Advertisement

ಹಿರ್ಗಾನ ಕುಕ್ಕುಂದೂರು ಕೂಡುರಸ್ತೆ: ತ್ಯಾಜ್ಯ ರಾಶಿ

06:30 AM Jun 12, 2018 | Team Udayavani |

ಅಜೆಕಾರು: ಹಿರ್ಗಾನ ಗ್ರಾ.ಪಂ. ಹಳೆ ಅಂಚೆ ಕಚೇರಿಯಿಂದ ಕುಕ್ಕುಂದೂರು ಬ್ರಹ್ಮ ಮುಗೇರ್ಕಳ ಸಂಪರ್ಕಿಸುವ ಮೇಲ್ಜಡ್ಡು ರಸ್ತೆ ಹಾಗೂ ಹಿರ್ಗಾನದಿಂದ ಕುಕ್ಕುಂದೂರಿನ ಅಯ್ಯಪ್ಪನಗರ ಸಂಪರ್ಕಿಸುವ ರಸ್ತೆಯ ಅಂಚಿನಲ್ಲಿ ಕಸ ಹಾಗೂ ಪ್ಲಾಸ್ಟಿಕ್‌ ಒಳಗೊಂಡ ತ್ಯಾಜ್ಯರಾಶಿ ಬಿದ್ದಿದೆ.

Advertisement

ಮೇಲ್ಜಡ್ಡು ರಸ್ತೆಯು ಹಿರ್ಗಾನ ಹಾಗೂ ಕುಕ್ಕುಂದೂರು ಗ್ರಾ. ಪಂ. ವ್ಯಾಪ್ತಿಯ ಗಡಿಭಾಗವಾಗಿದ್ದು ರಸ್ತೆಯ ಒಂದು ಪಾರ್ಶ್ವವು ಹಿರ್ಗಾನ  ಗ್ರಾ.ಪಂ. ವ್ಯಾಪ್ತಿಯಾದರೆ ರಸ್ತೆಯ ಇನ್ನೊಂದು ಪಾರ್ಶ್ವವು ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಗೆ ಬರುತ್ತದೆ.

ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಗೆ ಬರುವ ರಸ್ತೆಯ ಅಂಚಿನಲ್ಲಿ ತ್ಯಾಜ್ಯಗಳ ರಾಶಿಯೇ ಇದ್ದು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ.

ಉಡುಪಿ-ಕಾರ್ಕಳ ಹೆದ್ದಾರಿಯಿಂದ ಮೇಲ್ಜಡ್ಡು ಮಾರ್ಗವಾಗಿ ಹಿರ್ಗಾನ ಸಂಪರ್ಕಿಸುವ ಈ ಕೂಡುರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಮೂಲಕ ತ್ಯಾಜ್ಯವನ್ನು ತಂದು ಎಸೆಯ ಲಾಗುತ್ತಿದ್ದು ಈ ಬಗ್ಗೆ ಕುಕ್ಕುಂದೂರು ಗ್ರಾ.ಪಂ. ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಳಲು.

ಈ ತ್ಯಾಜ್ಯದಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು ಮಳೆಗಾಲದಲ್ಲಿ ಈ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

Advertisement

ಮದ್ಯದ ಬಾಟಲ್‌ಗ‌ಳು, ಬಟ್ಟೆಗಳು, ಪ್ಲಾಸ್ಟಿಕ್‌, ಕೊಳೆತ ಹಣ್ಣು ಹಂಪಲು, ಮಾಂಸದ ತ್ಯಾಜ್ಯಗಳಿದ್ದು ಪರಿಸರ ದುರ್ವಾಸನೆಯಿಂದ ಕೂಡಿದ್ದು ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಓಡಾಡುತ್ತಿದ್ದು, ಸಂಚಾರವೇ ಯಾತನೆದಾಯಕವಾಗಿದೆ ಹೊರಗಿನ ವ್ಯಕ್ತಿಗಳು ತ್ಯಾಜ್ಯವನ್ನು ಎಸೆಯುತ್ತಿದ್ದು ಇವರನ್ನು ಹಿಡಿಯುವ ಸಲುವಾಗಿ ಸ್ಥಳೀಯರು ಪ್ರಯತ್ನ ಪಟ್ಟಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸಬೇಕೆನ್ನುವ ಬೇಡಿಕೆಯಿದೆ.

ರಸ್ತೆಯಂಚಿನಲ್ಲಿ ತ್ಯಾಜ್ಯ ಮಣ್ಣಿನರಾಶಿ
ಒಂದೆಡೆ ತ್ಯಾಜ್ಯದ್ದೇ ರಾಶಿಯಾದರೆ ಇನ್ನೊಂದೆಡೆ ಡಾಮಾರು ರಸ್ತೆಗೆ ತಾಗಿಕೊಂಡೇ ತ್ಯಾಜ್ಯದಿಂದ ಕೂಡಿದ ಮಣ್ಣಿನ ರಾಶಿಯನ್ನು ವಾಹನಗಳ ಮೂಲಕ ತಂದುಸುರಿದಿದ್ದು ಇದು ಪಾದಚಾರಿಗಳಿಗೆ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಕಡಿದಾದ ರಸ್ತೆಯಾಗಿರುವುದರಿಂದ ಎರಡೂ ಕಡೆಯಿಂದ ವಾಹನಗಳು ಬರುವಾಗ ಸಂಚರಿಸಲು ತಡೆ ಉಂಟಾಗುತ್ತಿದೆ.ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಿಬೇಕಾಗಿದೆ ಎಂಬುವುದು ಸ್ಥಳೀಯರ ಆಶಯ.

ಗಮನಕ್ಕೆ ತರುವೆ
ಈ ತ್ಯಾಜ್ಯಗಳ ರಾಶಿಯಿಂದ ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನತೆಗೆ ಹಾಗೂ ಸ್ಥಳೀಯರಿಗೆ ಸಂಕಷ್ಟ ಎದುರಾಗಿರುವುದು ಗಮನಕ್ಕೆ ಬಂದಿದೆ. ಈ ತ್ಯಾಜ್ಯರಾಶಿಯು ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವುದರಿಂದ ತ್ಯಾಜ್ಯ ವಿಲೇವಾರಿಯ ಬಗ್ಗೆ ಅಲ್ಲಿನ ಆಡಳಿತದ ಗಮನಕ್ಕೆ ತರಲಾಗುವುದು.
– ಸಂತೊಷ್‌ ಕುಮಾರ್‌ ಶೆಟ್ಟಿ, 
ಹಿರ್ಗಾನ ಗ್ರಾ.ಪಂ. ಅಧ್ಯಕ್ಷರು

ಸ್ವಚ್ಛತೆಗೆ ಆದ್ಯತೆ ನೀಡಿ
ತ್ಯಾಜ್ಯಗಳ ರಾಶಿಯಿಂದ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ನಿತ್ಯ ಸಂಚರಿಸುವ ಪಾದಚಾರಿಗಳಿಗೆ ದುರ್ವಾಸನೆಯಿಂದ ಕೂಡಿದ ಪರಿಸರದಿಂದಾಗಿ ಸಂಚರಿಸಲು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.
– ರಮ್ಯಾ ಕುಕ್ಕುಂದೂರು, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next