ಉಡುಪಿ : ಬಡಗಿನ ಏರು ಶ್ರುತಿ ಮದ್ದಳೆಯ ಹರಿಕಾರ, ಶತಾಯುಷಿ ಹಿರಿಯಡಕ ಗೋಪಾಲ ರಾವ್ ಅವರು ಶನಿವಾರ ರಾತ್ರಿ ಓಂತಿಬೆಟ್ಟುವಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಎರಡು ದಿನಗಳಿಂದ ಅಸ್ವಸ್ಥರಾಗಿದ್ದ ಅವರು, ಶನಿವಾರ ಬೆಳಗ್ಗೆ ಕೂಡ ಮನೆಮಂದಿಯೊಂದಿಗೆ ಮಾತನಾಡಿದ್ದರು. ರಾತ್ರಿ 8.30ರ ವೇಳೆಗೆ ಕೊನೆಯುಸಿರೆಳೆದರು.
1919ರಲ್ಲಿ ಹಿರಿಯಡ್ಕ ಶೇಷಗಿರಿ ರಾವ್ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾಗಿ ಜನಿಸಿದ ಗೋಪಾಲ ರಾವ್, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಡುಪಿಯಲ್ಲಿ ಆರಂಭಿಸಿದರು.
ಮದ್ದಳೆ ವಾದನ ಮತ್ತು ಕುಣಿತವನ್ನು ಹಿರಿಯಡ್ಕದ ಗುರಿಕಾರರಾದ ನಾಗಪ್ಪ ಕಮತರಿಂದ ಪಡೆದು ನಂತರ 1934 ರಲ್ಲಿ ವಿಠಲ ಹೆಗ್ಡೆಯವರ ನೇತೃತ್ವದಲ್ಲಿ ಹಿರಿಯಡ್ಕ ಮೇಳವನ್ನು ಸೇರಿದರು.
ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗೋಪಾಲ್ ರಾವ್ ಅವರು ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವದರಲ್ಲಿ ಖ್ಯಾತನಾಮರಾಗಿದ್ದರು.
ಗೋಪಾಲ್ ರಾವ್ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿ, ಏರು ಮದ್ದಳೆಯ ಅನ್ವೇಷಕ ಎಂಬ ಖ್ಯಾತಿಯ ಕಲಾವಿದ ಎಂದು ಚಿರಪರಿಚಿತರಾಗಿದ್ದರು.
ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೇರಿದಂತೆ ಹಲವು ಪ್ರಶಸ್ತಿ ಇವರನ್ನ ಅರಸಿ ಬಂದಿದ್ದವು.
ಅವರು ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ರವಿವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.