ಕಾಸು ಕೊಟ್ಟರೆ ಸಾಕು, ಯಾವ ಕೆಲಸವನ್ನಾದರೂ ಮಾಡಿ ಮುಗಿಸುವ ಖಡಕ್ ಹುಡುಗ ಆತ. ನಿರ್ದಯಿ, ಆದರೆ ಪ್ರಾಮಾಣಿಕ. ಆತನನ್ನು ನೀವು ಸುಪಾರಿ ಕಿಲ್ಲರ್ ಎಂದು ಕರೆಯಬಹುದು. ಇಂತಹ ರಗಡ್ ರಾಣಾನಿಗೆ ಆತನ ಬಾಸ್ ಒಂದು ಡೀಲ್ ಕೊಡುತ್ತಾನೆ. ನವಜಾತ ಶಿಶುವೊಂದನ್ನು ಕಿಡ್ನಾéಪ್ ಮಾಡಿ, ಸಾಯಿಸುವುದೇ ಆ ಡೀಲ್. ರಾಣಾ ಒಪ್ಪಿಕೊಂಡು ಹೊರಡುತ್ತಾನೆ. ಈ ಮಧ್ಯೆ ಆತನಿಗೊಂದು “ಜ್ಞಾನೋದಯ’ವಾಗುತ್ತದೆ. ಅಲ್ಲಿಂದ ಹೊಸ ಅಖಾಡ, ಆ್ಯಕ್ಷನ್ ಅಬ್ಬರ. ಇಷ್ಟು ಹೇಳಿದ ಮೇಲೆ ಇದೊಂದು ಆ್ಯಕ್ಷನ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದು ಹೇಗೆ ಸಸ್ಪೆನ್-ಥ್ರಿಲ್ಲರ್ ಸಿನಿಮಾವೋ ಹಾಗೇ, ಆ್ಯಕ್ಷನ್, ಸೆಂಟಿಮೆಂಟ್ ಕೂಡಾ. ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಮಾಸ್ ಪ್ರೇಕ್ಷಕರ ಮೈ ನವಿರೇಳಿಸುವ ದೃಶ್ಯಗಳಿವೆ. ಚೇಸಿಂಗ್ ಸೀನ್‌ಗಳಿವೆ. ಅದಕ್ಕೆ ಬೇಕಾದ ಅದ್ಧೂರಿತನ ಈ ಸಿನಿಮಾದಲ್ಲಿದೆ. ಇದರ ನಡುವೆಯೇ ಹೊಸ ಹೊಸ ಟ್ವಿಸ್ಟ್‌ಗಳ ಮೂಲಕ ಸಿನಿಮಾದ ಕಥೆಯನ್ನು “ಜೀವಂತ’ ವಾಗಿಟ್ಟಿದ್ದಾರೆ.
ನವಜಾತ ಶಿಶುವನ್ನು ಕೊಲ್ಲಲು ಸುಪಾರಿ ಕೊಡುವ ಆ ವ್ಯಕ್ತಿ ಯಾರು, ಅದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆ ಕಾಡುವ ಮೂಲಕ ಸಿನಿಮಾ ಕುತೂಹಲದೊಂದಿಗೆ ಸಾಗುತ್ತದೆ. ಮೊದಲೇ ಹೇಳಿದಂತೆ ಈ ಕಥೆಯಲ್ಲಿ ಮಗು ಕೂಡಾ ಪ್ರಮುಖ ಪಾತ್ರವಾಗಿದೆ. ಸಿನಿಮಾ ನಿಮಗೆ ಇಷ್ಟವಾಗುವುದು ಅದು ಸಾಗುವ ರೀತಿಯಿಂದ. ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಎರಡನ್ನೂ ನಿರ್ದೇಶಕರು ನೀಟಾಗಿ ಕಟ್ಟಿಕೊಡುವ ಮೂಲಕ ಭರವಸೆ ಮೂಡಿಸಿದ್ದಾರೆ.
ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳು ಸಿನಿಮಾದಲ್ಲಿ ಇರುವುದು ಈ ಸಿನಿಮಾದ ಪ್ಲಸ್. ಸಿನಿಮಾ ಮುಗಿದ ಮೇಲೂ ಒಂದಷ್ಟು ಪ್ರಶ್ನೆಗಳು ಕಾಡುತ್ತವೆ. ಆದರೆ, ಒಂದು ಕಮರ್ಷಿಯಲ್ ಸಿನಿಮಾವಾಗಿ “ಹಿರಣ್ಯ’ವನ್ನು ಅವರು ಕಟ್ಟಿಕೊಟ್ಟ ರೀತಿ ಇಷ್ಟವಾಗುತ್ತದೆ.
ನಾಯಕ ರಾಜವರ್ಧನ್ ಮತ್ತೂಮ್ಮೆ ತಾನು ಆ್ಯಕ್ಷನ್ ಹೀರೋ ಆಗಬಲ್ಲೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ನಟಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ನಾಯಕಿಯಾಗಿ ರಿಹಾನಾ ನಟಿಸಿದ್ದಾರೆ. ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.