Advertisement

ಇತಿಹಾಸ: ಬ್ರಿಟನ್‌ ಅಭಿವೃದ್ಧಿಯಾಗಿದ್ದೇ ಭಾರತದಿಂದ!

10:26 PM Aug 14, 2020 | mahesh |

ಬ್ರಿಟನ್‌ನಲ್ಲಿ ಯಾವಾಗಲೂ ಒಂದು ಕಥೆಯನ್ನು ಪುನರುಚ್ಚರಿ ಸಲಾಗುತ್ತದೆ- “ಬ್ರಿಟಿಷರು ಭಾರತವನ್ನು ಆಳಿದ್ದರ ಪರಿಣಾಮವು ಎಷ್ಟೇ ಕೆಟ್ಟದಾಗಿ ಇದ್ದಿರಬಹುದಾದರೂ, ಈ ಆಳ್ವಿಕೆಯಿಂದಾಗಿ ಬ್ರಿಟನ್‌ಗೆ ಅಷ್ಟೇನೂ ಆರ್ಥಿಕ ಲಾಭವಾಗಲಿಲ್ಲ. ಬದಲಾಗಿ, ಭಾರತದಲ್ಲಿ ಆಡಳಿತವನ್ನು ನಡೆಸಲು ಬ್ರಿಟನ್‌ಗೆ ಹೆಚ್ಚು ಖರ್ಚಾಯಿತು’ ಎನ್ನುವುದು ಈ ವಾದ! ಹೀಗಿದ್ದರೂ, ಬ್ರಿಟಿಷರು ಭಾರತದಲ್ಲಿ ಅಷ್ಟು ವರ್ಷಗಳು ಉಳಿದುಕೊಂಡಿದ್ದರಲ್ಲ, ಅಂದು, ಬ್ರಿಟಿಷರು ಭಾರತಕ್ಕೆ ಮಾಡಿದ “ಉಪಕಾರ’ ಎಂದೇ ಹೇಳಲಾಗುತ್ತದೆ.

Advertisement

ಆದರೆ 2018ರಲ್ಲಿ ಕೊಲಂಬಿಯಾ ಯೂನಿವರ್ಸಿಟಿ ಪ್ರಸ್‌ ಪ್ರಕಟಿಸಿರುವ ಹೆಸರಾಂತ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್‌ ಅವರ ಅಧ್ಯಯನ ಗ್ರಂಥವೊಂದು ಬ್ರಿಟನ್‌ನ ಈ ಕಥೆಗೆ ಬಹುದೊಡ್ಡ ಹೊಡೆತ ನೀಡುತ್ತದೆ. ಬ್ರಿಟಿಷ್‌ ಆಡಳಿತವು ಭಾರತದಿಂದ ಎಷ್ಟು ಸಂಪತ್ತನ್ನು ದೋಚಿತು ಎನ್ನುವು ದನ್ನು ಆಳವಾದ ಅಧ್ಯಯನದಿಂದ ಲೆಕ್ಕ ಹಾಕಿ¨ªಾರೆ ಪಟ್ನಾಯಕ್‌. ಭಾರತದಲ್ಲಿ ಬ್ರಿಟಿಷರು ಹೇರಿದ ಎರಡು ಶತಮಾನಗಳ ತೆರಿಗೆ ಮತ್ತು ವ್ಯಾಪಾರದ ಅಂಕಿಸಂಖ್ಯೆಗಳನ್ನು ಆಧರಿಸಿದೆ ಈ ಸಂಶೋಧನೆ. ಪಟ್ನಾಯಕ್‌ ಪ್ರಕಾರ, 1765ರಿಂದ 1938ರ ನಡುವೆ ಬ್ರಿಟನ್‌ ಸರಿ ಸುಮಾರು 45 ಟ್ರಿಲಿಯನ್‌ ಡಾಲರ್‌ಗಳಷ್ಟು ಹಣವನ್ನು ಭಾರತದಿಂದ ಕೊಳ್ಳೆ ಹೊಡೆದಿದೆ. ಇದು ದಿಗ್ಭ್ರಮೆಗೊಳಿಸುವಂಥ ಮೊತ್ತವೇ ಸರಿ. ಏಕೆಂದರೆ, ಈ ಮೊತ್ತವು ಈಗಿನ ಯುನೈಟೆಡ್‌ ಕಿಂಗ್‌ಡಮ್‌ನ ವಾರ್ಷಿಕ ಜಿಡಿಪಿಗಿಂತ 17 ಪಟ್ಟು ಅಧಿಕವಾದದ್ದು!

ಇದೆಲ್ಲ ಆಗಿದ್ದು ಹೇಗೆ
ವಸಾಹತುಶಾಹಿ ವ್ಯವಸ್ಥೆಗೂ ಮುಂಚೆ ಬ್ರಿಟಿಷರು ಭಾರತೀಯ ಉತ್ಪಾದಕರಿಂದ ಜವಳಿ ಮತ್ತು ಅಕ್ಕಿಯಂಥ ಪದಾರ್ಥಗಳನ್ನು ಬೆಳ್ಳಿ ನಾಣ್ಯಗಳನ್ನು ಕೊಟ್ಟು ಖರೀದಿಸುತ್ತಿದ್ದರು. ಆದರೆ, 1765ರಲ್ಲಿ, ಅಂದರೆ ಈÓr… ಇಂಡಿಯಾ ಕಂಪೆನಿ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಕೆಲವೇ ಸಮಯದ ನಂತರದಲ್ಲಿ ಚಿತ್ರಣ ಬದಲಾಗಿಬಿಟ್ಟಿತು. ಈÓr… ಇಂಡಿಯಾ ಕಂಪೆನಿ ಭಾರತೀಯ ವ್ಯಾಪಾರದ ಮೇಲೆ ಏಕಸ್ವಾಮ್ಯ ಸ್ಥಾಪಿಸಿಬಿಟ್ಟಿತು.

ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪೆನಿ ಭಾರತೀಯರಿಂದ ತೆರಿಗೆ ಸಂಗ್ರಹಿಸಲು ಆರಂಭಿಸಿತು. ಆದರೆ ಬ್ರಿಟಿಷರು ಈ ತೆರಿಗೆಯಲ್ಲಿನ ಮೂರನೇ ಒಂದರಷ್ಟು ಹಣದಿಂದಲೇ ಭಾರತೀಯ ಸರಕುಗಳನ್ನು ಖರೀದಿಸಲಾರಂಭಿಸಿದರು. ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ, ಬ್ರಿಟಿಷ್‌ ವ್ಯಾಪಾರಿಗಳು ಭಾರತೀಯ ವಸ್ತುಗಳನ್ನು ತಮ್ಮ ಹಣದ ಬದಲು, ಬಡ ಭಾರತೀಯರಿಂದ, ನೇಕಾರರಿಂದ ತೆರಿಗೆಯ ರೂಪದಲ್ಲಿ ಸಂಗ್ರಹಿಸಿದ ಹಣದಿಂದಲೇ ಖರೀದಿಸಿದರು.

ಇದು ಅಗಾಧ ಪ್ರಮಾಣದ ಕಳ್ಳತನವಾಗಿತ್ತು-ಬಹುದೊಡ್ಡಹಗರಣವಾಗಿತ್ತು. ಹೀಗಿದ್ದರೂ ಬಹುತೇಕ ಭಾರತೀಯರಿಗೆ ನಿಜಕ್ಕೂ ಏನಾಗುತ್ತಿದೆ ಎನ್ನುವುದು ತಿಳಿಯುತ್ತಲೇ ಇರಲಿಲ್ಲ. ಏಕೆಂದರೆ, ಅವರಿಂದ ತೆರಿಗೆ ಸಂಗ್ರಹಿಸುತ್ತಿದ್ದ ವ್ಯಕ್ತಿಯೇ ಬೇರೆ, ಅವರಿಂದ ವಸ್ತುಗಳನ್ನು ಖರೀದಿಸುತ್ತಿದ್ದ ವ್ಯಕ್ತಿಯೇ ಬೇರೆ! ಇದರ ಬದಲು ಇವೆರಡೂ ಕೆಲಸಗಳನ್ನು ಒಬ್ಬೇ ವ್ಯಕ್ತಿಯೇನಾದರೂ ಮಾಡಿದ್ದರೆೆ, ಈ ವಂಚನೆಯ ಸುಳಿವು ಭಾರತೀಯರಿಗೆ ಸಿಗುತ್ತಿತ್ತೇನೋ.

Advertisement

ಈ ರೀತಿ ಭಾರತದಿಂದ ಕದ್ದ ವಸ್ತುಗಳಲ್ಲಿ, ಕೆಲವು ಬ್ರಿಟನ್‌ನಲ್ಲಿ ಬಳಕೆಯಾದರೆ, ಉಳಿದದ್ದನ್ನೆಲ್ಲ ಬ್ರಿಟನ್‌ ಅನ್ಯ ದೇಶಗಳಿಗೆ ರಫ್ತು ಮಾಡಿ ಹಣ ಮಾಡಿಕೊಳ್ಳುತ್ತಿತ್ತು! ಈ ಮರು-ರಫ್ತು ವ್ಯವಸ್ಥೆಯಿಂದ ಬರುತ್ತಿದ್ದ ಹಣವನ್ನು ಬ್ರಿಟಿಷರು ತಮ್ಮ ನಾಡಿನ ಕೈಗಾರಿಕೀಕರಣಕ್ಕೆ ಅಗತ್ಯವಿದ್ದ ಕಬ್ಬಿಣ, ಟಾರ್‌, ಟಿಂಬರ್‌ ಮತ್ತು ಇತರೆ ಅಗತ್ಯ ವಸ್ತುಗಳ ಖರೀದಿಗೆ (ಯುರೋಪ್‌ನಿಂದ) ಬಳಸಲಾರಂಭಿಸಿದರು. ಸತ್ಯವೇನೆಂದರೆ, ಬ್ರಿಟನ್‌ನ ಕೈಗಾರಿಕಾ ಕ್ರಾಂತಿಯ ಬಹು ದೊಡ್ಡ ಪಾಲು, ಭಾರತದಿಂದ ಮಾಡಲಾಗುತ್ತಿದ್ದ ವ್ಯವಸ್ಥಿತ ಅವಲಂಬಿಸಿತ್ತು! ಇದು ಸಾಲದೆಂಬಂತೆ, ಭಾರತದ ವಸ್ತುಗಳನ್ನು ಬ್ರಿಟನ್‌, ತಾನು ಖರೀದಿಸಿದ್ದಕ್ಕಿಂತಲೂ ಹೆಚ್ಚಿನ ಮೊತ್ತದಲ್ಲಿ ಬೇರೆ ರಾಷ್ಟ್ರಗಳಿಗೆ ಮಾರಿಯೂ ಲಾಭ ಮಾಡಿಕೊಳ್ಳುತ್ತಿತ್ತು.

1858ರಲ್ಲಿ ಯಾವಾಗ ಬ್ರಿಟಿಷ್‌ ರಾಜ್‌ ಭಾರತವನ್ನುಆಳಲಾರಂಭಿಸಿತೋ, ಆಗ ವಸಾಹತುಶಾಹಿಗಳು ಈ ತೆರಿಗೆ ಮತ್ತು ಖರೀದಿ ವ್ಯವಸ್ಥೆಗೆ ಹೊಸ ಟ್ವಿಸ್ಟ್‌ ಸೇರಿಸಿಬಿಟ್ಟರು. ಈಸ್ಟ್‌ ಇಂಡಿಯಾ ಕಂಪೆನಿಯ ಏಕಸ್ವಾಮ್ಯ ಮುರಿದುಬೀಳುತ್ತಿದ್ದಂತೆಯೇ, ಭಾರತೀಯ ಉತ್ಪಾದಕರಿಗೆ ತಮ್ಮ ಸರಕುಗಳನ್ನು ನೇರವಾಗಿ ಅನ್ಯ ರಾಷ್ಟ್ರಗಳಿಗೆ ಮಾರುವುದಕ್ಕೆ ಅವಕಾಶವೇನೋ ಸಿಕ್ಕಿತು. ಆದರೆ, ಈ ಸರಕುಗಳಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪಾವತಿಯೆಲ್ಲ ಲಂಡನ್‌ಗೆ ತಲುಪುವಂತೆ ನೋಡಿಕೊಂಡಿತು ಬ್ರಿಟಿಷ್‌ ರಾಜ್‌.

ಅದು ಹೇಗೆ ಗೊತ್ತೇ?ಯಾರಾದರೂ ಭಾರತದ ವ್ಯಾಪಾರಿಗಳಿಂದ ಸರಕುಗಳನ್ನು ಖರೀದಿಸಬೇಕಿದ್ದರೆ, ಅವರು ನೇರವಾಗಿ ಪಾವತಿ ಮಾಡಿ ಖರೀದಿಸುವುದಕ್ಕೆ ಅನುಮತಿ ಇರಲಿಲ್ಲ. ಖರೀದಿದಾರರು “ವಿಶೇಷ ಕೌನ್ಸಿಲ್‌ ಬಿಲ್‌’ಗಳನ್ನು ಬಳಸಿಯೇ ಖರೀದಿ ಮಾಡಬೇಕಿತ್ತು. ಲಂಡನ್‌ನಲ್ಲಿ ಮುದ್ರಣವಾಗುತ್ತಿದ್ದ ಈ ವಿಶೇಷ ಕೌನ್ಸಿಲ್‌ ಬಿಲ್‌ಗ‌ಳನ್ನು ಚಿನ್ನ ಅಥವಾ ಬೆಳ್ಳಿ ಕೊಟ್ಟು ಮೊದಲು ಪಡೆಯಬೇಕಿತ್ತು. ನಂತರ ಈ ಬಿಲ್‌ ಅನ್ನು ಅವರು ಭಾರತೀಯ ಉತ್ಪಾದಕರಿಗೆ ಕೊಟ್ಟು, ಸರಕುಗಳನ್ನು ತೆಗೆದುಕೊಳ್ಳುತ್ತಿದ್ದರು. ಇದಾದ ನಂತರ, ಭಾರತೀಯ ಉತ್ಪಾದಕರು, ಈ ಬಿಲ್‌ಗ‌ಳನ್ನು ಸ್ಥಳೀಯ ವಸಾಹತು ಕಚೇರಿಗಳಲ್ಲಿ ಕೊಟ್ಟರೆ, ಅವರಿಗೆ ಹಣ ಸಂದಾಯವಾಗುತ್ತಿತ್ತು. ಆದರೆ, ಆ ಹಣ ಯಾವುದು ಗೊತ್ತೇ? ಮತ್ತದೇ ಭಾರತೀಯರಿಂದಲೇ ಸಂಗ್ರಹಿಸಲಾಗು ತ್ತಿದ್ದ ತೆರಿಗೆಯ ಹಣ! ಅಂದರೆ ಭಾರತೀಯರಿಗೆ ನಿಜವಾಗಿ ಹಣ ಸಂದಾಯವಾಗುತ್ತಲೇ ಇರಲಿಲ್ಲ, ಆಗುತ್ತಿದ್ದದ್ದು ಬರೀ ಮೋಸವಷ್ಟೇ!

ಈ ಭ್ರಷ್ಟ ವ್ಯವಸ್ಥೆಯಿಂದಾಗಿ ಏನಾಗಿ ಬಿಟ್ಟಿತೆಂದರೆ, ಸುಮಾರು 3 ದಶಕ ಗಳವರೆಗೆ ಭಾರತವು ಜಗತ್ತಿನ ಜತೆಗೆ ಪ್ರಭಾವಶಾಲಿ ವ್ಯಾಪಾರ ವಹಿವಾಟನ್ನು ನಡೆಸುತ್ತಿದ್ದರೂ, ಭಾರತದ ಬೊಕ್ಕಸದಲ್ಲಿ ಮಾತ್ರ ಹಣವೇ ಇರಲಿಲ್ಲ, (ಭಾರತ ಹಣವೆಲ್ಲ ಬ್ರಿಟನ್‌ಗೆ ಹೋಗಿ ತಲುಪುತ್ತಿತ್ತಲ್ಲ!) ಭಾರತದಲ್ಲಿ ಈ ಕೃತಕ ಹಣದ ಅಭಾವವನ್ನು ಸೃಷ್ಟಿಸಿದ ಬ್ರಿಟಿಷರು, ತಾವೇ ಭಾರತವನ್ನು ಸಲಹುತ್ತಿದ್ದೇವೆ ಎಂಬ ಕಟ್ಟು ಕಥೆಯನ್ನು ರಚಿಸಿಬಿಟ್ಟರು. ಆದರೆ, ಸತ್ಯ ಇದಕ್ಕೆ ತದ್ವಿರುದ್ಧ ವಾಗಿತ್ತು, ಭಾರತೀಯ ಉತ್ಪಾದಕರಿಗೆ ನ್ಯಾಯ ಯುತವಾಗಿ ಸೇರಬೇಕಿದ್ದ ಬೃಹತ್‌ ಪ್ರಮಾಣದ ಆದಾಯವನ್ನು ಬ್ರಿಟನ್‌ ತಾನು ಕೊಳ್ಳೆಹೊಡೆಯಿತು. ಒಟ್ಟಲ್ಲಿ ಬ್ರಿಟನ್‌ನ ಪಾಲಿಗೆ ಭಾರತ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು.

ದುರಂತವೆಂದರೆ, ಭಾರತದಲ್ಲಿ ಕೃತಕ ಹಣಕಾಸು ಕೊರತೆ ಇದ್ದ ಕಾರಣ, ಸರಕು ಆಮದು ಮಾಡಿಕೊಳ್ಳಲು ಬ್ರಿಟನ್‌ನಿಂದಲೇ ಸಾಲ ಪಡೆಯುವ ಅನಿವಾರ್ಯತೆ ಭಾರತಕ್ಕೆ ಎದುರಾಯಿತು. ಹೀಗಾಗಿ, ಅನಗತ್ಯವಾಗಿ ಇಡೀ ಭಾರತವು ಬ್ರಿಟಿಷರ ಸಾಲದ ಜಾಲಕ್ಕೆ ಸಿಲುಕಿಬಿಟ್ಟಿತು. ಇದರ ಲಾಭ ಪಡೆದ ಬ್ರಿಟಿಷರು, ಭಾರತದ ಮೇಲಿನ ತಮ್ಮ ಹಿಡಿತವನ್ನು ಹೆಚ್ಚು ಮಾಡಿಕೊಂಡುಬಿಟ್ಟರು.

ಈ ಕಪಟ ವ್ಯವಸ್ಥೆಯಿಂದ ದೋಚಿದ ಹಣವನ್ನು ಬ್ರಿಟಿಷ್‌ ಸಾಮ್ರಾಜ್ಯವು ಅನ್ಯ ದೇಶಗಳ ಮೇಲೆ ಯುದ್ಧ ಮಾಡಲು, ಹಿಂಸಾಚಾರವೆಸಗಲು ಬಳಸಿಕೊಂಡಿತು. ಅಲ್ಲದೇ ಭಾರತದ ಹಣವನ್ನು ಬ್ರಿಟನ್‌, ಯುರೋಪ್‌ನಲ್ಲಿನ ತನ್ನ ಬಂಡವಾಳಶಾಹಿತ್ವವನ್ನು ವಿಸ್ತರಿಸುವುದಕ್ಕೂ ಬಳಸಿಕೊಂಡಿತು.

ನೆನಪಿಡಬೇಕಾದ ಸಂಗತಿಯೆಂದರೆ ಭಾರತದಲ್ಲಿನ ಶತಮಾನಗಳ‌ ಬ್ರಿಟಿಷ್‌ ಆಡಳಿತದ ಹೊರತಾಗಿಯೂ ಅಂದು ಭಾರತೀಯರ ತಲಾ ಆದಾಯದಲ್ಲಿ ಒಂದಿ ನಿತೂ ಹೆಚ್ಚಳವಾಗಲೇ ಇಲ್ಲ. 19ನೇ ಶತಮಾನದ ಮೊದಲಾರ್ಧದಲ್ಲಿ, ಅಂದರೆ, ಭಾರñ‌ದ ಮೇಲಿನ ಬ್ರಿಟಿಷರ ಹಿಡಿತ ಅಧಿಕವಿದ್ದ ವೇಳೆಯಲ್ಲಂತೂ, ಭಾರತೀಯರ ಆದಾಯ ಅರ್ಧಕ್ಕೆ ಕುಸಿದುಬಿಟ್ಟಿತು. 1920ರ ವೇಳೆಗೆ ಭಾರತೀಯರ ಸರಾಸರಿ ಜೀವಿತಾವಧಿಯೂ ಅರ್ಧಕ್ಕೆ ಇಳಿಯಿತು. ಬ್ರಿಟಿಷ್‌ ನೀತಿಗಳಿಂದಾಗಿ ಉಂಟಾದ ಆಹಾರ ಕೊರತೆ, ಕ್ಷಾಮದಿಂದಾಗಿ ಅನಗತ್ಯವಾಗಿ ಕೋಟ್ಯಂತರ ಭಾರತೀಯರು ಜೀವ ಕಳೆದುಕೊಂಡರು. ಅದಕ್ಕೇ ಪಟ್ನಾಯಕ್‌ ಹೇಳುತ್ತಾರೆ-ಬ್ರಿಟನ್‌ ಭಾರತ ವನ್ನು ಅಭಿವೃದ್ಧಿ ಮಾಡಲಿಲ್ಲ, ಬ್ರಿಟನ್‌ ಅಭಿವೃದ್ಧಿಯಾಗಿದ್ದೇ ಭಾರತದಿಂದ.

(ಡಾ| ಜೇಸನ್‌ ಹಿಕೆಲ್‌ ಯೂನಿವರ್ಸಿಟಿ ಆಫ್ ಲಂಡನ್‌ನಲ್ಲಿ ಶಿಕ್ಷಣ ತಜ್ಞರಾಗಿದ್ದು, ರಾಯಲ್‌ ಸೊಸೈಟಿ ಆಫ್ ಆರ್ಟ್ಸ್ನ ಫೆಲೋ ಕೂಡ ಆಗಿದ್ದಾರೆ)

ಡಾ. ಜೇಸನ್‌ ಹಿಕೆಲ್‌

Advertisement

Udayavani is now on Telegram. Click here to join our channel and stay updated with the latest news.

Next