ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪತಿಗೆ ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ ಪತ್ನಿ ಕಣ್ಣಿಗೆ ಚಾಕುವಿನಿಂದ ತಿವಿದ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗರಾಜಪುರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಾಯಿತ್ರಿ (29) ಎಂಬುವವರ ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಆಕೆಯ ಪತಿ ಕೆ.ಧರ್ಮ ತಲೆಮರೆಸಿಕೊಂಡಿದ್ದಾನೆ.
ಗಾಯಿತ್ರಿ 12 ವರ್ಷಗಳ ಹಿಂದೆ ಅತ್ತೆಯ ಮಗ ಧರ್ಮನನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಲಿಂಗರಾಜಪುರಂನಲ್ಲಿ ಕುಟುಂಬ ವಾಸವಾಗಿದೆ. ಧರ್ಮ, ಪೇಟಿಂಗ್ ಕೆಲಸ ಮಾಡುತಿದ್ದ. ಗಾಯಿತ್ರಿ ಮನೆ ಕೆಲಸಕ್ಕೆ ಹೋಗುತ್ತಿದ್ದರು. ಕುಡಿತ, ಸಿಗರೇಟ್ ಚಟ ಅಂಟಿಸಿಕೊಂಡಿದ್ದ ಧರ್ಮ, ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಮನೆಯಲ್ಲೇ ಸಿಗರೇಟು ಸೇದುತ್ತಿದ್ದ. ಈ ಬಗ್ಗೆ ಸಾಕಷ್ಟು ಬಾರಿ ಬುದ್ಧಿ ಹೇಳಿದರೂ ಬಿಟ್ಟಿರಲಿಲ್ಲ.
ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲವಾದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಈ ನಡುವೆ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಕಿಡ್ನಿ ವೈಫಲ್ಯವಾಗಿದ್ದು, ಮದ್ಯ ಸೇವಿಸಬಾರದು, ಸಿಗರೇಟ್ ಸೇದಬಾರದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಆರೋಪಿ, ಪತ್ನಿ ಕೆಲಸಕ್ಕೆ ಹೋದಾಗ ಕದ್ದುಮುಚ್ಚಿ ಸಿಗರೇಟು ಸೇದುತ್ತಿದ್ದ.
ಫೆ.18ರಂದು ಸಂಜೆ 7 ಗಂಟೆ ಸುಮಾರಿಗೆ ಕೆಲಸದಿಂದ ಬಂದ ಗಾಯಿತ್ರಿ, ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಪತಿ ಧರ್ಮ ಹೊರಗಡೆ ಸಿಗರೇಟು ಸೇದುತ್ತಿದ್ದ. ಇದನ್ನು ನೋಡಿದ ಗಾಯಿತ್ರಿ ವೈದ್ಯರು ಎಚ್ಚರಿಕೆ ನೀಡಿದರೂ ಸಿಗರೇಟು ಸೇದುತ್ತಿದ್ದೀರಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಆಕೆಯ ಎಡಗಣ್ಣಿಗೆ ತಿವಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಗಾಯಿತ್ರಿ ಜೋರಾಗಿ ಕೂಗಿಕೊಂಡಿದ್ದಾರೆ. ಮನೆ ಸಮೀಪದಲ್ಲೇ ಇದ್ದ ತಂದೆ, ನೆರವಿಗೆ ಧಾವಿಸಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ದೃಷ್ಟಿ ಬರುವ ಸಾಧ್ಯತೆ ಕಡಿಮೆ: ಘಟನೆ ಕುರಿತು
“ಉದಯವಾಣಿ’ ಜತೆ ಮಾತನಾಡಿದ ಗಾಯಿತ್ರಿ, ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಪತಿ ಚಾಕುವಿನಿಂದ ಹಲ್ಲೆ ಕಣ್ಣಿಗೆ ತಿವಿದರು. ಯಾವ ಕಾರಣಕ್ಕೆ ಜೇಬಿನಲ್ಲಿ ಚಾಕು ಇಟ್ಟುಕೊಂಡಿದ್ದರು ಎಂದು ಗೊತ್ತಿಲ್ಲ.
ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದೇನೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಹುತೇಕ ಕಣ್ಣು ಹಾನಿಗೀಡಾಗಿದ್ದು, ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದಿದ್ದಾರೆ. “ದೇವರ ಆಶೀರ್ವಾದದಿಂದ ನನ್ನ ಕಣ್ಣಿಗೆ ಯಾವುದೇ ಹಾನಿಯಾಗಬಾರದು. ನನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಭಾವುಕರಾದರು.