ದೇವನಹಳ್ಳಿ: ತಾಲೂಕಿನ ಕೊಯಿರ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯಕ್ಕೆ ಕಳೆದ ಒಂದು ತಿಂಗಳಿನಿಂದ ವೈದ್ಯರಿಲ್ಲ. ಕೊಯಿರ ಪಶು ಚಿಕಿತ್ಸಾಲಯ ವ್ಯಾಪ್ತಿಗೆ 15 ಹಳ್ಳಿಗಳು ಸಂಪರ್ಕದಲ್ಲಿದ್ದು, ಕಳೆದ ಫೆಬ್ರವರಿಯಲ್ಲಿ ವೈದ್ಯ ಡಾ.ಅಭಿಷೇಕ್ ವರ್ಗಾವಣೆ ನಂತರ ಈ ಆಸ್ಪತ್ರೆಗೆ ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ.
ಕಳೆದ ಒಂದೂವರೆ ತಿಂಗಳಿನಿಂದ ಇಲ್ಲಿನ ಸ್ಥಳೀಯರಿಗೆ ವೈದ್ಯರಿಲ್ಲದೆ ತುರ್ತು ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟ ಪಶು ಇಲಾಖಾಧಿಕಾರಿಗಳು ಕೊಯಿರ ಗ್ರಾಮದಲ್ಲಿನ ಪಶು ಚಿಕಿತ್ಸಾಲಯಕ್ಕೆ ವೈದ್ಯರನ್ನು ನೇಮಿಸಿ, ಈ ಭಾಗದ ರೈತಾಪಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
8,673 ಜಾನುವಾರು: ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಟ್ಟು 8,673 ಜಾನುವಾರುಗಳಿದ್ದು, ಕೊಯಿರ, ರಾಮನಾಥಪುರ, ಅರುವನಹಳ್ಳಿ, ರಬ್ಬನಹಳ್ಳಿ, ಮನಗೊಂಡನಹಳ್ಳಿ, ಮಾಯಸಂದ್ರ, ಚಿಕ್ಕಗೊಲ್ಲಹಳ್ಳಿ, ಕೆ.ಹೊಸೂರು, ಜ್ಯೋತಿಪುರ, ಚಿಕ್ಕೋ ಬದೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಬೈರದೇನಹಳ್ಳಿà, ಬೀರಸಂದ್ರ, ಆಲೂರು, ದುದ್ದನಹಳ್ಳಿ ಗ್ರಾಮಗಳಲ್ಲಿ 2,853 ದನ, 301 ಎಮ್ಮೆ, 2,174 ಕುರಿ, 1,208 ಮೇಕೆ, 27 ಹಂದಿ, 2,110 ಕೋಳಿ ಸಾಕಾಣಿಕೆ ನಡೆತ್ತಿದ್ದು, ಈ ಹಿಂದೆ ವೈದ್ಯರು ಗ್ರಾಮಗಳಿಂದ ಮೊಬೈಲ್ ಕರೆ ಸ್ವೀಕರಿಸಿ, ಗ್ರಾಮಕ್ಕೆ ತೆರಳಿ ಸ್ಥಳದಲ್ಲಿಯೇ ಚಿಕಿತ್ಸೆ ಅಥವಾ ಇತರೆ ಸಲಹೆ ಸೂಚನೆ ನೀಡುತ್ತಿದ್ದರು.
ಪ್ರಥಮ ಚಿಕಿತ್ಸೆ: ಸರ್ಕಾರದಿಂದ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಇಲ್ಲಿಗೆ ಬರುವ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದೇವೆ. ತುರ್ತು ಇದ್ದಲ್ಲಿ ಕುಂದಾಣ ಪಶು ಆಸ್ಪತ್ರೆಯ ವೈದ್ಯರ ಗಮನಕ್ಕೆ ತರಲಾಗುತ್ತದೆ. ಅವರು ಬಂದು ನೋಡುತ್ತಾರೆ. ಪ್ರಸ್ತುತ ನಿಯೋಜನೆ ಮೇರೆಗೆ ಕುಂದಾಣ ವೈದ್ಯರೇ ನೋಡುತ್ತಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.