿ ಆದ ಕ್ರಾಂತಿಕಾರಿ ಬದಲಾವಣೆಯತ್ತ ಗಮನಹರಿಸೋಣ

Advertisement

1) ಪಂಚ್ ಕಾರ್ಡ್ಸ್ (1890): ಯಾಂತ್ರಿಕ ಭಾಷೆಯಲ್ಲಿ ಪಂಚ್ ಕಾರ್ಡ್ ಎಂಬುದು ಮೊದಲ ಡೇಟಾ ಸಂಗ್ರಹ ವಿಧಾನ. ಪಂಚ್ ಕಾರ್ಡ್ ಅನ್ನು 1725ರಲ್ಲಿ ಬಟ್ಟೆ ಮಳಿಗೆಗಳ ಯಂತ್ರಗಳನ್ನು ನಿಯಂತ್ರಿಸಲು ಮತ್ತು ಪಿಯಾನೋ ನುಡಿಸಲು ಅನ್ವೇಷಿಸಲಾಗಿತ್ತು. ಹಾಗಾಗಿ ಡೇಟಾ ಸಂಗ್ರಹಗಿಂತಲೂ ಯಂತ್ರಗಳನ್ನು ನಿಯಂತ್ರಿಸಲು ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ಆದರೇ 1890ರಿಂದ ಇದೇ ಪಂಚ್ ಕಾರ್ಡ್ ಅನ್ನು ಡೇಟಾ ಸಂಗ್ರಹಕ್ಕಾಗಿ ಬಳಸಲಾಯಿತು. ಇದರ ಡೇಟಾ ಸಂಗ್ರಹ ಸಾಮರ್ಥ್ಯ 80 ಪದಗಳು ಮಾತ್ರವಿದ್ದವು. ಅಂದರೇ 0.08kb

2) ಮ್ಯಾಗ್ನೆಟಿಕ್ ಡ್ರಂ ಮೆಮೋರಿ (1932): ಈ ಡೇಟಾ ಸಂಗ್ರಹ ಸಿಸ್ಟಮ್ ಅನ್ನು 1932ರಲ್ಲಿ ಬಳಕೆಗೆ ತಂದಿದ್ದು, ಇದರ ಸಾಮರ್ಥ್ಯ 62.5 ಕಿಲೋಬೈಟ್ಸ್ ನಷ್ಟಿತ್ತು. ಸಿಲಿಂಡರ್ ಒಂದಕ್ಕೆ ಅಯಸ್ಕಾಂತೀಯ ತಂತ್ರಜ್ಞಾನವನ್ನು ಬಳಸಿಕೊಂಡು ಡ್ರಂ ಮೆಮೋರಿಯನ್ನು ಅನ್ವೇಷಿಸಲಾಗಿತ್ತು. ಆರಂಭಿಕ ಹಂತದ ಕಂಪ್ಯೂಟರ್ ನಲ್ಲಿ ಈ ಮೆಮೋರಿಯನ್ನು ಬಳಸಲಾಗುತ್ತಿತ್ತು. ತದನಂತರವೂ ಇದನ್ನು ಸೆಕೆಂಡೆರಿ ಮೆಮೋರಿಯಾಗಿ ಬಳಸಲಾಗುತ್ತಿತ್ತು ಎಂಬುದು ಗಮನಾರ್ಹ.

Advertisement

3) ವಿಲಿಯಮ್ಸ್-ಲಿಲ್ ಬರ್ನ್ ಟ್ಯೂಬ್(1947): ಇದು ರ್ಯಾಂಡಮ್ ಆ್ಯಕ್ಸಸ್ ಮೆಮೋರಿಯ (RAM) ಮೊದಲ ರೂಪ. ಇದರ ಡೇಟಾ ಸಂಗ್ರಹ ಸಾಮರ್ಥ್ಯ 128 ಬೈಟ್ಸ್ ಇದ್ದವು. ಮಾತ್ರವಲ್ಲದೆ ಇದು ಮೊದಲ ವಿದ್ಯನ್ಮಾನ ರೂಪದ ಡೇಟಾ ಸಂಗ್ರಹ ವಿಧಾನವಾಗಿತ್ತು.

4) ಮ್ಯಾಗ್ನೆಟಿಕ್ ಟೇಪ್ ಡ್ರೈವ್ (1951): 1928ರಲ್ಲಿ ಮ್ಯಾಗ್ನೆಟಿಕ್ ಟೇಪ್ ಅನ್ನು ಜರ್ಮನಿಯಲ್ಲಿ ಅವಿಷ್ಕರಿಸಲಾಯಿತು. ಅದಾಗ್ಯೂ ಇದನ್ನು 1951ರಲ್ಲಿ ಡೇಟಾ ಸಂಗ್ರಹಿಸಲಿಕ್ಕಾಗಿ ಬಳಸಿಕೊಳ್ಳಲಾಯಿತು. ಮೋಟಾರ್ಸ್ ಸಹಾಯದಿಂದ ಟೇಪ್ ಗಳು ತಿರುಗುತ್ತಿದ್ದು, ಇದರ ರೀಲ್ ಗಳಲ್ಲಿ ಡೇಟಾ ಸಂಗ್ರಹವಾಗುತ್ತಿದ್ದವು. ಇದನ್ನು ಡೇಟಾ ಸಂಗ್ರಹಕ್ಕೆಂದೇ ಕಂಡುಹಿಡಿಯಲಾಯಿತಾದರೂ ನಂತರದಲ್ಲಿ ಇದನ್ನು ಸಿಸ್ಟಮ್ ಬ್ಯಾಕ್ ಅಪ್, ಡೇಟಾ ಆರ್ಕೈವ್, ಹಾಗೂ ಡೇಟಾ ಎಕ್ಸ್ ಚೇಂಜ್ ಗಾಗಿ ಬಳಸಲಾಯಿತು.

5) ಮ್ಯಾಗ್ನೆಟಿಕ್ ಕೋರ್(1951): ಇದೊಂದು ಅಧುನಿಕ ಮಟ್ಟದ ಮತ್ತು ಪ್ರಮಾಣಿಕೃತ ಸ್ಟೋರೇಜ್ ಡಿವೈಸ್ ಆಗಿತ್ತು. ಈ ಕೋರ್ ಮೆಮೋರಿಯ ತಂತ್ರಜ್ಞಾನವನ್ನು ಬಳಸಿಕೊಂಡು 2Kb ಗಿಂತ ಹೆಚ್ಚಿನ ಡೇಟಾ ಸಂಗ್ರಹಿಸಲಾಯಿತು. ಇದು ಮ್ಯಾಗ್ನೆಟಿಕ್ ರಿಂಗ್ಸ್ ಮತ್ತು ಕೋರ್ ಗಳಲ್ಲಿ ಡೇಟಾ ಸಂಗ್ರಹವಾಗುವ ಮೂಲಕ ಕಾರ್ಯನಿರ್ವಹಿಸುತ್ತಿತ್ತು.

6) ಹಾರ್ಡ್ ಡಿಸ್ಕ್ ಡ್ರೈವ್ (1956). ಐಬಿಎಂ (International Business Machines Corporation ) ಸಂಸ್ಥೆ ಮೊದಲ ಬಾರಿಗೆ 1956ರಲ್ಲಿ ಹಾರ್ಡ್ ಡಿಸ್ಕ್ ಡ್ರೈವ್ ಅನ್ನು ಪರಿಚಯಿಸಿತು. ಇದರ ಸ್ಟೋರೇಜ್ ಸಂಗ್ರಹ ಸಾಮರ್ಥ್ಯ 3.5 ಎಂಬಿ ಯಷ್ಟಿತ್ತು. ಇದೇ ಐಬಿಎಂ 1980ರಲ್ಲಿ ಮೊದಲ ಗಿಗಾ ಬೈಟ್ ಹಾರ್ಡ್ ಡಿಸ್ಕ್ ಅನ್ನು ಪರಿಚಯಿಸಿತು. ಇದು 560 ಪೌಂಡ್ ತೂಕವಿದ್ದು, 2,5ಜಿಬಿ ಡೇಟಾ ಸಂಗ್ರಹ ಸಾಮರ್ಥ್ಯವನ್ನು ಹೊಂದಿತ್ತು. ಇಂದಿಗೂ ಕೂಡ ಹಾರ್ಡ್ ಡಿಸ್ಕ್ ಆನ್ನು ಹೆಚ್ಚಿನ ಡೇಟಾ ಸ್ಟೋರೇಜ್ ಗಾಗಿ ಬಳಸಲಾಗುತ್ತಿದೆ.

7) ಫ್ಲಾಫೀ ಡಿಸ್ಕ್: ಇದನ್ನು ಕೂಡ ಐಬಿಎಂ ಸಂಸ್ಥೆ 1967ರಲ್ಲಿ ಜಾರಿಗೆ ತಂದಿತ್ತು. ಆರಂಭಿಕ ಹಂತದಲ್ಲಿ ಫ್ಲಾಫಿ ಡಿಸ್ಕ್ ಹೊರಕವಚಗಳಿಲ್ಲದ ಮ್ಯಾಗ್ನೆಟಿಕ್ ಡಿಸ್ಕ್ ಆಗಿತ್ತು. ನಂತರದಲ್ಲಿ ಇದೇ ಮ್ಯಾಗ್ನೆಟಿಕ್ ಡಿಸ್ಕ್ ಅನ್ನು ಧೂಳು ಮತ್ತು ಗೀರುಗಳಿಂದ ರಕ್ಷಿಸಲು ಪ್ಲಾಸ್ಟಿಕ್ ಹೊರ ಕವಚವನ್ನು ಬಳಕೆಗೆ ತರಲಾಯಿತು. ಇದರ ಸ್ಟೋರೇಜ್ ಸಾಮರ್ಥ್ಯ 80 ಕೆಬಿ ಯಷ್ಟಿತ್ತು.

ಫ್ಲಾಫಿ ಡಿಸ್ಕ್ ನ ಆಧುನಿಕ ವರ್ಷನ್ ಎಂದರೇ ಜಿಫ್ ಡ್ರೈವ್. ಇದರಲ್ಲಿ 100 ಎಂಬಿಯವರೆಗೂ ಡೇಟಾ ಸಂಗ್ರಹಿಸಬಹುದಾಗಿತ್ತು. ಇದು ಹೆಚ್ಚಿನ ಸಾಮರ್ಥ್ಯದ ರಿಮೂವೆಬಲ್ (Removable) ಫ್ಲಾಫಿ ಡಿಸ್ಕ್ ಆಗಿ 1994 ರಲ್ಲಿ ಬಳಕೆಗೆ ಬಂತು.

8) ಕಾಂಪ್ಯಾಕ್ಟ್ ಡಿಸ್ಕ್(1982): ಇದನ್ನು ಸೋನಿ ಮತ್ತು ಫಿಲಿಫ್ಸ್ ಸಂಸ್ಥೆ ಜೊತೆಗೂಡಿ ಅಭಿವೃದ್ಧಿ ಪಡಿಸಿತು. ಆದರೇ ಮೊದಲು ಇದನ್ನು ಸೌಂಡ್ ರೆಕಾರ್ಡಿಂಗ್ ಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು. ತದನಂತರದಲ್ಲಿ ಡೇಟಾ ಸ್ಟೋರೇಜ್ ಗಾಗಿ, ಅಪ್ ಗ್ರೇಡ್ ಮಾಡಲಾಯಿತು. ಇದರಲ್ಲಿ ಸುಮಾರು 700 ಎಂಬಿ ವರೆಗೂ ಡೇಟಾ ಸಂಗ್ರಹವಾಗುತ್ತಿತ್ತು.

1995ರಲ್ಲಿ ಕಾಂಪ್ಯಾಕ್ಟ್ ಡಿಸ್ಕ್, ಡಿಜಿಟಲ್ ವಿಡಿಯೋ ಡಿಸ್ಕ್(DVD) ಆಗಿ ಬದಲಾವಣೆಯಾಯಿತು. ಮೊಟ್ಟ ಮೊದಲ ಡಿವಿಡಿ ಸುಮಾರು 1.4ಜಿಬಿ ಯವರೆಗೂ ಡೇಟಾ ಸಂಗ್ರಹಿಸುವ ಸಾಮರ್ಥ್ಯ ಪಡೆಯಿತು. ಈ ಡಿವಿಡಿ ಮುಂದಿನ ದಿನಗಳಲ್ಲಿ ಅಂದರೇ 2003ರಲ್ಲಿ ಬ್ಲೂ-ರೇ- ಆಪ್ಟಿಕಲ್ ಡಿಸ್ಕ್ ಆಗಿ ಬದಲಾವಣೆ ಹೊಂದಿತ್ತು. ಆ ಮೂಲಕ 25ಜಿಬಿ ವರೆಗೂ ಡೇಟಾ ಸಂಗ್ರಹಿಸುವ ಸಾಮರ್ಥ್ಯ ಪಡೆಯಿತು. ಮಾತ್ರವಲ್ಲದೆ ಈ ಡಿಸ್ಕ್ ಹೈ ಡೆಫಿನೇಶನ್ 1080p (ಹೆಚ್ಚು ಸ್ಪಷ್ಟವಾದ) ವಿಡಿಯೋಗೂ ಕೂಡ ಬೆಂಬಲ ನೀಡುತ್ತಿತ್ತು.

9) ಎಸ್ ಡಿ ಕಾರ್ಡ್ ಮತ್ತು ಯುಎಸ್ ಬಿ ಫ್ಲ್ಯಾಶ್ ಡ್ರೈವ್: ಎಸ್ ಡಿ ಕಾರ್ಡ್ ಗಳು ಮತ್ತು ಪೆನ್ ಡ್ರೈವ್ ಗಳು ಬಂದಿರುವುದೇ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಲು. ಇದು ಕಡಿಮೆ ದರಕ್ಕೆ ಅತೀ ಹೆಚ್ಚು ಡೇಟಾ ಸಂಗ್ರಹಿಸಲು ನೆರವಾಗುತ್ತಿತ್ತು. ಮಾತ್ರವಲ್ಲದೆ ಡೇಟಾ ಟ್ರಾನ್ಸ್ ಫರ್ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿತ್ತು.

ಫ್ಲ್ಯಾಶ್ ಡ್ರೈವ್ ಹಾಗೂ ಪೆನ್ ಡ್ರೈವ್ ಅತೀ ಸಣ್ಣ ಗಾತ್ರ ಹೊಂದಿದ್ದರಿಂದ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದೆಡೆ ಕೊಂಡೊಯ್ಯಬಹುದಾಗಿತ್ತು. ಇದರ ಸ್ಟೋರೇಜ್ ಸಾಮರ್ಥ್ಯ ಇಂದು ಗಿಗಾಬೈಟ್ಸ್ ಗಿಂತ ಎರಡು ಪಟ್ಟು ಹೆಚ್ಚಾಗಿದೆ.

10) ಕ್ಲೌಡ್ ಡೇಟಾ ಸ್ಟೋರೇಜ್: ಇದೊಂದು ವೆಬ್ ಮೂಲದ ಡೇಟಾ ಸ್ಟೋರೇಜ್ ವಿಧಾನ. ಇದರ ಡೇಟಾ ಸಂಗ್ರಹ ಸಾಮರ್ಥ್ಯ ನೀವೆಷ್ಟು ಹಣ ಪಾವತ್ತಿಸುತ್ತೀರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದಾದರೊಂದು Hosting Company ಈ ಸ್ಟೋರೇಜ್ ಅನ್ನು ನಿಯಂತ್ರಿಸುತ್ತಿರುತ್ತದೆ. ಇದರಲ್ಲಿ ಒಮ್ಮೆ ನಮ್ಮ ಡೇಟಾವನ್ನು ಶೇಖರಿಸಿದರೇ ಜಗತ್ತಿನ ಯಾವ ಕಡೆಯಿಂದಲೂ ಸುಲಭವಾಗಿ ಇಂಟರ್ ನೆಟ್ ಮೂಲಕ ಆ್ಯಕ್ಸಸ್ (ಪ್ರವೇಶ) ಪಡೆಯಬಹುದು.

ಉದಾ: ಗೂಗಲ್ ಡ್ರೈವ್, ಜಿಮೇಲ್ 

ಬರಹ: ಮಿಥುನ್ ಮೊಗೇರ

 

Advertisement

Udayavani is now on Telegram. Click here to join our channel and stay updated with the latest news.

Next